ಹನೂರು: ಸತ್ಯಮಂಗಲ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮದ ಹನೂರು ಬಫರ್ ವಲಯದ ಅಜ್ಜೀಪುರ ಗ್ರಾಮದಲ್ಲಿ ಆರಂಭವಾಗಿರುವ ಸಫಾರಿಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅ.2ರಂದು ನೂತನ ಸಫಾರಿಗೆ ಅರಣ್ಯ ಇಲಾಕೆ ಚಾಲನೆ ನೀಡಿತ್ತು. ಪ್ರಾಕೃತಿಕ ಸೌಂದರ್ಯವನ್ನು ಸವಿಯುವುದರ ಜೊತೆಗೆ ವನ್ಯಜೀವಿಗಳನ್ನು ನೇರವಾಗಿ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಸಕ್ತಿ ತೋರುತ್ತಿದ್ದು ಸಫಾರಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮಲೆ ಮಹದೇಶ್ವರ ವನ್ಯಧಾಮವು ಹಲವು ಅಪರೂಪದ ವನ್ಯಪ್ರಾಣಿಗಳಿಗೆ ಹಾಗೂ ಜೀವ ವೈವಿಧ್ಯಗಳಿಗೆ ಆಶ್ರಯತಾಣವಾಗಿದೆ. ಹುಲಿ, ಚಿರತೆ, ಆನೆ, ಕರಿಚಿರತೆ, ಕೊಂಡು ಕುರಿ, ಕಡವೆ, ರಣಹದ್ದುಗಳು ಸೇರಿದಂತೆ ವಿವಿಧ ಜಾತಿಯ ಪ್ರಾಣಿಗಳು, ಪಕ್ಷಿಸಂಕಲಗಳು ಇಲ್ಲಿ ನೆಲೆಸಿವೆ. ಸಫಾರಿಯಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಹಾಗೂ ವನ್ಯಜೀವಿಗಳನ್ನು ತೀರಾ ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರಿಗೆ ಸಿಗಲಿದೆ.
ಸಫಾರಿಗೆ ಹೋಗುತ್ತಿರುವರಿಗೆ ಅಲ್ಲಲ್ಲಿ ಪ್ರಾಣಿಗಳು ದರ್ಶನ ಕೊಡುತ್ತಿದ್ದು ನಿರಾಶೆ ಮೂಡಿಸುತ್ತಿಲ್ಲ. ಮಳೆಯಿಂದಾಗಿ ಅರಣ್ಯವೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು ಕಾನನದ ಸೌಂದರ್ಯ ಇಮ್ಮಡಿಯಾಗಿದೆ. ತಂಪಾದ ವಾತಾವರಣದ ಮಧ್ಯೆ ಅರಣ್ಯದ ಸೌಂದರ್ಯವನ್ನು ಸವಿಯುತ್ತಾ ಆಗಾಗ ದಿಢೀರ್ ಎದುರಾಗುವ ಪ್ರಾಣಿಗಳನ್ನು ಕಣ್ತುಂಬಿಕೊಳ್ಳುವುದು ಪ್ರವಾಸಿಗರಿಗೆ ಮುದ ನೀಡುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಈಗಾಗಲೇ ಮಲೆಮಹದೇಶ್ವರ ವನ್ಯಧಾಮದ ಪಿ.ಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಸಫಾರಿ ಆರಂಭವಾಗಿದ್ದು ಅಲ್ಲಿಯೂ ಉತ್ತಮ ಸ್ಪಂದನೆ ಇದೆ. 2023ರ ಡಿ.2ರಂದು ಹನೂರು ಶಾಸಕ ಎಂ.ಆರ್ ಮಂಜುನಾಥ್ ಸಫಾರಿಗೆ ಚಾಲನೆ ನೀಡಿದ್ದರು. ಅಜ್ಜೀಪುರ ವನ್ಯಧಾಮದಲ್ಲಿ ಆರಂಭವಾಗಿರುವುದು ಎರಡನೇ ಸಫಾರಿ ಕೇಂದ್ರವಾಗಿದ್ದು ಪ್ರವಾಸಿಗರು ಆಸಕ್ತಿ ತೋರುತ್ತಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುತ್ತದೆ. ವಾರಾಂತ್ಯದ ದಿನಗಳು, ರಜೆ, ಹಾಗೂ ಹಬ್ಬ ಹರಿದಿನದಂತಹ ವಿಶೇಷ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪ್ರತಿನಿತ್ಯವೂ ಇಲ್ಲಿ ಸಫಾರಿ ಮಾಡಲು ಅವಕಾಶ ನೀಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಅಜ್ಜೀಪುರ ಸಫಾರಿ ಕೇಂದ್ರ ಆರಂಭವಾಗಿ 11 ದಿನಗಳು ಕಳೆದಿದ್ದು ಈ ಅವಧಿಯಲ್ಲಿ 300ಕ್ಕೂ ಹೆಚ್ಚು ಪ್ರವಾಸಿಗರು ಬೇಟಿ ನೀಡಿದ್ದು, 50,000ದಷ್ಟು ಆದಾಯ ಸಂಗ್ರಹವಾಗಿದೆ. ಜಿಲ್ಲೆಯವರು ಮಾತ್ರವಲ್ಲದೆ, ಬೆಂಗಳೂರು, ಮೈಸೂರು, ತಮಿಳುನಾಡು, ಮಂಡ್ಯ ಜಿಲ್ಲೆಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. 