ಚಾಮರಾಜನಗರ: ಮೂರು ದಿನಗಳ ಬಳಿಕ ಭಾನುವಾರ ರಾತ್ರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ.
ಚಿಕ್ಕ ಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಿಂದ ದಾಖಲೆ ಪ್ರಮಾಣದಲ್ಲಿ ನೀರು ನದಿಗೆ ಹರಿಸಲಾಗುತ್ತಿದ್ದು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕುಗಳ ಸುವರ್ಣಾವತಿ ನದಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಐದು ದಶಕಗಳಲ್ಲೇ ಕಂಡು ಕೇಳರಿಯದ ರೀತಿಯ ಪ್ರವಾಹ ಉಂಟಾಗಿದೆ.ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಜನವಸತಿ ಪ್ರದೇಶಗಳಿಗೂ ನೀರು ನುಗ್ಗಿದೆ.
ರಾತ್ರಿ 10ಗಂಟೆಯಿಂದ ನಸುಕಿನವರೆಗೂ ಎಡೆಬಿಡದೆ ಸುರಿದ ಮಳೆಯಿಂದಾಗಿ ಕೆರೆ ಕಟ್ಟೆಗಳಿಗೂ ಭಾರಿ ಪ್ರಮಾಣದಲ್ಲಿ ನೀರು ಹರಿದಿದ್ದು, ಈಗಾಗಲೇ ಭರ್ತಿಯಾಗಿದ್ದ ಕೆರೆಗಳು, ಹಳ್ಳ ಕೊಳ್ಳಗಳು ಮತ್ತೆ ಕಾಲುವೆಗಳು ಉಕ್ಕೇರಿ ಕೃಷಿ ಜಮೀನುಗಳು, ಗ್ರಾಮಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಕಳೆದ ವಾರದ ಪ್ರವಾಹದ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳದ ಯಳಂದೂರು ತಾಲ್ಲೂಕಿನ ಗ್ರಾಮಗಳು ಮತ್ತೆ ನೆರೆಯ ಸುಳಿಗೆ ಸಿಲುಕಿವೆ. ಗ್ರಾಮಸ್ಥರು ಆತಂಕಗೊಂಡಿದ್ದಾರೆ.
18 ಸಾವಿರ ಕ್ಯುಸೆಕ್ ಬಿಡುಗಡೆ: ಭಾನುವಾರ ರಾತ್ರಿ ಮಳೆಯ ಬಿರುಸು ಎಷ್ಟಿತ್ತೆಂದರೆ, ರಾತ್ರೋ ರಾತ್ರಿ ಅವಳಿ ಜಲಾಶಯಗಳಿಂದ ದಾಖಲೆಯ 18 ಸಾವಿರ ಕ್ಯುಸೆಕ್‌ಗಳಷ್ಟು ನೀರನ್ನು ಹೊರ ಬಿಡಬೇಕಾಯಿತು. ರಾತ್ರಿ 3 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಇಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗಿತ್ತು. ಬೆಳಿಗ್ಗೆ ಬಿಸಿಲಿನ ವಾತಾವರಣ ಇದ್ದುದರಿಂದ ಜಲಾಶಯದ ಒಳ ಹರಿವು ಕಡಿಮೆಯಾಯಿತು. ಎರಡೂ ಜಲಾಶಯಗಳಿಂದ ನೀರು ಹೊರಹೋಗುವ ಪ್ರಮಾಣ 14,200 ಕ್ಯುಸೆಕ್‌ಗೆ ಇಳಿಯಿತು. ಸಂಜೆಯ ಹೊತ್ತಿಗೆ ಇದನ್ನು 9000 ಕ್ಯುಸೆಕ್‌ಗೆ ಇಳಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಎರಡೂ ಜಲಾಶಯಗಳಿಗೆ ಈ ಪ್ರಮಾಣದಲ್ಲಿ ನೀರು ಬಂದಿರಲಿಲ್ಲ. 18 ಸಾವಿರ ಕ್ಯುಸೆಕ್‌ಗಳಷ್ಟು ನೀರು ಬಿಟ್ಟ ಉದಾಹರಣೆಯೂ ಇಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಲಾಶಯಗಳಿಂದ ಹರಿಯುವ ನೀರು ನದಿ ಹಾಗೂ ವಿವಿಧ ಕೆರೆಕಟ್ಟೆಗಳಿಗೆ ಹರಿಯುತ್ತದೆ. ಜಲಾಶಯಗಳ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳು ಈಗಾಗಲೇ ಭರ್ತಿಯಾಗಿ ಕೋಡಿ ಬಿದ್ದಿವೆ. ಕಳೆದ ವಾರ ಸುರಿದ ಸತತ ಮಳೆ ಹಾಗೂ ಭಾನುವಾರ ರಾತ್ರಿಯ ಮಳೆಗೆ ಕೆರೆಗಳಿಂದ ನದಿಯ ರೂಪದಲ್ಲಿ ನೀರು ಹೊರಬರುತ್ತಿತ್ತು.
