ಹನೂರು: ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಸರ್ಕಾರದಿಂದ ರೈತರಿಗೆ ವಿತರಣೆ ಮಾಡುವ ರಾಗಿಗೆ ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ರೈತರು ದೂರಿದ್ದಾರೆ.
ಹನೂರು, ಲೊಕ್ಕನಹಳ್ಳಿ ಹಾಗೂ ರಾಮಾಪುರ ರೈತ ಸಂಪರ್ಕ ಕೇಂದ್ರಗಳಿಗೆ 15 ದಿನಗಳ ಹಿಂದೆ ಪ್ರಾಯೋಗಿಕ ಬಿತ್ತನೆ (ಎನ್.ಎಫ್.ಎಸ್.ಎಂ ಡೆಮಾನ್‌ಸ್ಟ್ರೇಷನ್) ಯೋಜನೆಯಡಿ ಟನ್‌ಗಟ್ಟಲೆ ರಾಗಿ ಬಂದಿದ್ದು 5 ಕೆ.ಜಿಯ ಚೀಲಕ್ಕೆ ರೈತರಿಂದ ₹ 5 ಮಾತ್ರ ಪಡೆಯಬೇಕು ಎಂಬ ನಿಯಮವಿದೆ. ಆದರೆ, ರೈತರಿಂದ ರಾಗಿ ಚೀಲಕ್ಕೆ ₹ 190 ಪಡೆದು ಹಂಚಿಕೆ ಮಾಡಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನೂರು ತಾಲ್ಲೂಕಿನಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬಿತ್ತನೆ ಕಾರ್ಯ ಬಿರುಸಾಗಿ ನಡೆಯುತ್ತದೆ. ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಈ ಭಾಗದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗುತ್ತಾರೆ. ಈ ಸಂದರ್ಭ ರೈತರಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ.
ಪ್ರತಿ ಬಾರಿಯಂತೆ ಈ ಬಾರಿಯೂ ರೈತರಿಗೆ ಪ್ರಾಯೋಗಿಕ ಬಿತ್ತನೆಗೆ ಉಚಿತವಾಗಿ ರಾಗಿ ವಿತರಣೆ ಮಾಡಲಾಗಿತ್ತು. ಆದರೆ, ರೈತರಿಗೆ ವಿತರಣೆ ಮಾಡಿರುವ ಬಿತ್ತನೆ ರಾಗಿಗೆ ರೈತರಿಂದ ಹೆಚ್ಚು ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪಗಳಿದ್ದು ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸುತ್ತಾರೆ ಲೊಕ್ಕನಹಳ್ಳಿ ಗ್ರಾಮದ ರೈತ ಬಸವಣ್ಣ.
ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಹದಿನೈದು ದಿನಗಳ ಹಿಂದೆ ರಾಗಿ ವಿತರಣೆ ಸಂದರ್ಭ ಜಟಾಪಟಿ ನಡೆದಿದೆ. ಅಲ್ಲಿನ ಸಿಬ್ಬಂದಿ ರೈತರಿಗೆ ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ. ಸರ್ಕಾರದ ಸೌಲಭ್ಯಗಳು ಅರ್ಹರಿಗೆ ತಲುಪುತ್ತಿಲ್ಲ. ಜತೆಗೆ ಮಧ್ಯವರ್ತಿಗಳ ಹಾವಳಿಯೂ ಮಿತಿ ಮೀರಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮೌಖಿಕವಾಗಿ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ನೀಡಬೇಕು. ಜತೆಗೆ, ರೈತ ಸಂಪರ್ಕ ಕೇಂದ್ರದ ಸೂಚನಾ ಫಲಕಗಳಲ್ಲೂ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಕಬೇಕು. ಆದರೆ, ಇಂತಹ ಕೆಲಸ ನಡೆಯುತ್ತಿಲ್ಲ ಎಂದು ಆರೋಪಿಸುತ್ತಾರೆ ಪಿ.ಜಿ ಪಾಳ್ಯ ಗ್ರಾಮದ ನಿಂಗಪ್ಪ.
ಕೃಷಿ ಅಧಿಕಾರಿಯಾದ ಬಳಿಕ ಯಾವ ರೈತರಿಂದಲೂ ಹೆಚ್ಚುವರಿ ಹಣ ಪಡೆದು ರಾಗಿ ವಿತರಣೆ ಮಾಡಿಲ್ಲ. ಹಿಂದಿನ ಅವಧಿಯಲ್ಲಿ ನಡೆದಿರಬಹುದು. ರೈತರ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು.–ನಾಗೇಂದ್ರ ಕೃಷಿ ಅಧಿಕಾರಿ
ಉಚಿತವಾಗಿ ವಿತರಣೆ ಮಾಡುವ ರಾಗಿಯನ್ನು ರೈತರಿಂದ ಹೆಚ್ಚು ಹಣ ಪಡೆದು ವಿತರಣೆ ಮಾಡಿರುವ ವಿಚಾರ ಗಮನಕ್ಕೆ ಬಂದಿಲ್ಲ. ಸಹಾಯಕ ನಿರ್ದೇಶಕರಿಗೆ ಪರಿಶೀಲನೆ ನಡೆಸಲು ಸೂಚಿಸಲಾಗುವುದು.– ಸುಶ್ಮಾ ಕೃಷಿ ಇಲಾಖೆ ಉಪ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.