ಚಾಮರಾಜನಗರ/ಯಳಂದೂರು: ಗೌರಿ ಹಬ್ಬ ಸ್ತ್ರೀಯರ ಪಾಲಿಗೆ ತವರು ಮನೆಯ ಜೊತೆಗಿನ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ. ಗೌರಿ ಹಬ್ಬದ ದಿನ ತವರು ಮನೆಯಿಂದ ಉಡುಗೊರೆಯಾಗಿ ಸಿಗುವ ಬಾಗಿನಕ್ಕೆ ಮಹಿಳೆಯರು ವರ್ಷವಿಡೀ ಕಾಯುತ್ತಾರೆ. ಪ್ರತಿವರ್ಷ ಅಪ್ಪ, ಅಮ್ಮ, ಅಣ್ಣ, ತಮ್ಮಂದಿರು ಹೊತ್ತು ತರುವ ಬಾಗಿನನ ಸಡಗರ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.
ಗೌರಿ ಹಬ್ಬದಲ್ಲಿ ಬಾಗಿನ ನೀಡುವ ಹಿಂದೂ ಸಂಸ್ಕೃತಿ, ಸಂಪ್ರದಾಯ ಉಳಿಯಲು ಬೆಳೆಯಲು ಬಾಗಿನಕ್ಕೆ ಬಳಸುವ ಬಿದಿರಿನ ಮೊರಗಳನ್ನು ತಯಾರಿಸುವ ಮೇದಾರರ ಕೊಡುಗೆಯೂ ಅಪಾರ.
ಚಾಮರಾಜನಗರದ ಮೇದಾರರ ಬೀದಿಯಲ್ಲಿ ಸುಮಾರು 50 ಕುಟುಂಬಗಳು ಐದಾರು ದಶಕಗಳಿಂದ ಬಾಗಿನಕ್ಕೆ ನೀಡುವ ಮೊರಗಳನ್ನು ತಯಾರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಬಿದಿರಿನ ಅಲಭ್ಯತೆ, ಕಚ್ಛಾವಸ್ತುಗಳ ದರ ಏರಿಕೆ, ಬೇಡಿಕೆ ಕುಸಿತದ ನಡುವೆಯೂ ವೃತ್ತಿಯಿಂದ ವಿಮುಖರಾಗದೆ ಸಂಪ್ರದಾಯವನ್ನು ಅನಾಚೂನವಾಗಿ ಪಾಲಿಸಿಕೊಂಡು ಬಂದಿದ್ದಾರೆ.
ಚಾಮರಾಜನಗರದ ಜನತೆ ಪ್ರತಿ ಗೌರಿ ಹಬ್ಬದ ಸಂದರ್ಭದಲ್ಲಿ ತಪ್ಪದೇ ಮೇದಾರರ ಬೀದಿಗೆ ಬಂದು ಬಾಗಿನದ ಮೊರಗಳನ್ನು ಖರೀದಿಸಿ ಕೊಂಡೊಯ್ಯುತ್ತಾರೆ. ಮಾರುಕಟ್ಟೆಗೆ ಹೋಲಿಸಿದರೆ ದರವೂ ಕಡಿಮೆ, ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂಬ ಕಾರಣಕ್ಕೆ ದೂರದ ಊರುಗಳಿಂದಲೂ ಮೇದಾರರ ಬೀದಿಗೆ ಬಂದು ಮೊರಗಳನ್ನು ಖರೀದಿಸುತ್ತಾರೆ.
‘ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ನಗರಗಳಲ್ಲಿ ಗೌರಿ ಹಬ್ಬದ ದಿನ ಹೆಣ್ಣುಮಕ್ಕಳಿಗೆ ಗೌರಿ ಬಾಗಿನ ಕೊಡುವ ಸಂಪ್ರದಾಯ ಕಡಿಮೆಯಾಗುತ್ತಿದ್ದರೂ ಗ್ರಾಮಗಳಲ್ಲಿಇಂದಿಗೂ ಚಾಚೂತಪ್ಪದೆ ಆಚರಣೆಯಲ್ಲಿದೆ. ಗೌರಿ ಹಬ್ಬ ಸಂಭ್ರಮ ಮಾತ್ರವಲ್ಲ, ಮೇದಾರರ ಬದುಕಿಗೂ ಆರ್ಥಿಕ ಭದ್ರತೆ ಒದಗಿಸಿದೆ ಎನ್ನುತ್ತಾರೆ’ ಮೇದಾರ ಬೀದಿಯ ಮೊರಗಳ ತಯಾರಕ ವೆಂಕಟೇಶ್.
