ADVERTISEMENT

ಗುಂಡ್ಲುಪೇಟೆ: ಆಲೂಗಡ್ಡೆಗೆ ಅಂಗಮಾರಿ ರೋಗ

ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬಾರದ ರೋಗ: ಆತಂಕದಲ್ಲಿ ಬೆಳೆಗಾರರು

ಮಲ್ಲೇಶ ಎಂ.
Published 10 ನವೆಂಬರ್ 2024, 5:21 IST
Last Updated 10 ನವೆಂಬರ್ 2024, 5:21 IST
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಆಲೂಗಡ್ಡೆಗೆ ಕೊಳೆ ರೋಗ ಕಾಣಿಸಿಕೊಂಡಿರುವುದು
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಆಲೂಗಡ್ಡೆಗೆ ಕೊಳೆ ರೋಗ ಕಾಣಿಸಿಕೊಂಡಿರುವುದು    

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಮುಖ ತೋಟಗಾರಿಕೆ ಬೆಳೆಗಳಲ್ಲಿ ಪ್ರಮುಖವಾಗಿರುವ ‌ಆಲೂಗಡ್ಡೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದ್ದು, ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಾವಿರಾರು ರೂಪಾಯಿ ವ್ಯಯಿಸಿ ಬಿತ್ತನೆ ಮಾಡಿರುವ ಆಲೂಗಡ್ಡೆ ರೋಗಕ್ಕೆ ತುತ್ತಾಗುತ್ತಿರುವುದನ್ನು ಕಂಡು ಮರುಗುತ್ತಿದ್ದಾರೆ.

ಕೆಲವು ಕಡೆ ಆಲೂಗಡ್ಡೆ ಕೊಯ್ಲು ಹಂತಕ್ಕೆ ಬಂದರೆ, ಕೆಲವು ಕಡೆ ಗೆಡ್ಡೆ ಕಟ್ಟುವ ಹಂತದಲ್ಲಿದೆ. ತಾಲ್ಲೂಕಿನಲ್ಲಿ ಈಚೆಗೆ ಎಡೆಬಿಡದೆ ಸುರಿದ ಭಾರಿ ಮಳೆಗೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಹೂ ಬಿಡುವ ಮುನ್ನವೇ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಅಂಗಮಾರಿ ರೋಗಬಾಧಿತ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ಬೆಳೆ ನಾಶವಾಗುತ್ತಿದ್ದು ರೈತರು ನಷ್ಟದ ಭೀತಿಯಲ್ಲಿದ್ದಾರೆ.

ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ರೋಗ ನಿಯಂತ್ರಣಕ್ಕೆ ರೈತರು ಹಲವು ಬಗೆಯ ಕೀಟನಾಶಕಗಳನ್ನು ಸಿಂಪಡಿಸುತ್ತಿದ್ದು, ಬೆಳೆ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ರೋಗ ಸಂಪೂರ್ಣವಾಗಿ ಹತೋಟಿಗೆ ಬಾರದಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.

