ಚಾಮರಾಜನಗರ: ಜಿಲ್ಲೆಯಾದ್ಯಂತ ಶುಕ್ರವಾರ ಗೌರಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಸಂಪ್ರದಾಯದಂತೆ ಸಾರ್ವನಿಕರು ಮನೆಯಲ್ಲಿ ಗೌರಿ ಕಳಶ ಪ್ರತಿಷ್ಠಾಪಿಸಿ ಇಷ್ಟಾರ್ಥ ಸಿದ್ಧಿಗೆ ಪೂಜೆ ಸಲ್ಲಿಸಿದರು. ನಗರದ ಹಲವು ದೇವಸ್ಥಾನಗಳಲ್ಲಿ ಗೌರಿ ಮೂರ್ತಿ ಇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗೃಹಿಣಿಯರು ಗೌರಿಗೆ ಬಾಗಿನ ಅರ್ಪಿಸಿದರು.
ಮದುವೆಯಾಗಿ ಗಂಡನ ಮನೆ ಸೇರಿದ್ದ ಮನೆ ಮಗಳಿಗೆ ತವರಿಗೆ ಆಹ್ವಾನಿಸಿ ಹೊಸ ಬಟ್ಟೆ, ನಗದು ಸಹಿತ ಬಾಗಿನದ ಉಡುಗೊರೆ ನೀಡಲಾಯಿತು. ಮನೆಯಲ್ಲಿ ಹಬ್ಬದ ಅಂಗವಾಗಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗಿತ್ತು.
ಕಾಳಿಕಾಂಬ ದೇವಸ್ಥಾನದಲ್ಲಿ ಗೌರಿ ಪ್ರತಿಷ್ಠಾಪನೆ:
ಪಟ್ಟಣದಲ್ಲಿರುವ ಕಾಳಿಕಾಂಬದೇವಿ ಕಮಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗೌರಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ಸುಮಂಗಲಿಯರು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೌರಿಗೆ ಬಾಗಿನ ಅರ್ಪಣೆ ಮಾಡಿದರು. ದೇವಸ್ಥಾನವನ್ನು ಬಗೆಬಗೆಯ ಹೂಗಳಿಂದ ಅಲಂಕೃತಗೊಳಿಸಲಾಗಿತ್ತು.
ಕಾಳಿಕಾಂಬ ಸಮೇತ ಕಮಠೇಶ್ವರ ಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇವೆಗಳು ನಡೆದವು. ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಗೌರಿ ಪೂಜೆಯಲ್ಲಿ ಭಾಗವಹಿಸಿದ್ದರು. ಶನಿವಾರ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುವುದು ಎಂದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಸ್ಥಾನದಲ್ಲೂ ಗೌರಿ ಪೂಜೆ ನಡೆಯಿತು. ಮಹಿಳೆಯರು ಭಾಗವಹಿಸಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಹಬ್ಬಕ್ಕೆ ಖರೀದಿ ಜೋರು:
ಗಣೇಶ ಹಬ್ಬದ ಮುನ್ನಾ ದಿನವಾದ ಶುಕ್ರವಾರ ನಗರದ ಚಿಕ್ಕ ಅಂಗಡಿ, ದೊಡ್ಡ ಅಂಗಡಿ ಬೀದಿ ಹಾಗೂ ಮಾರುಕಟ್ಟೆ ಗ್ರಾಹಕರಿಂದ ಗಿಜಿಗಿಡುತ್ತಿತ್ತು. ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಹೂವು, ಹಣ್ಣುಗಳ ದರ ಗಗನಕ್ಕೇರಿದ್ದರೂ ಜನರ ಖರೀದಿ ಉತ್ಸಾಹಕ್ಕೆ ಕುಂದುಂಟಾಗಲಿಲ್ಲ.
ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವವರು ಮುಂಚಿತವಾಗಿಯೇ ಗಣಪನನ್ನು ಕಂಡೊಯ್ಯುತ್ತಿದ್ದ ದೃಶ್ಯಗಳು ಕಂಡುಬಂದವು.
ಮಣ್ಣಿನ ಗಣಪತಿ ಖರೀದಿಗೆ ಉತ್ಸಾಹ:
ಪರಿಸರ ಕಾಳಜಿಯ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯ ಪರಿಣಾಮ ಈ ವರ್ಷ ಮಣ್ಣಿನ ಗಣಪತಿ ಮೂರ್ತಿಗಳ ಖರೀದಿಗೆ ಸಾರ್ವಜನಿಕರು ಹೆಚ್ಚು ಉತ್ಸಾಹ ತೋರಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.