ಗುಂಡ್ಲುಪೇಟೆ: ಐದು ವರ್ಷಗಳ ಬಳಿಕ ಆಲೂಗಡ್ಡೆ ಬೆಳೆಗೆ ಉತ್ತಮ ಬೆಲೆ ಸಿಕ್ಕಿದ್ದು ಆಲೂಗಡ್ಡೆ ಬೆಳೆಗಾರರ ಮುಖದಲ್ಲಿ ಮಂದಾಹಾಸ ಮೂಡಿದೆ. ಈ ಬಾರಿ ಆಲೂಗಡೆಗೆ ಕ್ವಿಂಟಲ್‌ಗೆ ₹4 ಸಾವಿರದಿಂದ ₹4,500 ಬೆಲೆ ಇರುವುದರಿಂದ ಬೆಳೆಗಾರರು ಒಂದಷ್ಟು ಲಾಭ ಕಾಣುವ ನಿರೀಕ್ಷೆಯಲ್ಲಿದ್ದಾರೆ.
ತಾಲ್ಲೂಕಿನಲ್ಲಿ ಬೆಳೆಯುವ ತರಕಾರಿ ಬೆಳೆಗಳಲ್ಲಿ ಆಲೂಗಡ್ಡೆ ಪ್ರಮುಖ ಬೆಳೆಯಾಗಿದ್ದು 800 ರಿಂದ 1,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಹಂಗಳ, ತೆರಕಣಾಂಬಿ ಹಾಗೂ ಕಸಬಾ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಆಲೂಗಡ್ಡೆ ಬೆಳೆಯುತ್ತಾರೆ. ಹಂಗಳ ಹೋಬಳಿಯಲ್ಲಿ ಹೆಚ್ಚು ಮಳೆಯಾಗುವುದರಿಂದ ಶೇ80ರಷ್ಟು ಬೆಳೆಗಾರು ಆಲೂಗಡ್ಡೆ ಬಿತ್ತನೆಗೆ ಒಲವು ತೋರುತ್ತಾರೆ. ಇದಲ್ಲದೆ ಗೋಪಾಲಪುರ, ದೇವರಹಳ್ಳಿ, ಕಡಬೂರು, ವಡ್ಡಗೆರೆ, ಶಿವಪುರ, ಮಲ್ಲಯ್ಯನಪುರ, ಕಲ್ಲಿಗೌಡನಹಳ್ಳಿ, ಮೇಲುಕಾಮನಹಳ್ಳಿ ಸೇರಿದಂತೆ ಕಾಡಂಚಿನ ಮಂಗಲ ವ್ಯಾಪ್ತಿಯಲ್ಲಿ ಆಲೂಗಡ್ಡೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ.
ಕಳೆದ ವರ್ಷ ಬಿತ್ತನೆ ಆಲೂಗಡ್ಡೆಗೆ ₹500 ರಿಂದ ₹700ರವರೆಗೆ ದರ ಇತ್ತು. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆ ಬೆಳೆಯಲು ರೈತರು ಆಸಕ್ತಿ ತೋರಿದ್ದರು. ಮಳೆ ಕೊರತೆ ಹಾಗೂ ಅಂಗಮಾರಿ ರೋಗ ಬಾಧೆಯ ಕಾರಣ ಆಲೂಗಡ್ಡೆಗೆ ಉತ್ತಮ ಬೆಲೆ ಸಿಗಲಿಲ್ಲ. ಕೆಜಿಗೆ ಗರಿಷ್ಠ ₹ 25 ದೊರೆತಿತ್ತು. ಆದರೆ ಈ ಬಾರಿ ಬಿತ್ತನೆ ಆಲೂಗಡ್ಡೆ ದರ 1,500 ಮೇಲ್ಪಟ್ಟು ಇತ್ತು. ದುಬಾರಿ ದರದ ಕಾರಣ ಹೆಚ್ಚಿನ ರೈತರು ಬಿತ್ತನೆ ಮಾಡಿರಲಿಲ್ಲ. ಹಾಗಾಗಿ ದರ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಆಲೂಗಡ್ಡೆ ಬೆಳೆಗೆ ಕೂಲಿ ಆಳುಗಳು ಹೆಚ್ಚಿನ ಪ್ರಮಾಣದಲ್ಲಿ ಅವಶ್ಯ ಇರುವುದಿಲ್ಲ. ಬಿತ್ತನೆ ಸಮಯದಲ್ಲಿ ಬಿಟ್ಟರೆ, ಕೀಳುವ ಸಮಯದಲ್ಲಿ ಆಳುಗಳು ಅವಶ್ಯಕತೆ ಇರುತ್ತದೆ. ಕೂಲಿಯಾಳುಗಳ ಬೇಡಿಕೆ ಕಡಿಮೆ ಇರುವುದರಿಂದ, ಕಳೆಯ ಸಮಸ್ಯೆಯೂ ಹೆಚ್ಚು ಬಾಧಿಸದಿರುವುದರಿಂದ ಹೆಚ್ಚಿನ ರೈತರು ಆಲೂಗಡ್ಡೆ ಬೆಳೆಯಲು ಒಲವು ತೋರುತ್ತಾರೆ ಎನ್ನುತ್ತಾರೆ ಮಂಗಲ ಗ್ರಾಮದ ಉಮೇಶ್ ತಿಳಿಸಿದರು.
ಈ ಭಾರಿ ಅತಿಯಾದ ಮಳೆಯಿಂದ ಹೆಚ್ಚಿನ ಆಲೂಗಡ್ಡೆ ಇಳುವರಿ ಬಂದಿಲ್ಲ. ಬೆಲೆ ಉತ್ತಮವಾಗಿರುವುದರಿಂದ ಸ್ವಲ್ಪ ಲಾಭ ಕಾಣುವಂತಾಗಿದೆ ಆಲೂಗಡ್ಡೆ ಮಾರಾಟಕ್ಕೆ ತಮಿಳುನಾಡಿನ ಮೇಟ್ಟುಪಾಳ್ಯಂ ಪ್ರಮುಖ ಮಾರುಕಟ್ಟೆಯಾಗಿದ್ದು ಇಲ್ಲಿನ ದಲ್ಲಾಳಿಗಳು ಐದಾರು ರೂಪಾಯಿ ಲಾಭ ಇಟ್ಟುಕೊಂಡು ಖರೀದಿಸಿ ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ.
1200 ಹೆಕ್ಟೇರ್‌ನಲ್ಲಿ ಆಲೂಗಡ್ಡೆ
ಈ ಬಾರಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 800 ರಿಂದ1200 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ಜೂನ್‌ನಿಂದ ಡಿಸೆಂಬರ್‌ವರೆಗೆ ಎರಡು ಹಂತದಲ್ಲಿ ಆಲೂಗಡ್ಡೆ ಬೆಳೆಯುತ್ತಾರೆ. ಈ ಬಾರಿ ರೋಗ ಕಡಿಮೆ ಇದ್ದು ದರವೂ ಹೆಚ್ಚಾಗಿರುವುದು ರೈತರಿಗೆ ಲಾಭದಾಯಕವಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.