ಚಾಮರಾಜನಗರ: ‘ಜನಪದ ಎಂದರೆ ಜ್ಞಾನಪದ, ಒಳಹೊಕ್ಕಿ ನೋಡಿದರೆ ಅದು ವಿಜ್ಞಾನ ಪದ, ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದರೆ ಅದು ವಿಚಾರ ಪದ’, ‘ದೇವಸ್ಥಾನದಲ್ಲಿ ಸಿಗುವುದು ಡಿವೈನ್ ತೀರ್ಥ, ಬಾರ್‌ನಲ್ಲಿ ಸಿಗುವುದು ವೈನ್ ತೀರ್ಥ’, ಸಂಸಾರ ಎಂದರೆ ಸಂಗೀತ, ಸಾಹಿತ್ಯ, ರಸಿಕತೆ...
ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಅವರಿಂದ ಇಂತಹ ಮಾತುಗಳು ಬಾಣಗಳಂತೆ ಬರುತ್ತಿದ್ದರೆ, ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು.
ಬದುಕಿನ ಕಹಿ ಸತ್ಯಗಳನ್ನು, ಜೀವನದಲ್ಲಿ ಅಳವಡಿಸಬೇಕಾದ ಸಂದೇಶಗಳನ್ನು ಹಾಸ್ಯದ ಲೇಪನದೊಂದಿಗೆ ‘ಹರಟೆ’ಯ ರೂಪದಲ್ಲಿ ವಿವರಿಸುತ್ತಿದ್ದರೆ, ಜನರು ಅವರ ವಿದ್ವತ್ತಿಗೆ ತಲೆತೂಗುತ್ತಾ ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾ ಭವನ ಸಭಾಂಗಣದಲ್ಲಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಸಂಜೆ ಆಯೋಜಿಸಿದ್ದ ಹರಟೆ ಕಾರ್ಯಕ್ರಮ, ಭವನದಲ್ಲಿ ಸೇರಿದ್ದ ನೂರಾರು ಜನರಿಗೆ ಕಚಗುಳಿ ಇಡುವಲ್ಲಿ ಯಶಸ್ವಿಯಾಯಿತು.
ಶಿವಮೊಗ್ಗದಿಂದ ಬಂದಿದ್ದ ಲೇಖಕ ಪ್ರಶಾಂತ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ವಿನಯ್ ಅವರು ಹಿರೇಮಗಳೂರು ಕಣ್ಣನ್ ಅವರೊಂದಿಗೆ ಹರಟೆಗೆ ಜೊತೆಯಾದರು.
ದಾಂಪತ್ಯ, ಪ್ರೇಮಿಗಳು, ಪತಿ ಪತ್ನಿಯರ ಜಗಳ, ಕೋವಿಡ್, ರಾಜಕಾರಣಿಗಳು ಪಾಲಿಸುವ ಮೌಢ್ಯ... ಹೀಗೆ ಎಲ್ಲ ವಿಚಾರಗಳು ಕಣ್ಣನ್ ಅವರ ವಾಗ್ಝರಿಗೆ ಆಹಾರವಾದವು.
ಕನ್ನಡದ ಬಗ್ಗೆ ಕಾಳಜಿ ತೋರುತ್ತಾ, ಇಂಗ್ಲಿಷ್ ಭಾಷಾ ವ್ಯಾಮೋಹ ಸಮಾಜದಲ್ಲಿ ಆವರಿಸಿರುವ ಪರಿಯನ್ನೂ ವಿಷಾದದಿಂದ ನಗುತ್ತಲೇ ವಿವರಿಸಿದರು.
‘ಕನ್ನಡ ಬೆಳೆಸಿ ಎಂಬ ಪದವನ್ನು ನಾವು ಯಾವತ್ತೂ ಬಳಸಬಾರದು. ಕನ್ನಡ ಬಳಸಿ ಎಂಬುದು ನಮ್ಮ ಮಂತ್ರವಾಗಬೇಕು. ನಗರ ಪ್ರದೇಶದಲ್ಲಿ ಕನ್ನಡ ಇಲ್ಲ. ಗ್ರಾಮೀಣ ಭಾಗದಲ್ಲಿ, ಜನಪದದಲ್ಲಿ ಇನ್ನೂ ಕನ್ನಡ ಇದೆ. ಗ್ರಾಮೀಣ ಭಾಗದಲ್ಲಿ ಕನ್ನಡವನ್ನು ಹೆಚ್ಚು ಬಳಸುತ್ತಾರೆ’ ಎಂದರು.
