ಚಾಮರಾಜನಗರ/ಯಳಂದೂರು/ಕೊಳ್ಳೇಗಾಲ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ತಡ ರಾತ್ರಿ ಬಿರುಸಿನ ಮಳೆಯಾಗಿದೆ.
ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗಿದೆ. ಯಳಂದೂರು ತಾಲ್ಲೂಕಿನ ಕೋಮಾರನಪುರದಲ್ಲಿ ಮನೆ ಕುಸಿದು ಬಿದ್ದಿದ್ದು, ತಂದೆ, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಕೊಳ್ಳೇಗಾಲದ ಮುಡಿಗುಂಡ ಬಡಾವಣೆಯ ಮಹದೇವಮ್ಮ ಎಂಬುವರ ಮನೆ ಗೋಡೆ ಕುಸಿದು, ಎರಡು ಬೈಕ್‌ಗಳು ಜಖಂ ಆಗಿವೆ. ಮಹದೇವಮ್ಮ ಹಾಗೂ ಮನೆಯಲ್ಲಿದ್ದ ಒಂಬತ್ತು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
'ಮಳೆ 12 ಗಂಟೆಯ ನಂತರ ಆರಂಭವಾಯಿತು. ಮನೆಯ ಒಳಗಡೆ ನೀರು ಸೋರಲು ಆರಂಭವಾಯಿತು. ಮಗ ಪ್ರಜ್ವಲ್ ಜೊತೆಗೂಡಿ ಹೊರ ಬರುತ್ತಿದ್ದಂತೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿತು' ಎಂದು ಕುಮಾರನಪುರದ ಲಿಂಗಾಯತರ ಬಡಾವಣೆಯ ಪುಟ್ಟಸ್ವಾಮಿ ಹೇಳಿದರು.
ಭರ್ಜರಿ ಮಳೆ: ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ರಾತ್ರಿ 11 ಗಂಟೆಯ ನಂತರ ಧಾರಾಕಾರ ಮಳೆಯಾಗಿದೆ. ತಾಲ್ಲೂಕಿನ 7.15 ಸೆಂ.ಮೀ ಮಳೆಯಾಗಿದೆ. ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿಯಲ್ಲಿ 6.45 ಸೆಂ.ಮೀ ಮಳೆ ಬಿದ್ದಿದೆ.
ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಮೂರು ತಾಸು ಮಳೆಯಾಗಿದೆ. ರಾತ್ರಿ ಮೂರು ತಾಸು ಮಳೆ ಸುರಿದಿದೆ. ಇದರಿಂದ ಕಾಫಿ ಬೆಳಗಾರರಲ್ಲಿ ಹರ್ಷ ಮೂಡಿಸಿದೆ.
ವಾರದಿಂದ ಅಲ್ಲಲ್ಲಿ ತುಂತುರು ಮಳೆಯಾಗುತ್ತಿತ್ತು. ಜಮೀನನ್ನು ಬಿತ್ತನೆಗೆ ರೈತರು ಸಿದ್ಧತೆಯಲ್ಲಿ ತೊಡಗಿದ್ದರು. ರಾತ್ರಿ ಸುರಿದ ಮಳೆ ಕೃಷಿಕರಲ್ಲಿ ಸಂತಸ ತಂದಿದೆ. ದ್ವಿದಳ ದಾನ್ಯಗಳ ಬಿತ್ತನೆಗೆ ರೈತರು ಮುಂದಾಗಿದ್ದಾರೆ.
'ರಾತ್ರಿ 11 ರಿಂದ ಬೆಳಗಿನ ಜಾವ ಎರಡು ಗಂಟೆಯ ತನಕ ಭರ್ಜರಿ ಮಳೆ ಆಯಿತು. ಕಾಡಂಚಿನ ಗ್ರಾಮಗಳ ರಸ್ತೆ ಸುತ್ತಮುತ್ತ ನೀರು ಹರಿದಿದ್ದು, ವಾತಾವರಣದಲ್ಲಿ ತಪ್ಪು ತುಂಬಿದೆ' ಎಂದು ಕೃಷಿಕ ಶಿವರಾಜು ಹೇಳಿದರು.
ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ, ಜಕ್ಕಳ್ಳಿ, ಜಾಗೇರಿ, ಧನಗೆರೆ, ಸರಗೂರು, ನರಿಪುರ, ಗುಂಡೇಗಾಲ, ಪಾಳ್ಯ, ಕುಣಗಳ್ಳಿ, ಕುಂತೂರು, ಕೆಂಪನಪಾಳ್ಯ, ತಿಮ್ಮರಾಜಿಪುರ, ಮಧುವನಹಳ್ಳಿ, ದೊಡ್ಡಿಂದುವಾಡಿ ಸೇರಿದಂತೆ ಅನೇಕ ಕಡೆ ಉತ್ತಮ ಮಳೆಯಾಗಿದೆ.
ಹನೂರು, ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲೂ ತುಂತುರು ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡದ ವಾತಾವರಣ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.