ADVERTISEMENT

ಚಾಮರಾಜನಗರ | ದನದ ಕೊಟ್ಟಿಗೆಗಳಾದ ಹೆದ್ದಾರಿಗಳು: ಸುಗಮ ಸಂಚಾರಕ್ಕೆ ಅಡ್ಡಿ

ಬಾಲಚಂದ್ರ ಎಚ್.
Published 18 ನವೆಂಬರ್ 2024, 7:12 IST
Last Updated 18 ನವೆಂಬರ್ 2024, 7:12 IST
<div class="paragraphs"><p>ಗುಂಡ್ಲುಪೇಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿರುವ ಬಿಡಾಡಿ ದನಗಳು.</p></div>

ಗುಂಡ್ಲುಪೇಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿರುವ ಬಿಡಾಡಿ ದನಗಳು.

   

ಚಾಮರಾಜನಗರ: ಜಿಲ್ಲೆಯಾದ್ಯಂತ ದನ–ಕರು, ಕುರಿ–ಮೇಕೆ, ಕುದುರೆ–ಕತ್ತೆಗಳು ಸೇರಿದಂತೆ ಬಿಡಾಡಿ ಜಾನುವಾರುಗಳ ಉಪಟಳ ಹೆಚ್ಚಾಗಿದ್ದು ವಾಹನ ಸವಾರರು, ಪಾದಚಾರಿಗಳು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕೊಟ್ಟಿಗೆಯಲ್ಲಿ ಇರಬೇಕಾದ ದನಗಳು ರಸ್ತೆಗಳು, ಸಾರ್ವಜನಿಕರ ಸ್ಥಳಗಳಲ್ಲಿ ಅಲೆಯುತ್ತಿರುವ ಪರಿಣಾಮ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ವಾಹನ ಸವಾರರ ಹಾಗೂ ಜಾನುವಾರುಗಳ ಜೀವಕ್ಕೆ ಕಂಟಕ ಎದುರಾಗಿದೆ.

ADVERTISEMENT

ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಬಿಡಾಡಿ ದನ, ಜಾನುವಾರುಗಳ ಕಾಟ ಮಿತಿಮೀರಿದೆ. ನಗರದ ಬಿ.ರಾಚಯ್ಯ ಜೋಡಿ ರಸ್ತೆ, ಮೈಸೂರು–ನಂಜನಗೂಡು–ಕೊಳ್ಳೇಗಾಳ ಸಂಪರ್ಕಿಸುವ ಡಿವಿಯೇಷನ್ ರಸ್ತೆ, ತಮಿಳುನಾಡಿಗೆ ಸಂಪರ್ಕ ಬೆಳೆಸುವ ಸತ್ತಿ ರಸ್ತೆ, ಗುಂಡ್ಲುಪೇಟೆಗೆ ಸಾಗುವ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳ ಹಿಂಡು ಬೀಡುಬಿಟ್ಟಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ರಸ್ತೆಗೆ ಅಡ್ಡಲಾಗಿ ದನಗಳು ಓಡಾಡುತ್ತಿರುವುದರಿಂದ ‌ಮಲಗುತ್ತಿರುವುದರಿಂದ ಅಪಘಾತಗಳು ಸಂಭವಿಸಿ ಜನ–ಜಾನುವಾರು ಗಂಭೀರವಾಗಿ ಗಾಯಗೊಳ್ಳುತ್ತಿವೆ. ತಹಶೀಲ್ದಾರ್ ಕಚೇರಿ, ಜಿಲ್ಲಾಡಳಿತ ಕಚೇರಿ, ಜಿಲ್ಲಾ ಆಸ್ಪತ್ರೆ, ನಗರಸಭೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಜಿಲ್ಲಾ ನ್ಯಾಯಾಲಯ ಸೇರಿದಂತೆ ಸಾರ್ವಜನಿಕರು ಹೆಚ್ಚು ಓಡಾಡುವ ಸ್ಥಳಗಳಲ್ಲಿಯೇ ಬಿಡಾಡಿ ದನಗಳು ಅಲೆಯುತ್ತಿರುವುದರಿಂದ ಸಮಸ್ಯೆ ಗಂಭೀರವಾಗಿದೆ.

ನೆರೆಯ ಮೈಸೂರು, ಬೆಂಗಳೂರು ಸೇರಿದಂತೆ ತಮಿಳುನಾಡು, ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಚಾಮರಾಜನಗರ ಮೇಲೆ ಹಾದುಹೋಗಿದ್ದು ಬಿಡಾಡಿ ದನಗಳ ಹಾವಳಿಗೆ ವಾಹನ ಸವಾರರು ಬೇಸತ್ತಿದ್ದಾರೆ.

