ADVERTISEMENT

ಹನೂರು | 5 ತಿಂಗಳಿಂದಿಲ್ಲ ಗೌರವ ಧನ: ಅತಿಥಿ ಶಿಕ್ಷಕರ ಪರದಾಟ

ಎರಡನೇ ಹಂತದಲ್ಲಿ ನೇಮಕ ಆದವರಿಗೆ ಬಂದಿಲ್ಲ ಸಂಬಳ, ಪ್ರಾಥಮಿಕ ಶಾಲೆಯವರಿಗೆ 2 ತಿಂಗಳಿಂದ ಬಾಕಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 7:19 IST
Last Updated 8 ಫೆಬ್ರುವರಿ 2024, 7:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹನೂರು: ಹನೂರು ಶೈಕ್ಷಣಿಕ ವಲಯ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ನಿಗದಿತ ಸಮಯಕ್ಕೆ ಗೌರವ ಧನ ಸಿಗುತ್ತಿಲ್ಲ. ಇದರಿಂದ ಅವರು ಪರದಾಡುವಂತಾಗಿದೆ. 

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಎರಡನೇ ಹಂತದಲ್ಲಿ ನೇಮಕಗೊಂಡಿರುವ ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ಐದು ತಿಂಗಳುಗಳಿಂದ ಗೌರವ ಧನ ‍ಪಾವತಿಯಾಗಿಲ್ಲ. ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ ಎರಡು ತಿಂಗಳುಗಳಿಂದ ಬಾಕಿ ಇದೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ  10,000, ಪ್ರೌಢಶಾಲಾ ಶಿಕ್ಷಕರಿಗೆ 10,500 ಗೌರವ ಧನ ನೀಡಲಾಗುತ್ತಿದೆ.

ADVERTISEMENT

ಹನೂರು ಶೈಕ್ಷಣಿಕ ವಲಯದ ಒಬ್ಬರೇ ಶಿಕ್ಷಕರು ಇರುವ ಶಾಲೆಗಳು, ಭಾಷಾ ಹಾಗೂ ವಿಷಯವಾರು ಕೊರತೆಯಿರುವ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ ಪ್ರಾಥಮಿಕ ಶಾಲೆಗಳಿಗೆ 105 ಹಾಗೂ ಪ್ರೌಢಶಾಲೆಗಳಿಗೆ 33 ಶಿಕ್ಷಕರು ಸೇರಿ 138 ಅತಿಥಿ  ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಈ ಪೈಕಿ ಪ್ರೌಢಶಾಲೆಗಳಿಗೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಕನ್ನಡ 5, ಇಂಗ್ಲಿಷ್‌ 5 ವಿಜ್ಞಾನ 4 ಹಾಗೂ 3 ಕಲಾ ಶಿಕ್ಷಕರು ಸೇರಿ 17 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಜುಲೈನಲ್ಲಿ ನಡೆದ ವರ್ಗಾವಣೆ ಪ್ರಕ್ರಿಯೆಯಲ್ಲಿ ವಿವಿಧ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗವಣೆಯಾದ ಪರಿಣಾಮ ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚುವರಿಯಾಗಿ ಕನ್ನಡ 3, ಇಂಗ್ಲಿಷ್ 1, ವಿಜ್ಞಾನ 4, ಕಲಾ ಹಾಗೂ ಹಿಂದಿ ಭಾಷೆಯ ತಲಾ ನಾಲ್ವರು ಶಿಕ್ಷಕರು ಸೇರಿ 15  ಮಂದಿಯನ್ನು ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳಲಾಯಿತು.

ನಿಯಮಿತವಾಗಿ ಸಿಗದ ಗೌರವಧನ:

‘ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಶಾಲೆಗೆ ಬರುವಂತೆ ಸೂಚನೆ ನೀಡಲಾಗುತ್ತದೆ. ಆದರೆ, ಅದೇ ರೀತಿ ನಮಗೆ ನಿಗದಿತ ಅವಧಿಗೆ ಗೌರವಧನವನ್ನು ನೀಡಬೇಕು’ ಎಂಬುದು ಅತಿಥಿ ಶಿಕ್ಷಕರ ಮನವಿ.

‘ಎರಡು ಅಥವಾ ಮೂರು ತಿಂಗಳಿಗೊಮ್ಮೆ ಗೌರವ ಧನ ನೀಡಲಾಗುತ್ತಿದೆ. ಇದನ್ನೇ ನಂಬಿ ಬರುವ ನಾವು  ವೇತನ ಪಡೆಯಲು ಮೂರು ತಿಂಗಳವರೆಗೂ ಕಾಯಬೇಕು. ಅಲ್ಲಿಯವರೆಗೆ ನಮ್ಮ ಪಾಡೇನು’ ಎಂಬುದು ಅವರ ಅಳಲು.

