ಗುಂಡ್ಲುಪೇಟೆ: ಪಟ್ಟಣ ಪುರಸಭೆಯ ಅಧಿಕಾರ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಆಪರೇಷನ್ ಹಸ್ತ ಆಘಾತ ನೀಡಿದೆ. ಬಿಜೆಪಿಯಿಂದ ಪುರಸಭೆಗೆ ಆಯ್ಕೆಯಾಗಿದ್ದ ನಾಲ್ವರು ಸದಸ್ಯರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪುರಸಭೆ ‘ಕೈ’ ಪಾಲಾಗುವ ಸಾಧ್ಯತೆಗಳು ಬಹುತೇಕ ನಿಚ್ಚಳವಾಗಿದೆ.
ಪುರಸಭೆಯಲ್ಲಿ 23 ಸದಸ್ಯ ಬಲವಿದ್ದು ಕಾಂಗ್ರೆಸ್‌ನ 8 ಮಂದಿ, ಬಿಜೆಪಿ 13 ಮಂದಿ, ಎಸ್‌ಡಿಪಿಐನ ಒಬ್ಬರು ಹಾಗೂ ಒಬ್ಬರು ಪಕ್ಷೇತರರಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಸಂಸದರ ಮತಗಳೂ ಪರಿಗಣನೆಯಾಗುವುದರಿಂದ ಅಧಿಕಾರ ಚುಕ್ಕಾಣಿ ಹಿಡಿಯಲು 13 ಸದಸ್ಯರ ಬೆಂಬಲ ಅತ್ಯಗತ್ಯ. ಬಿಜೆಪಿಗೆ ಅಧಿಕಾರ ಚುಕ್ಕಾಣಿ ಹಿಡಿಯುವಷ್ಟು ಸದಸ್ಯರ ಬಲವಿದ್ದರೂ, ನಾಲ್ವರು ಸದಸ್ಯರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವುದು ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗಾಗುವಂತೆ ಮಾಡಿದೆ.
ಕಾಂಗ್ರೆಸ್‌ನಲ್ಲಿ 8 ಸದಸ್ಯರು, ಶಾಸಕರು, ಸಂಸದರು ಸೇರಿ 10 ಮತಗಳು ಭದ್ರವಾಗಿವೆ. ಎಸ್‍ಡಿಪಿಐ ಸದಸ್ಯ ಹಾಗೂ ಪಕ್ಷೇತರ ಸದಸ್ಯ ಹಾಗೂ ಬಿಜೆಪಿಯ ನಾಲ್ವರ ಮತಗಳು ಸೇರಿದರೆ ಕಾಂಗ್ರೆಸ್‌ನ ಬೆಂಬಲಿತರ ಸಂಖ್ಯೆ 16ಕ್ಕೆ ಏರಿಕೆಯಾಗಲಿದೆ. ನಿರೀಕ್ಷೆಯಂತೆ ಎಲ್ಲವೂ ನಡೆದರೆ ಕಾಂಗ್ರೆಸ್ ಗದ್ದುಗೆ ಏರುವುದು ಖಚಿತ. ಆದರೆ, ಬಿಜೆಪಿಯ ನಾಲ್ವರು ಪಕ್ಷಕ್ಕೆ ವಾಪಸಾದರೆ ಕೈಗೆ ಕಗ್ಗಂಟಾಗಲಿದೆ.
ಬಿಜೆಪಿ ಚಿಹ್ನೆಯಡಿ ಗೆದ್ದಿರುವ 13 ಸದಸ್ಯರಿಗೂ ವಿಪ್ ಜಾರಿಗೊಳಿಸಲಾಗಿದೆ. ಬಂಡಾಯ ಸದಸ್ಯರ ಮನೆಯ ಮುಂದೆಯೂ ಅಂಟಿಸಲಾಗಿದೆ. ಪಕ್ಷೇತರ ಸದಸ್ಯ ಶಶಿಧರ್ ದೀಪು ಕಾಂಗ್ರೆಸ್ ಸೇರ್ಪಡೆಯಾಗುವುದರಿಂದ ಅಧ್ಯಕ್ಷರಾಗಿ ಆಯ್ಕೆಯಾಗಬಹುದು ಎಂಬ ನಿರೀಕ್ಷೆ ದಟ್ಟವಾಗಿದೆ. ಅಥವಾ ನಾಲ್ಕನೇ ವಾರ್ಡ್‍ನ ಸದಸ್ಯ ಕಿರಣ್ ಗೌಡ ಆಯ್ಕೆಯಾಗುವ ಸಾಧ್ಯತೆಗಳೂ ಹೆಚ್ಚಾಗಿವೆ.
ಮೊದಲ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಿಗುವ ಭರವಸೆಯಿಂದ ಬಿಜೆಪಿಯ ಕಿರಣ್ ಗೌಡ ಹಾಗೂ ಹೀನಾ ಕೌಸರ್ ಕಾಂಗ್ರೆಸ್ ಪಾಳಯ ಸೇರಿದ್ದಾರೆ. ‘ಈ ಇಬ್ಬರಿಗೂ ತಲಾ ನಾಲ್ಕು ತಿಂಗಳ ಅವಧಿಗೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನ ನೀಡುವ ಒಪ್ಪಂದಕ್ಕೆ ಸ್ಥಳೀಯ ಶಾಸಕರು ಸಮ್ಮತಿ ಸೂಚಿಸಿದ್ದಾರೆ. ಬಿಜೆಪಿ ಬಂಡಾಯ ಸದಸ್ಯರೂ ಒಪ್ಪಿದ್ದಾರೆ’ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
‘ಕಾಂಗ್ರೆಸ್ ಅಧಿಕಾರ ಹಿಡಿಯಲು ಅನೇಕ ಸಂದರ್ಭಗಳಲ್ಲಿ ಎಸ್‌ಡಿಪಿಐ ಮಹತ್ವದ ಪಾತ್ರ ವಹಿಸಿದ್ದು, ಪಕ್ಷದ ಸದಸ್ಯ ಎಚ್.ಆರ್.ರಾಜಗೋಪಾಲ್ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಬೇಕು’ ಎಂದು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ತೌಸಿಫ್ ಪಾಷಾ ಹಾಗೂ ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಮಹದೇವು ಪ್ರತಿಪಾದಿಸಿದ್ದಾರೆ.
ಬಿಜೆಪಿಯಿಂದ ಗೆದ್ದು ಕಾಂಗ್ರೆಸ್‌ಗೆ ಹೋಗಿರುವ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದ್ದು ವಿರುದ್ಧವಾಗಿ ನಡೆದುಕೊಂಡರೆ ಕಾನೂನು ಹೋರಾಟ ಮಾಡಲಾಗುವುದು.ಪಿ.ಗಿರೀಶ್ ಬಿಜೆಪಿ ಮುಖಂಡ
ಪುರಸಭೆ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಶೇ 100ರಷ್ಟು ಖಚಿತ. ಆದರೆ ಯಾವ ರೀತಿ ಅಧಿಕಾರ ಹಿಡಿಯಲಿದೆ ಎಂಬುದು ಬುಧವಾರ ತಿಳಿಯಲಿದೆ. ಎಚ್.ಎಂ.ಗಣೇಶ್ ಪ್ರಸಾದ್, ಶಾಸಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.