ತಾಲ್ಲೂಕಿನ ಹರದನಹಳ್ಳಿಯ ಮರಗದಕೆರೆ, ದೊಡ್ಡಕೆರೆ, ಚಿಕ್ಕಕೆರೆ, ಕೋಡಿಮೋಳೆ ಕೆರೆ ಸೇರಿದಂತೆ ಹಲವು ಕೆರೆಗಳು ಉಕ್ಕಿ ಹರಿದು ಅಕ್ಕಪಕ್ಕದ ಗ್ರಾಮಗಳು, ಜಮೀನುಗಳಿಗೆ ನೀರು ನುಗ್ಗಿದೆ.
ಕೋಡಿಮೋಳೆ ಕೆರೆ ಎರಡು ಕಡೆಗಳಲ್ಲಿ ಕೋಡಿ ಬಿದ್ದು ಹರಿಯಿತು. ಕೆರೆಯ ನೀರಿನಿಂದಾಗಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಇನ್ನೊಂದು ಕಡೆ ಕೋಡಿ ಬಿದ್ದ ನೀರು ಸೇತುವೆ ಮೇಲೆ ಹರಿದು ವಾಹನ ಸಂಚಾರಕ್ಕೂ ಅಡಚಣೆಯಾಯಿತು.
ಹೆಬ್ಬಸೂರಿನ ಗೊಂಬಳ್ಳಿಲಿಂಗನಕೆರೆ ಉಕ್ಕಿ ಹರಿದು ಬೋವಿ ಜನಾಂಗದವರ ಮನೆಗಳು ಜಲಾವೃತವಾಯಿತು. ಅವರು ಸ್ಥಳೀಯ ದೇವಾಲಯದಲ್ಲಿ ಆಶ್ರಯ ಪಡೆದರು.
ಮಳೆಯಿಂದಾಗಿ ಹರದನಗಳ್ಳಿಯ ದಿವ್ಯಲಿಂಗೇಶ್ವರ ದೇವಾಲಯದ ಒಳಾಂಗಣವೂ ಜಲಾವೃತಗೊಂಡಿತು. ಗ್ರಾಮದ ಹಲವು ಕಟ್ಟಡಗಳ ಸುತ್ತ ಕೊಳಚೆ ನೀರು ನಿಂತು ಜನರು ಪರದಾಡಬೇಕಾಯಿತು.
ಹರದನಹಳ್ಳಿಯ ಮರಗದಕೆರೆಗೆ ಚಿಕ್ಕಕೆರೆ, ದೊಡ್ಡಕೆರೆಗಳಿಗೆ ಭಾರಿ ನೀರು ಹರಿಯುತ್ತಿದ್ದು, ಚಿಕ್ಕಕೆರೆಯ ಏರಿ ಮೇಲೆ ನೀರು ಹರಿಯಲು ಆರಂಭಿಸಿದ್ದು, ಒಡೆಯುವ ಆತಂಕ ಎದುರಾಗಿತ್ತು. ಕಾವೇರಿ ನೀರಾವರಿ ನಿಗಮವು ಏರಿಮೇಲೆ ಮಣ್ಣು ಹಾಕಿ ಏರಿಯನ್ನು ಎತ್ತರಗೊಳಿಸುವ ಪ್ರಯತ್ನ ಮಾಡಿತು.
ಸುವರ್ಣಾವತಿ ನದಿ ನಾಲೆಗಳು, ಕೆರೆಗಳ ನಾಲೆಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಜ್ಯೋತಿಗೌಡನಪುರ, ಹೆಬ್ಬಸೂರು, ನಲ್ಲೂರು, ಚಂದಕವಾಡಿ, ಕೂಡ್ಲೂರು, ಆಲೂರು, ಹೊಮ್ಮ, ಗೂಳಿಪುರ, ಕನ್ನೇಗಾಲ, ಯಳಂದೂರು ತಾಲ್ಲೂಕಿನ ಅಂಬಳೆ, ಮದ್ದೂರು, ಅಗರ ಮಾಂಬಳ್ಳಿ, ಮಲ್ಲಿಗೆಹಳ್ಳಿ, ಗಣಿಗನೂರು, ಯರಿಯೂರು ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಅಡಿಕೆ, ತೆಂಗು, ಬಾಳೆ, ಅರಿಸಿನ, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಜಲಾವೃತವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಇಂಥ ಪ್ರವಾಹ ಕಂಡೇ ಇಲ್ಲ: ಜಿಲ್ಲೆಯಲ್ಲಿ ಈ ಪ‍್ರಮಾಣದಲ್ಲಿ ಪ್ರವಾಹ ಬಂದಿದ್ದನ್ನು 50 ವರ್ಷಗಳಲ್ಲಿ ನಾವು ಕಂಡೇ ಇಲ್ಲ ಎಂದು ಹೇಳುತ್ತಾರೆ ತಾಲ್ಲೂಕಿನ ಹಿರಿಯರು.