‘ಹರಟೆ ಎಂದರೆ ಹಾಸ್ಯ ಮಾತ್ರ ಅಲ್ಲ. ಅದರಲ್ಲಿ ಜೀವನಕ್ಕೆ ಬೇಕಾದ ಸಂದೇಶವೂ ಇದೆ’ ಎಂದು ಪ್ರತಿಪಾದಿಸಿದರು.
ಸಭಾಂಗಣ ಭರ್ತಿ: ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮ ನಡೆದರೂ ಜೆ.ಎಚ್.ಪಟೇಲ್ ಸಭಾಂಗಣ ಭರ್ತಿಯಾಗುವುದಿಲ್ಲ. ಆದರೆ, ಹರಟೆ ಕಾರ್ಯಕ್ರಮದಲ್ಲಿ ಭವನ ತುಂಬಿ ತುಳುಕಿತು. ಹರಟೆ ಆರಂಭವಾಗುವ ಹೊತ್ತಿಗೆ ಬಹುತೇಕ ಎಲ್ಲ ಆಸನಗಳು ಭರ್ತಿಯಾಗಿದ್ದವು. ಆರಂಭಗೊಂಡ ನಂತರವೂ ಜನರು ಬರುತ್ತಿದ್ದರು. ಮಕ್ಕಳು, ವಯಸ್ಕರು, ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲ ವಯೋಮಾನದವರು ಕಾರ್ಯಕ್ರಮಕ್ಕೆ ಬಂದಿದ್ದರು.
‘ಮುದ್ದುರಾಮ’ನ ನೆನೆದ ಕಣ್ಣನ್
ಮುದ್ದುರಾಮನ ಮನಸು ಎಂಬ ಅಂಕಿತದಲ್ಲಿ ಚೌಪದಿಗಳನ್ನು ಬರೆಯುತ್ತಿರುವ ಜಿಲ್ಲೆಯವರೇ ಆದ ಕೆ.ಸಿ.ಶಿವಪ್ಪ ಅವರನ್ನು ಹಿರೇಮಗಳೂರು ಕಣ್ಣನ್ ಅವರು ನೆನಪಿಸಿಕೊಂಡರು.
‘ಚಾಮರಾಜನಗರ ಶಾಪಗ್ರಸ್ತ ನಗರ ಎಂದು ಕೆಲವರು ಇಲ್ಲಿಗೆ ಬಾರದೇ ಇರುತ್ತಾರೆ. ಆದರೆ, ಇದು ಸರಸ್ವತಿಯ ವರ. ಕೆ.ಸಿ.ಶಿವಪ್ಪ ಅವರಿಗಿಂತ ಬೇರೆಗೆ ಉದಾಹರಣೆ ಬೇಕೇ’ ಎಂದು ಪ್ರಶ್ನಿಸಿದರು.
‘ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯರಾದ ಶಿವಪ್ಪ ಅವರಿಗೆ ಈಗ 83 ವರ್ಷ ವಯಸ್ಸು, 22 ಸಾವಿರ ಪದ್ಯಗಳನ್ನು ಬರೆದಿದ್ದಾರೆ. ಈಗಲೂ ದಿನಕ್ಕೆ 20 ಪದ್ಯಗಳನ್ನು ಬರೆಯುತ್ತಿದ್ದಾರೆ. ಅವರ ಎಲ್ಲ ಪದ್ಯಗಳಲ್ಲೂ ಜೀವನದ ಮೌಲ್ಯಗಳು ಅಡಕವಾಡಿವೆ’ ಎಂದು ಕೊಂಡಾಡಿದರೆಲ್ಲದೇ, ಕಾರ್ಯಕ್ರಮದ ನಡುವೆ ಪ್ರಶಾಂತ್ ಅವರ ಜೊತೆಗೂಡಿ ಜೀವನ, ದಾಂಪತ್ಯಕ್ಕೆ ಸಂಬಂಧಿಸಿದ ಹಲವು ಪದ್ಯಗಳನ್ನು ಹಾಡಿ ರಂಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.