ADVERTISEMENT

ಕೀಟನಾಶಕ ಸಿಂಪಡಿಸಿ ಮೂರು ದಿನ ಕಳೆಯುವಷ್ಟರಲ್ಲಿ ಮತ್ತೆ ರೋಗ ಕಾಣಿಸಿಕೊಳ್ಳುತ್ತಿದ್ದು ಅಕ್ಕಪಕ್ಕದ ಜಮೀನಿನಲ್ಲಿ ಬಿತ್ತನೆ ಮಾಡಿರುವ ಆಲೂಗಡ್ಡೆ ಬೆಳೆಗೂ ವಿಸ್ತರಿಸುತ್ತಿರುವುದರಿಂದ ಈ ಬಾರಿ ಬಹುತೇಕ ಆಲೂಗಡ್ಡೆ ಬೆಳೆ ರೈತರ ಕೈಸೇರುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ರೋಗ ನಿಯಂತ್ರಣಕ್ಕೆ ತರಲಾಗದೆ ರೈತರು ದಿಕ್ಕು ತೋಚದೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಒಂದು ಹೆಕ್ಟೇರ್‌ ಆಲೂಗಡ್ಡೆ ಬಿತ್ತನೆ ಮಾಡಲು ರೈತರಿಗೆ ₹ 60 ರಿಂದ ₹ 80 ಸಾವಿರ ಖರ್ಚು ತಗುಲುತ್ತದೆ. ಮೂರು ದಿನಗಳಿಗೊಮ್ಮೆ ಅಂಗಮಾರಿ ರೋಗ ನಿಯಂತ್ರಣಕ್ಕೆ ₹ 2 ರಿಂದ ₹ 3 ಸಾವಿರ ವ್ಯಯಿಸಿ ಔಷಧಿ ಸಿಂಪಡಿಸುತ್ತಿದ್ದರೂ ರೋಗ ಕಡಿಮೆಯಾಗುತ್ತಿಲ್ಲ. ಕಳೆದ ಹಲವು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಅಂಗಮಾರಿ ರೋಗ ಮತ್ತಷ್ಟು ಉಲ್ಬಣಗೊಂಡು ಆಲೂಗಡ್ಡೆ ಬೆಳೆ ಸಂಪೂರ್ಣವಾಗಿ ನಾಶವಾಗುವ ಭೀತಿ ಎದುರಾಗಿದೆ ಎನ್ನುತ್ತಾರೆ ರೈತರು.

ತಾಲ್ಲೂಕಿನಲ್ಲಿ 800 ರಿಂದ 1,200 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿದ್ದವರಿಗೆ ಉತ್ತಮ ಬೆಲೆ ಹಾಗೂ ಇಳುವರಿ ದೊರೆತಿದೆ. ಆದರೆ, ಆಗಸ್ಟ್‌ನಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದವರಿಗೆ ಹೊಡೆತ ಬಿದ್ದಿದೆ. ಈ ಸಂದರ್ಭ ಸತತ ಸುರಿದ ಜಿಟಿಜಿಟಿ ಮಳೆಗೆ ಆಲೂಗಡ್ಡೆಗೆ ಕೊಳೆ ರೋಗ ಕಾಣಿಸಿಕೊಂಡಿದೆ ಎನ್ನುತ್ತಾರೆ ರೈತರು.

ಮೊದಲ ಬಾರಿ ಉತ್ತಮ ಫಸಲು ಹಾಗೂ ಬೆಲೆ ಸಿಕ್ಕಿದ್ದ ಹಿನ್ನೆಲೆಯಲ್ಲಿ ಈ ಬಾರಿಯೂ ಸಿಗಬಹುದು ಎಂದು ಬಹುತೇಕ ರೈತರು ಆಲೂಗಡ್ಡೆ ಬೆಳೆಯಲು ಒಲವು ತೋರಿದ್ದರು. ಕ್ವಿಂಟಲ್‌ ಬಿತ್ತನೆ ಆಲೂಗಡ್ಡೆಗೆ 3,000 ದರ ಇದ್ದರೂ ಖರೀದಿ ಮಾಡಿ ಬಿತ್ತನೆ ಮಾಡಿದ್ದರು. ಈಗ ಕೊಳೆ ರೋಗದ ಪರಿಣಾಮ ಇಳುವರಿ ಬಂದಿಲ್ಲ. ಖರ್ಚು ಮಾಡಿದ ಅರ್ಧದಷ್ಟು ಹಣವೂ ಮರಳಿ ಬಂದಿಲ್ಲ. ಉತ್ತಮ ಇಳುವರಿ ಬಿದ್ದಿದ್ದರೆ 250 ಮೂಟೆ ಆಲೂಗಡ್ಡೆ ಸಿಗುತ್ತಿತ್ತು. ರೋಗಬಾಧೆಯಿಂದ 30 ರಿಂದ 40 ಮೂಟೆಗಳು ಮಾತ್ರ ದೊರೆತಿವೆ ಎನ್ನುತ್ತಾರೆ ಮೇಲುಕಾಮನಹಳ್ಳಿ ಗ್ರಾಮದ ಶಿವಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.