ಜೀವಭಯದಲ್ಲಿ ನಾಗರಿಕರು:

ಕೊಳ್ಳೇಗಾಲ ನಗರದ ಪ್ರತಿ ಬಡಾವಣೆಗಳ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಮಿತಿಮೀರಿದೆ. ಸಾರ್ವಜನಿಕರು, ವಾಹನ ಸವಾರರು ನಿತ್ಯ ಜೀವ ಭಯಯಲ್ಲಿ ಸಂಚರಿಸುವಂತಾಗಿದೆ. ಬಿಡಾಡಿ ದನ ಹಾಗೂ ಜಾನುವಾರಗಳ ಹಾವಳಿ ತಡೆಯಲು ನಗರಸಭೆ ವಿಫಲವಾಗಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಡಾ.ರಾಜಕುಮಾರ್ ರಸ್ತೆ, ಆರ್‌ಎಂಸಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೂರಾರು ಬಿಡಾಡಿ ದನಗಳು ಬಿಡಾರ ಹೂಡಿವೆ. ಕೆಲವೊಮ್ಮೆ ರಸ್ತೆಯಲ್ಲಿ ಸಾಗುವ ಪಾದಚಾರಿಗಳ ಮೇಲೆ ಏಕಾಏಕಿ ಎರಗುತ್ತಿರುವ ದನಗಳಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. 

ಹಳೆ ಕುರುಬರ ಬಡಾವಣೆ, ನೂರ್ ಮೊಹಲ್ಲಾ ಬಡಾವಣೆ ಸೇರಿದಂತೆ ನಗರಕ್ಕೆ ಹೊಂದಿಕೊಂಡಿರುವ ಹಲವು ಬಡಾವಣೆಗಳಿಂದ ನಿತ್ಯವೂ ನೂರಾರು ಬಿಡಾಡಿ ದನಗಳು ನಗರ ಪ್ರವೇಶಿಸುತ್ತಿದ್ದು ಯಾರ ಅಂಜಿಕೆ ಇಲ್ಲದೆ ಎಲ್ಲೆಂದರಲ್ಲಿ ನಿಂತು, ಮಲಗಿ ತೊಂದರೆ ಕೊಡುತ್ತವೆ. ಕೆಲವೊಮ್ಮೆ ರಸ್ತೆಯ ಮಧ್ಯೆಯೇ ಮಲಗಿ ಸಂಚಾರ ದಟ್ಟಣೆಗೂ ಕಾರಣವಾಗುತ್ತಿವೆ.

ಕಾರು, ಬಸ್, ಸರಕು ಸಾಗಣೆ ವಾಹಗನಳು, ದ್ವಿಚಕ್ರ ವಾಹನಗಳು ಎಷ್ಟೆ ಹಾರ್ನ್ ಮಾಡಿದರೂ ಒಂದಿಂಚೂ ಜಾಗ ಕದಲಿಸುವುದಿಲ್ಲ. ಬೆಳಿಗ್ಗೆ ಹಾಗೂ ಸಂಜೆಯ ಹೊತ್ತು ಶಾಲೆಗೆ ಹೋಗುವ ಮಕ್ಕಳು ದನಗಳ ದಾಳಿ ಭಯದಲ್ಲಿ ಬಿದ್ದು ಗಾಯಮಾಡಿಕೊಂಡಿದ್ದಾರೆ.

ಪಾದಚಾರಿ ಮಾರ್ಗಗಳನ್ನೂ ಬಿಡಾಡಿ ದನಗಳು ಅತಿಕ್ರಮಿಸಿಕೊಳ್ಳುವುದರಿಂದ ಸಾರ್ವಜನಿಕರು ರಸ್ತೆ ಮೇಲೆ ನಡೆಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದರಿಂದ ಆಗಾಗ ಅಪಘಾತಗಳು ಸಂಭವಿಸಿದೆ. 15 ದಿನಗಳ ಹಿಂದಷ್ಟೆ ನಗರದಲ್ಲಿ ದಂಪತಿಗಳ ಮೇಲೆ ಬಿಡಾಡಿ ದನ ಏಕಾಏಕಿ ದಾಳಿ ಮಾಡಿದ್ದು ಸಣ್ಣ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ನಾಗರಿಕರು ರಸ್ತೆಯ ಮೇಲೆ ಭಯದಿಂದ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಹಿರಿಯ ನಾಗರಿಕರಾದ ಧರ್ಮೇಂದ್ರ.

