ಕೊಳ್ಳೇಗಾಲ: ತಾಲ್ಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತ ಮೈದುಂಬಿಕೊಂಡು ಭೋರ್ಗರೆಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಕೇರಳದ ವಯನಾಡು ಹಾಗೂ ರಾಜ್ಯದ ಕೊಡಗು ಭಾಗಗಳಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಭರಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಹಸಿರ ಸಿರಿಯ ನಡುವೆ ಕೊರಕಲು ಬಂಡೆಗಳ ಮಧ್ಯೆ ಹಲವು ಕವಲುಗಳಾಗಿ ಹಾಲ್ನೊರೆಯ ರೂಪದಲ್ಲಿ ಪ್ರಪಾತಕ್ಕೆ ಜಿಗಿಯುತ್ತಿರುವ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕಳೆದ ಎರಡ್ಮೂರು ತಿಂಗಳಿಗಳಿಂದ ಜಲಪಾತ ನೀರಿಲ್ಲದೆ ಸೊರಗಿ ನಿಂತಿತ್ತು. ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳ ಹೊರಹರಿವು ಹೆಚ್ಚಾಗಿರುವುದರಿಂದ ಒಂದು ವಾರದಿಂದ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜೀವಕಳೆ ಬಂದಿದೆ. ಜಲಪಾತವು ಉಕ್ಕಿ ಹರಿಯುತ್ತಿದೆ. ರಜೆಯ ದಿನವಾದ ಭಾನುವಾರ ಸಾವಿರಾರು ಮಂದಿ ಜಲಪಾತವನ್ನು ವೀಕ್ಷಣೆ ಮಾಡಿ ಸಂತೋಷಪಟ್ಟರು.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮತ್ತೆ ಜಲಪಾತ ಕಂಗೊಳಿಸುತ್ತಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ. ಬೆಂಗಳೂರು, ಮಂಡ್ಯ, ಮೈಸೂರು, ಕೊಡಗು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ತುಮಕೂರು ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಪ್ರವಾಸಿಗರು ಭರಚುಕ್ಕಿ ವೀಕ್ಷಣೆಗೆ ಭೇಟಿ ನೀಡುತ್ತಿದ್ದಾರೆ.
‘ಕುಟುಂಬ ಸಮೇತ ಬಂದು ಜಲಪಾತ ವೀಕ್ಷಣೆ ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ವಿಶೇಷವಾಗಿ ಯುವಕ, ಯುವತಿಯರ ಗುಂಪು ಅಲ್ಲಲ್ಲಿ ಕಂಡುಬರುತ್ತಿದೆ. ಪ್ರತಿವರ್ಷ ಮಳೆ ಹೆಚ್ಚಾದಾಗ ಎಲ್ಲ ಜಲಪಾತಗಳನ್ನು ವೀಕ್ಷಣೆ ಮಾಡಿ ಹೋಗುತ್ತೇವೆ. ಇದರಿಂದ ಮನಸ್ಸಿಗೆ ಕೊಂಚ ಸಮಾಧಾನ ಸಿಗುತ್ತದೆ. ಈ ಬಾರಿ ಕುಟುಂಬ ಸಮೇತವಾಗಿ ಭರಚುಕ್ಕಿ ಜಲಪಾತವನ್ನು ವೀಕ್ಷಣೆ ಮಾಡಿ ಹೋಗುತ್ತಿದ್ದೇವೆ’ ಎಂದು ಹಾಸನ ಜಿಲ್ಲೆಯ ರುದ್ರ ನರಸಿಂಹ ಗೌಡ ಸಂತಸ ಹಂಚಿಕೊಂಡರು.
ಭರ್ಜರಿ ವ್ಯಾಪಾರ: ಬೇಸಿಗೆಯಲ್ಲಿ ನೀರಿಲ್ಲದ್ದರಿಂದ ಪ್ರವಾಸಿಗರಿಲ್ಲದೆ ಜಲಪಾತ ಭಣಗುಡುತ್ತಿತ್ತು. ಪರಿಣಾಮ ಜಲಪಾತ ಬಳಿ ವ್ಯಾಪಾರ ನಡೆಸುವವರಿಗೆ ಹೊಡೆತ ಬಿದ್ದಿತ್ತು. ಈಗ ಚುರುಮುರಿ, ಮಾವಿನಕಾಯಿ, ಐಸ್ ಕ್ರೀಂ ಸೇರಿದಂತೆ ಇತರೆ ಪದಾರ್ಥಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.
‘ದಾರಿಯುದ್ದಕ್ಕೂ 30ರಿಂದ 40 ಮೀನು ಫ್ರೈ ಮಳಿಗೆಗಳಿದ್ದು, ಭರಚುಕ್ಕಿ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಮೀನಿನ ಫ್ರೈ ಸವಿಯುತ್ತಿದ್ದ ದೃಶ್ಯಗಳು ಕಂಡುಬಂತು. ಇಲ್ಲಿ ಸಿಗುವ ಮೀನ್ ಫ್ರೈ ವಿಶೇಷವಾಗಿದ್ದು, ಪ್ರತಿ ವರ್ಷ ಜಲಪಾತ ವೀಕ್ಷಣೆಗೆ ಬಂದಾಗ ಸವಿದು ಹೋಗುತ್ತೇವೆ’ ಎಂದು ಮೈಸೂರಿನ ವೈಷ್ಣವಿ ಹೇಳಿದರು.
ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು ವಾರಾಂತ್ಯದಲ್ಲಿ ಗಿಜಿಗುಡುವ ತಾಣ ಭಣಗುಡುತ್ತಿದ್ದ ಜಲಪಾತ ಈಗ ಕಂಗೊಳಿಸುತ್ತಿದೆ
ಪ್ರತಿ ವರ್ಷ ಭರಚುಕ್ಕಿ ಜಲಪಾತ ವೀಕ್ಷಣೆ ಮಾಡಿ ಹೋಗುತ್ತಿದ್ದೇವೆ. ಈ ಬಾರಿ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು ಬಹಳ ಖುಷಿ ತಂದಿದೆ.ತನುಜಾ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.