ಚಾಮರಾಜನಗರ: ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಇದೇ 22ರಂದು ನಡೆಯಲಿರುವುದರಿಂದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ವಿವಿಧ ಕೋಮುಗಳ ಮುಖಂಡರ ಸೌಹಾರ್ದ ಸಭೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡರು, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವಿದೆ. ಅನೇಕ ವರ್ಷಗಳಿಂದ ಸೌಹಾರ್ದಯುತವಾಗಿ ನಡೆದುಕೊಂಡು ಬಂದಿದ್ದು, ಹೀಗೆಯೇ ಮುಂದುವರೆಯಲಿ’ ಎಂದು ಆಶಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ‘ಗಣಪತಿ ವಿಸರ್ಜನೆ ಶಾಂತಿಯುತವಾಗಿ ನೆರವೇರಲಿ. ವಿಸರ್ಜನೆ ಸಂದರ್ಭದಲ್ಲಿ ಸರ್ಕಾರಿ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. 22ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಈಗಾಗಲೇ ಅಧಿಕಾರಿಗಳಿಗೂ ಅನುಸರಿಸಬೇಕಿರುವ ಕರ್ತವ್ಯಗಳ ಬಗ್ಗೆ ತಿಳಿಸಲಾಗಿದೆ. ಶಾಂತಿಯುತವಾಗಿ ಕಾರ್ಯಕ್ರಮ ನಡೆಯಲು ಎಲ್ಲರೂ ಸಹಕರಿಸಬೇಕು’ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಮಾತನಾಡಿ. ‘ಈಗಾಗಲೇ ಇಲಾಖೆ ವತಿಯಿಂದ ಎಲ್ಲ ಮುಖಂಡರ ಸಭೆ ಕರೆದು ಸುಧೀರ್ಘವಾಗಿ ಚರ್ಚಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು ಎಂದು ಮನವಿಯನ್ನೂ ಮಾಡಲಾಗಿದೆ. ಎಲ್ಲರೂ ಸಹಮತದಿಂದ ಅಭಿಪ್ರಾಯ, ಸಲಹೆ ನೀಡಿದ್ದಾರೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್, ತಹಶೀಲ್ದಾರರಾದ ಬಸವರಾಜು, ರವಿಶಂಕರ್, ಮಂಜುಳಾ, ಆನಂದಪ್ಪನಾಯಕ, ಜಯಪ್ರಕಾಶ್, ವಿದ್ಯಾಗಣಪತಿ ಮಂಡಳಿ ಅಧ್ಯಕ್ಷ ಮನೋಜ್ ಪಟೇಲ್, ಮುಖಂಡರಾದ ಸುರೇಶ್ ನಾಯಕ, ಶಿವು ವಿರಾಟ್, ಎಸ್. ಅಶ್ವಿನ್, ಸಿ.ಎಸ್. ಮಹೇಶ್, ಮಹಮ್ಮದ್ ಜಿಯಾವುಲ್ಲಾ, ಮಹಮ್ಮದ್ ಖಲೀಂಉಲ್ಲಾ, ಅಕ್ರಂ ಪಾಷ, ವಸೀಂ ಪಾಷ, ಅಪ್ಸರ್ ಪಾಷ, ನಾಗರಾಜು, ಅಯೂಬ್ ಖಾನ್, ಖಲೀಂ ಉಲ್ಲಾ, ಅಂತೋಣಿಯಪ್ಪ, ಅಬ್ದುಲ್ ಖಲೀಲ್, ಇತರೆ ಮುಖಂಡರು, ಅಧಿಕಾರಿಗಳು ಇದ್ದರು.
ಮದ್ಯ ಮಾರಾಟ ನಿಷೇಧ
ಗಣಪತಿ ಮೂರ್ತಿ ವಿಸರ್ಜನಾ ಕಾರ್ಯಕ್ರಮದ ಅಂಗವಾಗಿ ಚಾಮರಾಜನಗರ ಹಾಗೂ ನಗರದ 10 ಕಿ.ಮೀ ಸುತ್ತಲಿನ ವ್ಯಾಪ್ತಿಯಲ್ಲಿ 21ರ ಸಂಜೆ 5 ಗಂಟೆಯಿಂದ 23ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ ವ್ಯಾಪ್ತಿ ಹಾಗೂ ನಗರದ 10 ಕಿ.ಮೀ ಸುತ್ತಲ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು (ಕೆ.ಎಸ್.ಬಿ.ಸಿ.ಎಲ್ ಬಿಟ್ಟು) ನಿಗದಿತ ಅವಧಿಯಲ್ಲಿ ಮುಚ್ಚುವಂತೆ ಆದೇಶಿಸಲಾಗಿದೆ. ಈ ಸಮಯದಲ್ಲಿ ಮದ್ಯ ಮಾರಾಟ, ಅಕ್ರಮ ಸಾಗಾಣಿಕೆ, ದಾಸ್ತಾನು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.