ಗುಡ್ಡಗಾಡು ಪ್ರದೇಶಗಳಿಂದಲೇ ಆವೃತವಾಗಿರುವ ತಾಲ್ಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಬಸ್ ತಪ್ಪಿದರೆ ಆ ದಿನ ಶಾಲೆಗೆ ರಜೆ ಹಾಕಬೇಕಾದ ಪರಿಸ್ಥಿತಿ. ಇಂಥ ಸ್ಥಿತಿಯಲ್ಲಿ ಕೆಲ ಶಿಕ್ಷಕರು ಶಾಲೆಗಳಲ್ಲೇ ಉಳಿಯಬೇಕಾದ ಅನಿವಾರ್ಯತೆ ಇದೆ. ಮಹದೇಶ್ವರ ಬೆಟ್ಟದ ತಪ್ಪಿನಲ್ಲಿ ಶಾಲೆಗಳಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರು ವಾರದವರೆಗೂ ಶಾಲೆಯಲ್ಲೇ ಉಳಿದು ವಾರದ ಕೊನೆಯಲ್ಲಿ ಮನೆಗೆ ಬರುತ್ತಿದ್ದಾರೆ.

‘ಎರಡನೇ ಅವಧಿಯಲ್ಲಿ ನಮ್ಮನ್ನು ಹೆಚ್ಚುವರಿ ಅತಿಥಿ ಶಿಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಆದರೆ, ನೇಮಕವಾಗಿ ಐದು ತಿಂಗಳಾಗುತ್ತಿದ್ದರೂ ಇನ್ನೂ ಗೌರವ ಧನ ಪಾವತಿಯಾಗಿಲ್ಲ. ಇಷ್ಟು ತಿಂಗಳಾದರೂ ಸಂಬಳ ಬಾರದಿರುವುದರಿಂದ ಕೆಲಸವನ್ನೇ ಬಿಟ್ಟುಬಿಡು ಎಂದು ಮನೆಯಲ್ಲಿ ಒತ್ತಡ ಹಾಕುತ್ತಿದ್ದಾರೆ. ಬಸ್ಸಿನಲ್ಲಿ ಹೋಗುವುದಕ್ಕೂ ಹಣವಿಲ್ಲದೇ ಸಹಶಿಕ್ಷಕರ ಬಳಿ ಸಾಲ ಮಾಡಬೇಕಾಗಹಿದೆ. ಈ ಬಗ್ಗೆ ಮುಖ್ಯಶಿಕ್ಷಕರ ಬಳಿ ವಿಚಾರಿಸಿದರೆ ಅನುದಾನ ಮಂಜುರಾಗಿಲ್ಲ. ಮಂಜೂರಾದ ಬಳಿಕ ಗೌರವಧನ ನೀಡಲಾಗುವುದು ಎನ್ನುತ್ತಾರೆ’ ಎಂದು ಅತಿಥಿ ಶಿಕ್ಷಕರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ರಾಮಚಂದ್ರರಾಜೇ ಅರಸ್‌
ಪ್ರೌಢಶಾಲೆಗಳಿಗೆ ಎರಡನೇ ಅವಧಿಗೆ ನೇಮಕ ಮಾಡಿಕೊಂಡ ಅತಿಶಿ ಶಿಕ್ಷಕರಿಗೆ ಈ ತಿಂಗಳೊಳಗೆ ಗೌರವ ಧನ ಪಾವತಿಯಾಗಲಿದೆ
-ರಾಮಚಂದ್ರ ರಾಜೇ ಅರಸ್‌ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ
ಎರಡು ಹಂತಗಳಲ್ಲಿ ನೇಮಕ
2023–24ನೇ ಶೈಕ್ಷಣಿಕ ವರ್ಷ ಆರಂಭವಾಗುವಾಗ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 821 ಶಿಕ್ಷಕರ ಕೊರತೆ ಇತ್ತು.  ಸರ್ಕಾರಿ ಪ್ರೌಢಶಾಲೆಗಳಲ್ಲಿ 162 ಶಿಕ್ಷಕರ ಕೊರತೆ ಇತ್ತು. ಶಿಕ್ಷಣ ಇಲಾಖೆ ಎರಡು ಹಂತಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿತ್ತು.   ಶೈಕ್ಷಣಿಕ ವರ್ಷ ಆರಂಭವಾಗುವಾಗಲೇ ಪ್ರಾಥಮಿಕ ಶಾಲೆಗಳಿಗೆ 409 ಮತ್ತು ಪ್ರೌಢ ಶಾಲೆಗಳಿಗೆ 96 ಮಂದಿಯನ್ನು ನೇಮಿಸಲಾಗಿತ್ತು. ವರ್ಗಾವಣೆ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಮತ್ತೆ ಪ್ರಾಥಮಿಕ ಶಾಲೆಗಳಿಗೆ 144 ಮತ್ತು ಪ್ರೌಢ ಶಾಲೆಗಳಿಗೆ 63 ಮಂದಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.