ಕೊಳ್ಳೇಗಾಲ: ಮಾರುಕಟ್ಟೆಯಲ್ಲಿ ಸೀಬೆ ಕಾಯಿ, ಹಣ್ಣಿಗೆ ಬೇಡಿಕೆ ಇರುವುದನ್ನು ಗಮನಿಸಿರುವ ತಾಲ್ಲೂಕಿನ ರೈತರೊಬ್ಬರೂ ಸೀಬೆ ಕೃಷಿ ನಡೆಸಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಪಾಳ್ಯ ಗ್ರಾಮದ ಸೀಗನಾಯಕ ಎಂಬುವವರು ಮೂರು ವರ್ಷಗಳಿಂದ ಸೀಬೆ ಕೃಷಿಯಲ್ಲಿ ತೊಡಗಿದ್ದಾರೆ. ಸೀಗ ನಾಯಕರಿಗೆ ಕೃಷಿಯೇ ಕುಲ ಕಸುಬು. ಹಿಂದೆ ಭತ್ತ ಕೃಷಿ ಮಾಡುತ್ತಿದ್ದರು. ಈಗ ತೆಂಗಿನ ಕೃಷಿಯ ಜೊತೆಗೆ ಸೀಬೆ ಕೃಷಿಯನ್ನೂ ಮಾಡುತ್ತಿದ್ದಾರೆ.
ಮೂರುವರೆ ಎಕರೆಯಲ್ಲಿ ತೈವಾನ್ ವೈಟ್ ತಳಿಯ ಸೀಬೆ ಗಿಡಗಳನ್ನು ಹಾಕಿದ್ದಾರೆ. ಇವುಗಳ ನಡುವೆ ತೆಂಗಿನ ಮರಗಳಿವೆ. ಈ ಸೀಬೆ ಗಿಡಗಳನ್ನು ಒಮ್ಮೆ ನೆಟ್ಟರೆ 10 ವರ್ಷಗಳಿಗೂ ಹೆಚ್ಚು ಕಾಲ ಫಸಲು ಕೊಡುತ್ತದೆ.
ಸೀಬೆ ಗಿಡಗಳು ವರ್ಷಕ್ಕೆ ಎರಡು ಬಾರಿ ಫಲಕೊಡುತ್ತವೆ. ಆರು ತಿಂಗಳಿಗೊಮ್ಮೆ 10 ಸಾವಿರಕ್ಕೂ ಹೆಚ್ಚು ಸೀಬೆ ಕಾಯಿ/ಹಣ್ಣನ್ನು ಸೀಗನಾಯಕ ಅವರು ಮಾರಾಟ ಮಾಡುತ್ತಾರೆ. ನೇರವಾಗಿ ಮಾರಾಟ ಮಾಡುವುದರಿಂದ ಉತ್ತಮ ಆದಾಯ ಬರುತ್ತದೆ ಎಂದು ಹೇಳುತ್ತಾರೆ ಅವರು. ಒಂದೊಂದು ಬಾರಿ ಒಂದೊಂದು ಬೆಲೆ ಸಿಗುತ್ತದೆ. ನಷ್ಟ ಆಗುವುದಿಲ್ಲ ಎಂಬುದು ಅವರ ಹೇಳಿಕೆ.
ಬೆಂಗಳೂರು ಹಾಗೂ ಮೈಸೂರಿನಿಂದ ಬಂದು ಸೀಬೆ ಖರೀದಿಸಿ ಹೋಗುವ ವ್ಯಾಪಾರಿಗಳೂ ಇದ್ದಾರೆ.
ಸಾವಯವ ಗೊಬ್ಬರ: ಬೇರೆ ಬೆಳೆಗಳಿಗೆ ಹೋಲಿಸಿದರೆ ಸೀಬೆ ಕೃಷಿಯ ನಿರ್ವಹಣೆ ವೆಚ್ಚ ಕಡಿಮೆ ಎಂಬುದು ಅವರ ಅನುಭವ. ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದಾರೆ.
‘ಈ ಗಿಡಕ್ಕೆ ರಸಗೊಬ್ಬರವನ್ನು ಹಾಕಬೇಕು; ಇಲ್ಲವಾದರೆ ಗಿಡಗಳು ಸತ್ತು ಹೋಗುತ್ತವೆ ಮತ್ತು ಸೀಬೆ ಫಸಲು ಸರಿಯಾಗಿ ಬರುವುದಿಲ್ಲ ಎಂದು ಗಿಡ ಪೂರೈಸಿದವರು ಹೇಳಿದ್ದರು. ಆದರೆ, ನಾನು ಯಾವುದೇ ಕಾರಣಕ್ಕೂ ರಸಗೊಬ್ಬರ ಹಾಕುವುದಿಲ್ಲ ಎಂದು ನಿರ್ಧರಿಸಿ, ಹಸುವಿನ ಗೊಬ್ಬರ, ಗಂಜಲ, ಕುರಿ ಗೊಬ್ಬರ, ಒಣ ಎಲೆಗಳು ಮತ್ತು ಹಸಿರೆಲೆಗಳನ್ನು ಕೊಳೆಸಿ ಗೊಬ್ಬರ ಮಾಡಿ ಗಿಡಗಳಿಗೆ ಹಾಕುತ್ತಾ ಬಂದಿದ್ದೇನೆ. ಫಸಲು ಚೆನ್ನಾಗಿದೆ’ ಎಂದು ಎಂದು ಸೀಗನಾಯಕ ಹೇಳಿದರು.
‘ಕೆಲವು ಬಾರಿ ಹೊರಗಿನಿಂದ ಹಸುವಿನ ಗೊಬ್ಬರ ಹೆಚ್ಚಿನ ಬೆಲೆಗೆ ಖರೀದಿ ಮಾಡಿ ಗಿಡಗಳಿಗೆ ಹಾಕಿದ್ದೇನೆಯೇ ವಿನಾ ರಾಸಾಯನಿಕ ಗೊಬ್ಬರ ಹಾಕಿ್ಲ್ಲ’ ಎಂದು ಅವರು ಹೇಳಿದರು.
ಮೊದಲಿನಿಂದಲೂ ಕೃಷಿ ಮಾಡುತ್ತಾ ಬಂದಿದ್ದೆ. ಮೂರು ವರ್ಷಗಳಿಂದ ಸೀಬೆ ಕೃಷಿ ಮಾಡುತ್ತಿದ್ದು, ಆದಾಯ ಚೆನ್ನಾಗಿದೆ. ಇನ್ನೂ ಸೀಬೆ ಗಿಡಗಳನ್ನು ಹಾಕುತ್ತೇನೆ
- ಸೀಗನಾಯಕ, ಪಾಳ್ಯ ರೈತ
ಪ್ರತಿ ವರ್ಷ ನಾವು ಮೈಸೂರಿನಿಂದ ಇಲ್ಲಿಗೆ ಬಂದು ಸೀಬೆಯನ್ನು ಖರೀದಿ ಮಾಡುತ್ತೇವೆ. ಕಾಯಿಗಳು ಚೆನ್ನಾಗಿದ್ದು, ಗ್ರಾಹಕರಿಗೂ ಇಷ್ಟವಾಗಿದೆ
- ಮೈಸೂರು ನಾಗು, ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.