ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಅರಳಿ ನಿಂತಿರುವ ಕೆಂಪು ಬಣ್ಣದ ಆಕರ್ಷಕ ಗುಲ್‌ಮೊಹರ್‌ಗಳು ಪ್ರಸಿದ್ಧ ಪ್ರವಾಸಿ ಸ್ಥಳಗಳಾದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮತ್ತು ಊಟಿಗೆ ಹೋಗುವ ಪ್ರವಾಸಿಗರನ್ನು ಸ್ವಾಗತಿಸುತ್ತಿವೆ.
ತಾಲ್ಲೂಕಿನ ಬೇಗೂರು, ಹಿರಿಕಾಟಿ, ರಾಘವಾಪುರ, ಮಡಹಳ್ಳಿ, ಗುಂಡ್ಲುಪೇಟೆ, ಬಸವಾಪುರ ಮತ್ತು ಹಂಗಳ ಗ್ರಾಮಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಗುಲ್‍ಮೊಹರ್ ಮರಗಳು ಕೆಂಬಣ್ಣದ ರಂಗುರಂಗಾದ ಹೂಗಳನ್ನು ಬಿಟ್ಟು ನೋಡುಗರ ಕಣ್ಮನ ಸೆಳೆಯುತ್ತಿವೆ.
ಆಡುಮಾತಿನಲ್ಲಿ ಮೇ ಫ್ಲವರ್ ಎಂದು ಕರೆಯುವ ಈ ಹೂವುಗಳು ಮೇ ತಿಂಗಳು ಸಮೀಪಿಸುತ್ತಿದ್ದಂತೆಯೇ ಅರಳುತ್ತವೆ (ಈ ಕಾರಣಕ್ಕೆ ಮೇ ಫ್ಲವರ್ ಎನ್ನುತ್ತಾರೆ). ಮೇ ತಿಂಗಳು ಮುಗಿಯುವವರೆಗೆ ಮರಗಳಲ್ಲಿ ಅರಳಿ ನಿಂತು ನೋಡುಗರನ್ನು ಆಕರ್ಷಿಸುತ್ತವೆ. ಉಷ್ಣ ವಲಯದಲ್ಲಿ ಗುಲ್‌ಮೊಹರ್ ಮರಗಳು ಹೆಚ್ಚಾಗಿ ಕಂಡು ಬರುತ್ತವೆ. ಬೇಸಿಗೆಯಲ್ಲಿ ಶಾಲೆಗಳಿಗೆ ರಜೆ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಈ ಹೂವುಗಳಲ್ಲಿಆಟವಾಡುವುದೂ ಉಂಟು.
ಗ್ರಾಮೀಣ ಪ್ರದೇಶ ಮತ್ತು ಪಟ್ಟಣದಲ್ಲಿ ಮದುವೆ ಇನ್ನಿತರ ಶುಭ, ಸಮಾರಂಭಗಳಿಗೆ ಕಲ್ಯಾಣ ಮಂಟಪ ಹಾಗೂ ಮನೆಯ ಆವರಣವನ್ನು ಈ ಮರದ ಹೂಗಳನ್ನು ಬಳಸಿ ಸಿಂಗರಿಸುವುದು ಹೆಚ್ಚಾಗಿದೆ. ಅನೇಕ ಪ್ರವಾಸಿಗರು ಈ ಹೂವುಗಳನ್ನು ನೋಡುತ್ತ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
‘ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಬಿಡುವುದರಿಂದ ಈ ಹೂಗಳನ್ನು ನಗರ ಪ್ರದೇಶ ಮತ್ತು ಕೇರಳದಲ್ಲಿ ಮಾರಾಟ ಮಾಡಲಾಗುತ್ತದೆ. ಕೇರಳದಲ್ಲಿ ಮದುವೆ ಹಾಗೂ ಇನ್ನಿತರ ಶುಭಕಾರ್ಯಗಳ ಸಂದರ್ಭದಲ್ಲಿ ಮನೆಯ ಮುಂದೆ ಹಸಿರು ಚಪ್ಪರ ಹಾಕಿ ಸಿಂಗಾರ ಮಾಡಲು ಈ ಹೂವುಗಳನ್ನು ಬಳಕೆಮಾಡುತ್ತಾರೆ’ ಎಂದು ಮಾರಾಟಗಾರರೊಬ್ಬರು ತಿಳಿಸಿದರು.
ನೆರಳು ನೀಡುವ ಮರ: ಉದ್ಯಾನ ಮತ್ತು ರಸ್ತೆಗಳ ಬದಿಯಲ್ಲಿ ನೆರಳಿಗಾಗಿ ಈ ಮರಗಳನ್ನು ಬೆಳೆಸಲಾಗುತ್ತದೆ.ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯವರು ಗ್ರಾಮದ ಆಸ್ಪತ್ರೆಯಿಂದ ಗೋಪಾಲಸ್ವಾಮಿ ಬೆಟ್ಟದ ಗೋಪುರದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಅಲಂಕಾರಕ್ಕಾಗಿ ಬೆಳೆಸಿದ್ದಾರೆ.
ಕ್ರಿಶ್ಚಿಯನ್ನರ ಹಬ್ಬ ಈಸ್ಟರ್ ಆದ ಬಳಿಕ ಈ ಗುಲ್ ಮೋಹರ್ ಜಾತಿಯ ಹೂ ಬಿಡುವುದರಿಂದ (ಫೆಂಟೇಕಾಸ್ಟ್ ಹಬ್ಬದ ಹೊತ್ತಿಗೆ ಅರಳುತ್ತವೆ) ‘ಫೆಂಟೇಕಾಸ್ಟ್ ಟ್ರೀ’ ಎಂದು ಕ್ರಿಶ್ಚಿಯನ್ನರು ಮತ್ತು ವಿದೇಶಿಯರು ಕರೆಯುತ್ತಾರೆ.
ರಂಗು ರಂಗಿನ ಗುಲ್‍ಮೊಹರ್...
ಡೆಲೋನಿಕ್ಸ್ ರೆಜಿಯಾ ಅಥವಾ ಡೆಲೋನಿಕ್ಸ್ ಎಂಬ ವೈಜ್ಞಾನಿಕ ಹೆಸರು ಇದಕ್ಕಿದೆ. ಹಿಂದಿ ಭಾಷೆಯಲ್ಲಿ ಇದನ್ನು ಗುಲ್‍ಮೊಹರ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಕೆಂಪುಕತ್ತಿಕಾಯಿ ಮರದ ಹೂ, ಸೀಮೆ ಸಂಕೇಶ್ವರ, ಕೆಂಪುತುರಾಯಿ ಮತ್ತು ದೊಡ್ಡ ರತ್ನಗಂಧಿ ಎಂಬ ಹೆಸರುಗಳಿಂದ ಸ್ಥಳೀಯವಾಗಿ ಕರೆಯುತ್ತಾರೆ. ಭಾರತದಲ್ಲಿ ಮೇ ತಿಂಗಳಿನಲ್ಲಿ ಈ ಜಾತಿಯ ಎಲ್ಲ ಮರಗಳು ಹೂ ಬಿಡುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.