ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಪ್ರವಾಸಿ ತಾಣವಾಗಿರುವ ಬಿಳಿಗಿರಿರಂಗನಬೆಟ್ಟ ಈಗ ಮಂಜಿನ ಬೆಟ್ಟವಾಗಿ ಬದಲಾಗಿದೆ.
ನಿರಂತರ ಮಳೆ, ಮೋಡ ಕವಿದ ವಾತಾವರಣ ಹಾಗೂ ಚಳಿ ಗಾಳಿಯಿಂದ ಬಿಳಿಗಿರಿರಂಗನಬೆಟ್ಟ ಪೂರ್ತಿ ಮಂಜಿನಿಂದ ಮುಸುಕಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ಬಿರುಸು ಪಡೆದ ಬಳಿಕ, ಜಿಲ್ಲೆಯಲ್ಲೂ ಸಾಧಾರಣ ಮಳೆಯಾಗುತ್ತಿದೆ.
ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್ ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಬಿಳಿಗಿರಿರಂಗನ ಬೆಟ್ಟದಲ್ಲಿ ವಾರದಿಂದೀಚೆಗೆ ದಟ್ಟ ಮಂಜಿನ ವಾತಾವರಣ ಇದೆ. ವೇಗವಾಗಿ ಬೀಸುವ ಶೀತಗಾಳಿಯಿಂದ ಥರಗುಟ್ಟುವ ಚಳಿಯ ಅನುಭವವಾಗುತ್ತಿದೆ. ಬೆಟ್ಟದಲ್ಲಿ ವಾತಾವರಣದ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ.
ಬೆಳಿಗ್ಗೆ 11 ಗಂಟೆಯಾದರೂ ಮಂಜು ತಿಳಿಯಾಗುತ್ತಿಲ್ಲ. ಬೆಟ್ಟದ ಸುತ್ತ ಗಾಳಿಗೆ ಚಲಿಸುವ ಮಂಜಿನ ದೃಶ್ಯಾವಳಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
'ಆಷಾಢ ಆರಂಭವಾದಾಗಿನಿಂದ ಬೆಟ್ಟದಲ್ಲಿ ಮಳೆಯಾಗುತ್ತಿದೆ. ಪ್ರತಿ ದಿನವೂ ದಟ್ಟ ಇಬ್ಬನಿ ಸುರಿಯುತ್ತಿದೆ. ಮಧ್ಯಾಹ್ನವಾದರೂ ತಿಳಿಯಾಗುತ್ತಿಲ್ಲ. ಶೀತಗಾಳಿಯಿಂದಾಗಿ ತೀವ್ರ ಚಳಿಯೂ ಇದೆ. ಶ್ರಾವಣದವರೆಗೂ ಇದೇ ವಾತಾವರಣ ಇರಲಿದೆ. ಈ ಸಮಯದಲ್ಲೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ' ಎಂದು ದೇವಾಲಯದಲ್ಲಿ ಹೂವಿನ ವ್ಯಾಪಾರ ಮಾಡುತ್ತಿರುವ ಮಣಿ 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.