ADVERTISEMENT

ನರಹಂತಕನ ಹುಟ್ಟೂರಲ್ಲಿ ಕನ್ನಡ ಶಾಲೆ: ಮಕ್ಕಳ ಬೇಡಿಕೆ ಈಡೇರಿಸಿದ ಶಿಕ್ಷಣ ಇಲಾಖೆ

ಸಚಿವ ಸುರೇಶ್‌ ಕುಮಾರ್‌ ಅವರ ಗಮನಸೆಳೆದಿದ್ದ ‘ಪ್ರಜಾವಾಣಿ’, ಮಕ್ಕಳು, ಗ್ರಾಮಸ್ಥರಿಂದಲೂ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 4:01 IST
Last Updated 4 ಡಿಸೆಂಬರ್ 2019, 4:01 IST
ಗೋಪಿನಾಥಂ ಸರ್ಕಾರಿ ಶಾಲೆ
ಗೋಪಿನಾಥಂ ಸರ್ಕಾರಿ ಶಾಲೆ   

ಚಾಮರಾಜನಗರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಕಳೆದ ತಿಂಗಳ 19ರಂದು ವಾಸ್ತವ್ಯ ಹೂಡಿದ್ದ ಹನೂರು ತಾಲ್ಲೂಕಿನ ಗೋಪಿನಾಥಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 4ನೇ ತರಗತಿವರೆಗೆ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.

ನರಹಂತಕ ವೀರಪ್ಪನ್ ಜನಸಿದ್ದ ಕುಗ್ರಾಮದಲ್ಲಿರುವ ಈ ಶಾಲೆಯಲ್ಲಿ 1ರಿಂದ 4ನೇ ತರಗತಿವರೆಗೆ ತಮಿಳು ಮಾಧ್ಯಮ ಶಾಲೆ ಇತ್ತು. ಕನ್ನಡ ಮಾಧ್ಯಮ ಶಾಲೆ ಆರಂಭಿಸಬೇಕು ಎಂಬುದು ಸ್ಥಳೀಯರ ದಶಕದ ಬೇಡಿಕೆಯಾಗಿತ್ತು. ಸಚಿವರ ವಾಸ್ತವ್ಯದ ದಿನದಂದು ‘ಪ್ರಜಾವಾಣಿ’ ಕೂಡ ವಿಶೇಷ ವರದಿಯ ಮೂಲಕ ಗಮನಸೆಳೆಯುವ ಪ್ರಯತ್ನ ಮಾಡಿತ್ತು.

ನವೆಂಬರ್‌ 19ರ ರಾತ್ರಿ ಮಕ್ಕಳು ಹಾಗೂ ಪೋಷಕರು ತಮ್ಮ ಬೇಡಿಕೆ ಬಗ್ಗೆ ಸಚಿವ ಸುರೇಶ್‌ ಕುಮಾರ್‌ ಅವರ ಮುಂದೆ ಪ್ರಸ್ತಾಪಿಸಿದ್ದರು. ಸಂವಾದದಲ್ಲಿ ಮಕ್ಕಳು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಾಲೆ ಇಲ್ಲದಿರುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದ್ದರು. ಆದ್ಯತೆ ಮೇರೆಗೆ ಶಾಲೆ ಆರಂಭಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಸಚಿವರು, ಮರುದಿನ ಮುಂದಿನ ವರ್ಷದಿಂದಲೇ ಆರಂಭಿಸಲಾಗುವುದು ಎಂದು ಘೋಷಿಸಿದ್ದರು.

ADVERTISEMENT

ಇದೀಗ ಸಚಿವರ ಸೂಚನೆಯಂತೆ 2020–21ನೇ ಸಾಲಿನಿಂದ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಲು ಅನುಮತಿ ನೀಡಿ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಶಾಲೆಯಲ್ಲಿ ಮೂಲ ಸೌಕರ್ಯಗಳೊಂದಿಗೆ ಅಗತ್ಯಕ್ಕೆ ತಕ್ಕಂತೆ ತರಗತಿ ಕೊಠಡಿಗಳನ್ನು ವ್ಯವಸ್ಥೆಗೊಳಿಸಿಕೊಳ್ಳಬೇಕು. ಶಾಲೆಯಲ್ಲಿ ಈಗಾಗಲೇ ನಡೆಯುತ್ತಿರುವ ತರಗತಿಗಳ ಕೊಠಡಿ, ಕಟ್ಟಡ ಮೂಲಸೌಕರ್ಯಗಳಲ್ಲಿಯೇ ಕನ್ನಡ ಮಾಧ್ಯಮ ತರಗತಿಗಳ ವಿಭಾಗಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳನ್ನು ತನ್ನ ಕುಕೃತ್ಯಗಳಿಂದ ಎರಡು ದಶಕಗಳ ಕಾಲ ನಡುಗಿಸಿದ್ದ ಕುಖ್ಯಾತ ಕಾಡುಗಳ್ಳ ಹಾಗೂ ನರಹಂತಕ ವೀರಪ್ಪನ್ 1952ರಲ್ಲಿ ಗೋಪಿನಾಥಂ ಎಂಬ ಕುಗ್ರಾಮದಲ್ಲಿ ಜನಿಸಿದ್ದ.

ದಂತಕ್ಕಾಗಿ ಸಾಕಷ್ಟು ಆನೆಗಳುನ್ನು ಕೊಂದಿದ್ದ ವೀರಪ್ಪನ್, ತನ್ನ ವಿರುದ್ಧ ಕಾರ್ಯಾಚರಣೆಯಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಕಾರಿಗಳು, ಸಿಬ್ಬಂದಿಯನ್ನು ಕೂಡ ಹತ್ಯೆ ಮಾಡಿದ್ದ. 2004ರ ಅಕ್ಟೋಬರ್‌ 18ರಂದು ರಾಜ್ಯದ ಗಡಿ ಭಾಗವಾದ ಪಾಪರುಪತ್ತಿ ಎಂಬಲ್ಲಿ ಯೋಧರ ಗುಂಡಿಗೆ ಬಲಿಯಾಗಿದ್ದ. ರಾಜ್ಯದ 120ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದ ನರಹಂತಕ ವೀರಪ್ಪನ್ ಮಲೆಮಹದೇಶ್ವರ ಬೆಟ್ಟದ ತಪ್ಪಲು ಮತ್ತು ಗೋಪಿನಾಥಂ, ಆಲಂಬಾಡಿ ಜನರು ಭಯದಿಂದ ಬದುಕುವ ಸ್ಥಿತಿಯನ್ನು ಉಂಟುಮಾಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.