‘ತಾತ ಬಸಶೆಟ್ಟಿ, ತಂದೆ ದಾಸಶೆಟ್ಟಿ ಅವರಿಂದ ಮೊರ ಎಣೆಯುವ ಕಲೆ ಸಿದ್ಧಿಸಿದ್ದು ಬದುಕಿಗೆ ಆಧಾರವಾಗಿದೆ. ಓಣಿಯ ₹ 50ಕ್ಕೂ ಹೆಚ್ಚು ಕುಟುಂಬಗಳಿಗೂ ವೃತ್ತಿ ಅನ್ನ ಕೊಡುತ್ತಿದೆ. ಪ್ರತಿ ವರ್ಷ ಗೌರಿ ಹಬ್ಬದ ಸಂದರ್ಭ ₹ 400 ರಿಂದ ₹ 500 ಮೊರಗಳನ್ನು ತಯಾರಿಸುತ್ತೇವೆ. ಬಹುತೇಕ ಮೊರಗಳು ಮಾರಾಟವಾಗುತ್ತವೆ. ಮಾರುಕಟ್ಟೆಯಲ್ಲಿ ಜೋಡಿ ಮೊರಕ್ಕೆ ₹ 150 ರಿಂದ ₹ 200ರವರೆಗೆ ದರ ಇದೆ. ಮೇದಾರ ಓಣಿಯಲ್ಲಿ ಮಾತ್ರ ಜೊತೆ ಮೊರಕ್ಕೆ ₹140 ರಿಂದ ₹150ಕ್ಕೆ ಮಾರಾಟ ಮಾಡುತ್ತೇವೆ. ಗ್ರಾಹಕರು ಖುದ್ದು ಪರೀಕ್ಷಿಸಿ ಕೊಂಡೊಯ್ಯಬಹುದು ಎನ್ನುತ್ತಾರೆ’ ಅವರು.
‘ಹಿಂದೆಲ್ಲ ಜಿಲ್ಲೆಯಲ್ಲೇ ಅಗತ್ಯಕ್ಕೆ ಬೇಕಾದಷ್ಟು ಬಿದಿರು ಲಭ್ಯವಾಗುತ್ತಿತ್ತು. ಅರಣ್ಯ ಇಲಾಖೆಯೂ ಕಡಿಮೆ ದರದಲ್ಲಿ ಬಿದಿರು ಒದಗಿಸುತ್ತಿತ್ತು. 20 ವರ್ಷಗಳಿಂದ ಬಿದಿರಿಗೆ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಕೊಡಗಿನ ಎಸ್ಟೇಟ್‌ಗಳಲ್ಲಿ ಬೆಳೆಯುವ ಗುಣಮಟ್ಟದ ಬಿದಿರನ್ನು ದುಬಾರಿ ಬೆಲೆ ತೆತ್ತು ತಂದು ಬಿದಿರಿನ ಉತ್ಪನ್ನಗಳನ್ನು ತಯಾರಿಸಬೇಕಾಗಿದೆ’ ಎಂದರು.
ಕೋವಿಡ್ ಸಂದರ್ಭ ವ್ಯಾಪಾರ ಕುಸಿದಿತ್ತು. ಇದೀಗ ಮತ್ತೆ ಕುದುರಿದ್ದು ಬೇಡಿಕೆ ಹೆಚ್ಚಾಗಿದೆ. ಸಂಸ್ಕೃತಿ ಸಂಪ್ರದಾಯ ಪಾಲನೆಯಿಂದ ಮಾತ್ರ ಬಾಗಿನ ಸಂಸ್ಕೃತಿ ಉಳಿಯುತ್ತದೆ.ವೆಂಕಟೇಶ್ ಮೊರ ತಯಾರಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.