18 ಕಿ.ಮೀ ವ್ಯಾಪ್ತಿಯಲ್ಲಿರುವ ಸಫಾರಿಯಲ್ಲಿ ಪ್ರವಾಸಿಗರಿಗೆ ವಿಭಿನ್ನ ಅನುಭವ ಸಿಗಲಿದೆ. ಅರಣ್ಯ ಪ್ರದೇಶ ಸಮತಟ್ಟಾಗಿರುವುದರಿಂದ ಪ್ರಾಣಿಗಳು ಹೆಚ್ಚಾಗಿ ಸಫಾರಿ ವಲದಯಲ್ಲಿ ಕಾಣಿಸಿಕೊಳ್ಳುತ್ತವೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸಫಾರಿ ಅಭಿವೃದ್ಧಿಯಾಗಲಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.
ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ಸಫಾರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 6 ರಿಂದ 7:30 ಮತ್ತು 7:30 ರಿಂದ 9, ಸಂಜೆ 4 ರಿಂದ 5:30, 5 ರಿಂದ 6:30 ವರೆಗೆ ಸಫಾರಿ ಮಾಡಬಹುದಾಗಿದೆ. ವಯಸ್ಕರಿಗೆ 400 ಹಾಗೂ ಮಕ್ಕಳಿಗೆ ₹200 ಹಾಗೂ ವಾಹನ ಶುಲ್ಕ ₹100 ನಿಗದಿ ಪಡಿಸಲಾಗಿದೆ. ಈಗ ಆರಂಭಿಸಿರುವ ಸಫಾರಿಯನ್ನು ಉಡುತೊರೆ ಜಲಾಶಯದ ಹಿನ್ನೀರಿಗೂ ವಿಸ್ತರಿಸಿದರೆ ಪ್ರವಾಸಿಗರು ಮತ್ತಷ್ಟು ಅರಣ್ಯ ಹಾಗೂ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಸಫಾರಿ ಪ್ರಾರಂಭ ಮಾಡಿದ ಬಳಿಕ ಸಾಲು ಸಾಲು ರಜೆಗಳು ಬಂದಿದ್ದರಿಂದ ಪ್ರವಾಸಿಗರ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಸದ್ಯಕ್ಕೆ ಒಂದು ವಾಹನ ಮಾತ್ರ ಸಫಾರಿಗೆ ಬಿಡಲಾಗಿದೆ. ಕಬಿನಿ ಇಲಾಖೆ ಪ್ರವಾಸಿ ಮಂದಿರವನ್ನು ಸಫಾರಿ ಕೇಂದ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಫಾರಿ ಕೇಂದ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. –ಡಾ.ಜಿ.ಸಂತೋಷ್ ಕುಮಾರ್ ಡಿಸಿಎಫ್ ಮಲೆಮಹದೇಶ್ವರ ವನ್ಯಧಾಮ
ಮಾದಪ್ಪನ ಭಕ್ತರಿಗೆ ಅನುಕೂಲ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಪ್ರವಾಸಿಗರು ದೇವರ ದರ್ಶನದ ಜೊತೆಗೆ ಕಾಡಿನ ಸೌಂದರ್ಯ ಹಾಗೂ ವನ್ಯಜೀವಿಗಳ ವೀಕ್ಷಣೆ ಮಾಡಲು ಅಜ್ಜೀಪುರ ಸಫಾರಿ ಅನುವು ಮಾಡಿಕೊಡಲಿದೆ. ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯೆ ಸಫಾರಿ ಕೇಂದ್ರ ಇರುವುದರಿಂದ ಭಕ್ತರಿಗೆ ಧಾರ್ಮಿಕ ಅನುಭೂತಿಯ ಜತೆಗೆ ಪ್ರಾಕೃತಿಕ ಸೌಂದರ್ಯ ಸವಿಯುವ ಅವಕಾಶವೂ ಸಿಕ್ಕಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.