‘1971–72ರಲ್ಲಿ ಚಿಕ್ಕಹೊಳೆ ಅಣೆಕಟ್ಟು ಒಡೆದು ಹೋಗಿತ್ತು. ಆ ಸಂದರ್ಭದಲ್ಲಿ ಭಾರಿ ಪ್ರವಾಹ ಬಂದಿತ್ತು. ಆ ಬಳಿಕ ಸುವರ್ಣಾವತಿ ನದಿ, ಹಳ್ಳ ಕೊಳ್ಳಗಳು, ಕಾಲುವೆಗಳು ಈ ಪ್ರಮಾಣದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದನ್ನು ನಾನು ನೋಡಿಲ್ಲ’ ಎಂದು ಆಲೂರಿನ ಸುಬ್ಬಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
60ರ ಹರೆಯದ ಕೂಡ್ಲೂರಿನ ಮರಿಸ್ವಾಮಿ ಅವರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
‘ಇನ್ನೂ ಎರಡು ಮೂರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮತ್ತೆ ಮಳೆಯಾದರೆ ಜನರ ಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ’ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ನಗರದಲ್ಲೂ ಮಳೆಯ ಹಾವಳಿ
ಭಾನುವಾರ ಸುರಿದ ಮಳೆಯಿಂದಾಗಿ ನಗರದಲ್ಲೂ ಜನರು ತೊಂದರೆ ಅನುಭವಿಸಿದರು. ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಜಿಲ್ಲಾಡಳಿತ ಭವನದ ಗೇಟ್‌ನಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಓಡಾಟಕ್ಕೆ ತೊಂದರೆಯಾಯಿತು. ಸಮೀಪದಲ್ಲೇ ಇರುವ ಇಂದಿರಾ ಕ್ಯಾಂಟೀನ್‌ಗೂ ನೀರು ನುಗ್ಗಿದ್ದರಿಂದ ಕ್ಯಾಂಟೀನ್ ಬಂದ್ ಮಾಡಲಾಗಿತ್ತು.
ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಶಿವಕುಮಾರಸ್ವಾಮಿ ಭವನದ ಒಳಕ್ಕೂ ಭಾನುವಾರ ರಾತ್ರಿ ನೀರು ನುಗ್ಗಿ ಅವಾಂತರವಾಯಿತು. ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭವೂ ನಡೆಯುತ್ತಿತ್ತು. ರಾತ್ರಿಯ ಭೋಜನ ಮುಗಿದ ಬಳಿಕ ಮಳೆ ಜೋರಾಯಿತು. 12ರ ನಂತರ ಕಲ್ಯಾಣ ಮಂಟಪ ಒಳಕ್ಕೆ ನೀರು ನುಗ್ಗಿ ಪಾತ್ರೆಗಳು ಕೊಚ್ಚಿ ಹೋಗದವು. ಪರಿಸ್ಥಿತಿಯನ್ನು ನಿಭಾಯಿಸಲು ಮದುವೆ ಮನೆಯವರು ಪಡಿಪಾಟಲು ಪಟ್ಟರು.
ರೈಲ್ವೆ ಬಡಾವಣೆ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿದರು.
ಕೊಚ್ಚಿಹೋದ ಸಾವಿರಾರು ತೆಂಗಿನಕಾಯಿ
ಚಾಮರಾಜನರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ತೆಂಗಿನ ತೋಟದಲ್ಲಿ ರಾಶಿ ಹಾಕಿದ್ದ ಸಾವಿರಾರು ತೆಂಗಿನಕಾಯಿಗಳು ಸೋಮವಾರ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ.
ಮಹೇಶ್ ಎಂಬ ರೈತರು ಕೆಲವು ದಿನಗಳ ಹಿಂದೆ ತೆಂಗಿನಕಾಯಿ ಕೀಳಿಸಿ ಜಮೀನಿನಲ್ಲಿ ರಾಶಿ ಹಾಕಿದ್ದರು. ಸೋಮವಾರ ಬೆಳಿಗ್ಗೆ ಸುವರ್ಣಾವತಿ ಪ್ರವಾಹ ನೀರು ಜಮೀನಿಗೆ ನುಗ್ಗಿ ತೆಂಗಿನಕಾಯಿಗಳು ಕೊಚ್ಚಿಕೊಂಡು ಹೋದವು. ಸುಮಾರು ಅರ್ಧದಷ್ಟು ತೆಂಗಿನಕಾಯಿಯನ್ನು ಹಿಡಿಯಲು ಸ್ಥಳೀಯರು ಯಶಸ್ವಿಯಾಗಿದ್ದಾರೆ.
ರಸ್ತೆ, ಸೇತುವೆ ಜಲಾವೃತ: ಪ್ರವಾಹದಿಂದ ತಾಲ್ಲೂಕಿನ ಹೊಮ್ಮ, ಹೊಂಗನೂರು, ಚಂದಕವಾಡಿ, ನಾಗವಳ್ಳಿ, ಯಳಂದೂರು ತಾಲ್ಲೂಕಿನಲ್ಲೂ ಹಲವು ಕಡೆಗಳಲ್ಲಿ ರಸ್ತೆ ಹಾಗೂ ಸೇತುವೆಗಳು ಜಲಾವೃತವಾಗಿದ್ದವು. ನೀರಿನಲ್ಲಿ ವಾಹನಗಳು ಸಂಚರಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.