ಮುಖ್ಯರಸ್ತೆಯಲ್ಲೇ ಬಿಡಾರ: ಹನೂರು ಪಟ್ಟಣದ ಬಸ್ ನಿಲ್ದಾಣ ಹಾಗೂ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಅತಿಯಾಗಿದ್ದು ವಾಹನ ಸವಾರರ ಹಾಗೂ ಸಾರ್ವಜನಿಕರ ಓಡಾಟಕ್ಕೆ ಕಿರಿಕಿರಿಯಾಗುತ್ತಿದೆ. ಮಹದೇಶ್ವರ ಬೆಟ್ಟ, ಬಂಡಳ್ಳಿ ಹಾಗೂ ಲೊಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ದಿನಬೆಳಗಾದರೆ ದನಗಳು ಅಲೆಯುತ್ತಿದ್ದು ವಾಹನಗಳಿಗೆ ಅಡ್ಡಲಾಗಿ ಅಪಘಾತಗಳಿಗೆ ಕಾರಣವಾಗುತ್ತಿವೆ.

ವೇಗವಾಗಿ ಚಲಿಸುವ ವಾಹನಗಳಿಗೆ ಏಕಾಏಕಿ ಅಡ್ಡಲಾಗಿ ನಿಲ್ಲುವ ದನಗಳಿಂದ ಅಪಘಾತಗಳು ಸಂಭವಿಸುತ್ತಿದ್ದು ಜನ ಜಾನುವಾರು ಜೀವಗಳಿಗೆ ಕಂಟಕವಾಗುತ್ತಿದೆ. ಸ್ಥಳೀಯ ಆಡಳಿತ ಅಧಿಕಾರಿಗಳಿಗೆ ಸಮಸ್ಯೆಯ ಅರಿವಿದ್ದರೂ ಬಿಡಾಡಿ ದನಗಳ ಉಪಟಳ ತಡೆಗೆ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಗುಂಡ್ಲುಪೇಟೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವೃತ್ತಗಳಲ್ಲಿ ಬಿಡಾಡಿ ದನಗಳ ಹಾವಳಿ ಮಿತಿಮೀರಿದೆ. ಎಲ್ಲೆಂದರಲ್ಲಿ ಗುಂಪಾಗಿ ನಿಲ್ಲುವ ದನಗಳು ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡುತ್ತಿವೆ. ದ್ವಿಚಕ್ರವಾಹನ ಸವಾರದು ಜೀವಭಯದಲ್ಲಿ ಸಂಚಾರ ಮಾಡಬೇಕಿದೆ.

ಹೆದ್ದಾರಿ ಮೇಲೆ ಸಂಚಾರ: ತಾಲ್ಲೂಕು ಕೇಂದ್ರವಾದ ಗುಂಡ್ಲುಪೇಟೆ ಪಟ್ಟಣಕ್ಕೆ ನಿತ್ಯ ಹಳ್ಳಿಗಳಿಂದ ಸಾವಿರಾರು ಮಂದಿ ಬರುತ್ತಾರೆ. ತಾಲ್ಲೂಕಿನ ಮೇಲೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಕೇರಳ, ತಮಿಳುನಾಡು ಹಾಗೂ ಹೊರ ಜಿಲ್ಲೆಗಳ ವಾಹನಗಳು ನಿರಂತರವಾಗಿ ಸಾಗುತ್ತಿರುತ್ತವೆ. 

ಹೀಗೆ ಸಾಗುವಾಗ ಏಕಾಏಕಿ ದನಗಳು ಅಡ್ಡಿಯಾಗಿ ಅಪಘಾತಗಳು ಸಂಭವಿಸುತ್ತಿವೆ. ಹಗಲು ರಾತ್ರಿ ವೇಳೆಯೂ ದನಗಳು ರಸ್ತೆಯ ಮೇಲೆ ಮಲಗುವುದರಿಂದ ನಿತ್ಯವೂ ಜಾನುವಾರುಗಳಿಗೆ ವಾಹನಗಳು ಡಿಕ್ಕಿಯಾಗುತ್ತಲೇ ಇವೆ. ಅವಘಡದಲ್ಲಿ ನಾಗರಿಕರು ಗಂಭೀರವಾಗಿ ಗಾಯಗೊಂಡರೆ, ಜಾನುವಾರುಗಳು ಸಹ ಕಾಲು ಮುರಿದುಕೊಂಡು ಸೂಕ್ತ ಚಿಕಿತ್ಸೆ ಸಿಗದೆ ರಸ್ತೆಯ ಬದಿ ನರಳುವ ದೃಶ್ಯಗಳನ್ನು ಅಲ್ಲಲ್ಲಿ ಕಾಣಬಹುದಾಗಿದೆ. 

ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸಬೇಕಾದ ಪುರಸಭೆ ಹಾಗೂ ಪೊಲೀಸ್‌ ಇಲಾಖೆ ನಿದ್ರೆಗೆ ಜಾರಿದೆ ಎಂದು ಸಾರ್ವಜನಿಕರ ಟೀಕಿಸುತ್ತಿದ್ದಾರೆ.

