ADVERTISEMENT

ದೀಪಾವಳಿಗೆ ಸೆಗಣಿಯಲ್ಲಿ ಸೆಣಸಾಡುವ ಗೋರೆ ಹಬ್ಬ! ಚಾಮರಾಜನಗರ ಗಡಿಯಲ್ಲೊಂದು ಆಚರಣೆ

ತಮಿಳುನಾಡಿನ ತಾಳವಾಡಿಯ ಗುಮಟಾಪುರದಲ್ಲಿ ನಡೆದ ವಿಶಿಷ್ಟ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 15:49 IST
Last Updated 3 ನವೆಂಬರ್ 2024, 15:49 IST
<div class="paragraphs"><p>ಗೋರೆ ಹಬ್ಬ</p></div>

ಗೋರೆ ಹಬ್ಬ

   

ಚಾಮರಾಜನಗರ: ಜಿಲ್ಲೆಯ ಗಡಿಯಲ್ಲಿರುವ ತಮಿಳುನಾಡಿನ ತಾಳವಾಡಿ ಸಮೀಪದ ಗುಮಟಾಪುರದಲ್ಲಿ ಭಾನುವಾರ ಸೆಗಣಿಯಿಂದ ಎರಚಾಡಿಕೊಳ್ಳುವ ವಿಶಿಷ್ಟ ‘ಗೋರೆಹಬ್ಬ’ ನಡೆಯಿತು.

ಗ್ರಾಮದೇವರ ಅಣತಿಯಂತೆ ಸೆಗಣಿಯಲ್ಲಿ ಸೆಣಸಾಡುವ ಸಂಪ್ರದಾಯ ಹಿಂದಿನಿಂದಲೂ ಗ್ರಾಮದಲ್ಲಿ ರೂಢಿಯಲ್ಲಿದ್ದು ಅದರಂತೆ ದೀಪಾವಳಿ ಹಬ್ಬದ ಮರುದಿನ ಇಡೀ ಗ್ರಾಮವೇ ಭಾಗವಹಿಸಿ ಸಂಭ್ರಮಿಸಿತು. ಗ್ರಾಮಸ್ಥರು ಸೆಗಣಿಯ ಉಂಡೆಗಳನ್ನು ಒಬ್ಬರ ಮೇಲೊಬ್ಬರು ತೂರುತ್ತ ಹಬ್ಬ ಆಚರಿಸಿದರು.

ADVERTISEMENT

ಪೂರ್ವ ತಯಾರಿ

ಗೋರೆಹಬ್ಬಕ್ಕೆ ಚಾಲನೆ ನೀಡುವ ಮುನ್ನ ಕೆಲವು ವಿಧಿ ವಿಧಾನಗಳು ನಡೆದವು. ಬೆಳಿಗ್ಗೆ ಯುವಕರು ಹಾಗೂ ಮಕ್ಕಳ ಗುಂಪು ಗ್ರಾಮದೆಲ್ಲೆಡೆ ಸಂಚರಿಸಿ ಕೊಟ್ಟಿಗೆಯಿಂದ ಸೆಗಣಿಯನ್ನು ಸಂಗ್ರಹಿಸಿ ಗ್ರಾಮದ ಬೀರಪ್ಪ ದೇವಸ್ಥಾನದ ಹಿಂಭಾಗ ತಂದು ದೊಡ್ಡ ರಾಶಿ ಹಾಕಿತು. ಬಳಿಕ ಗ್ರಾಮದ ಪ್ರತಿಮನೆಯಿಂದಲೂ ಎಣ್ಣೆ ಸಂಗ್ರಹಿಸಿ ದೇವಸ್ಥಾನಕ್ಕೆ ಅರ್ಪಿಸಲಾಯಿತು.

ನಂತರ ಗ್ರಾಮಸ್ಥರು ಗ್ರಾಮದ ಹೊರವಲಯದಲ್ಲಿರುವ ಕಾರಪ್ಪ ದೇವಸ್ಥಾನಕ್ಕೆ ತೆರಳಿ ಸೊಂಟಕ್ಕೆ ಎಲೆಬಳ್ಳಿಗಳನ್ನು ಸುತ್ತಿಕೊಂಡು ‘ಚಾಡಿಕೋರ’ ಎಂದು ಗುರುತಿಸಲಾಗಿದ್ದ ವ್ಯಕ್ತಿಗೆ ಹುಲ್ಲಿನ ಮೀಸೆ ಅಂಟಿಸಿ ಕತ್ತೆಯ ಮೇಲೆ ಕೂರಿಸಿ ಮೆರವಣಿಗೆಯಲ್ಲಿ ಬೀರಪ್ಪನ ದೇವಸ್ಥಾನದವರೆಗೂ ಕರೆತಂದರು. ಈ ವೇಳೆ ನಡೆದ ವಿನೋದಾವಳಿಗಳು ಗಮನ ಸೆಳೆದವು.

ಮೆರವಣಿಗೆ ದೇವಸ್ಥಾನ ತಲುಪಿದ ಬಳಿಕ ಪೂಜಾರಿಯು ದೇವರಿಗೆ ಪೂಜೆಸಲ್ಲಿಸಿ ಕತ್ತಿ ಹಿಡಿದು ಆವೇಶ ಭರಿತವಾಗಿ ಕುಣಿದು ಭಕ್ತಿ ಪ್ರದರ್ಶಿಸಿದರು. ಬಳಿಕ ಗ್ರಾಮಸ್ಥರೆಲ್ಲರೂ ಸೆಗಣಿ ಉಂಡೆಗಳನ್ನು ಎರಚಾಡಿಕೊಂಡು ಜೋರಾಗಿ ಕೂಗು ಹಾಕುತ್ತಾ ಹಬ್ಬ ಆಚರಿಸಿದರು.

ಕೊನೆಯಲ್ಲಿ ಪೊರಕೆ ಕಡ್ಡಿಗಳಿಂದ ತಯಾರಿಸಲಾಗಿದ್ದ ಚಾಡಿಕೋರನ ಬೊಂಬೆಯನ್ನು ಗ್ರಾಮದ ಹೊರಗೆ ಸುಟ್ಟು ಗೋರೆಹಬ್ಬಕ್ಕೆ ತೆರೆ ಎಳೆಯಲಾಯಿತು. ಈ ಬಾರಿ ಹಬ್ಬದಲ್ಲಿ ಜರ್ಮನಿ ದೇಶದ ಕೆಲವರು ಭಾಗವಹಿಸಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.