ಬೀದಿ ಬದಿ ವ್ಯಾಪಾರಿಗಳಿಗೂ ಕಿರಿಕಿರಿ: ಪಟ್ಟಣದ ಬೀದಿಬದಿ ಹೂ-ಹಣ್ಣು, ತರಕಾರಿ ಸಹಿತ ದಿನಸಿ ವ್ಯಾಪಾರಿಗಳು ಕೂಡ ಬಿಡಾಡಿ ದನಗಳ ಹಾವಳಿಗೆ ಬೇಸತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಏಕಾಏಕಿ ತರಕಾರಿ, ಹಣ್ಣುಗಳಿಗೆ ಬಾಯಿ ಹಾಕುವ ದನಗಳು ಕ್ಷಣಮಾತ್ರದಲ್ಲಿ ಚೆಲ್ಲಾಪಿಲ್ಲಿ ಮಾಡುತ್ತಿವೆ. ರಸ್ತೆ, ಚರಂಡಿಯೊಳಗೆ ಹಣ್ಣು, ತರಕಾರಿಗಳು ಬಿದ್ದು ನಷ್ಟ ಅನುಭವಿಸುವಂತಾಗಿದೆ. ದನಗಳ ಕಾಟದಿಂದ ಮೂತ್ರ ವಿಸರ್ಜನೆಗೂ ತೆರಳಲಾಗದೆ ಸಂಕಷ್ಟ ಅನುಭವಿಸುವಂತಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ಪೂರಕ ಮಾಹಿತಿ: ಮಹದೇವ್ ಹೆಗ್ಗವಾಡಿಪುರ, ಬಸವರಾಜು ಬಿ, ಮಲ್ಲೇಶ್‌ ಎಂ, ನಾ.ಮಂಜುನಾಥಸ್ವಾಮಿ, ಅವಿನ್ ಪ್ರಕಾಶ್ ವಿ.

ಕೊಳ್ಳೇಗಾಲದ ಆರ್‌ಎಂಸಿ ಮುಖ್ಯ ರಸ್ತೆಯಲ್ಲಿ ಬೀದಿ ದನಗಳು ಮಲಗಿರುವುದು
ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಲಗಿರುವ ಬಿಡಾಡಿ ದನ

ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡದಂತೆ ಸೂಚನೆ ನಗರದ ಪ್ರಮುಖ ವೃತ್ತಗಳಲ್ಲಿ ಬಿಡಾಡಿ ದನಗಳು ಸೇರಿದಂತೆ ಜಾನುವಾರುಗಳು ವಾಹನಗಳ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿವೆ. ಹೆಚ್ಚಾಗಿ ಜನಸಂದಣಿ ಇರುವ ಪಚ್ಚಪ್ಪ ವೃತ್ತ ಮತ್ತು ಸಂತೇಮರಹಳ್ಳಿ ವೃತ್ತದ ರಸ್ತೆಗಳಲ್ಲಿ ಪ್ರಾಣಿಗಳು ವಾಸ್ತವ್ಯ ಹೂಡುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ಬಿಡಾಡಿ ದನಗಳು ಮೇಕೆಗಳು ಕುದುರೆಗಳು ಹಾಗೂ ಇತರೆ ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡದಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಪ್ರಾಣಿಗಳನ್ನು ಸೆರೆಹಿಡಿದು ಮೈಸೂರಿನ ಪಿಂಜರಪೋಲ್‌ಗೆ ಕಳುಹಿಸಲಾಗುವುದು.  

-ರಾಮದಾಸ್ ನಗರಸಭೆ ಪೌರಾಯುಕ್ತ

ಕಟ್ಟುನಿಟ್ಟಿನ ಸೂಚನೆ ಹನೂರು ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳಿದ್ದು ದನಗಳ ಮಾಲೀಕರಿಗೆ ಸೂಚನೆ ನೀಡಿ ರಸ್ತೆಗೆ ಬಿಡದಂತೆ ಕಡಿವಾಣ ಹಾಕಲಾಗುವುದು.  ಅಶೋಕ್ ಮುಖ್ಯಾಧಿಕಾರಿ ಪ.ಪಂ ಹನೂರು ಮಾಲೀಕರಿಗೆ ಎಚ್ಚರಿಕೆ ಬಿಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಹಲವು ಬಾರಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಮುಂದೆ ಪುರಸಭೆಯಿಂದ ಕಠಿಣ ಕ್ರಮ ಜರುಗಿಸಲಾಗುವುದು  

-ವಸಂತ ಕುಮಾರಿ ಪುರಸಭೆ ಮುಖ್ಯಾಧಿಕಾರಿ

‘ತುರ್ತು ಗಮನ ಹರಿಸಿ’ ಕೊಳ್ಳೇಗಾಲ ನಗರದಲ್ಲಿ ಬೀದಿದನಗಳ ಹಾವಳಿ ಮಿತಿಮೀರಿದ್ದು ನಗರಸಭೆ ಗಮನಹರಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ನೇರವಾಗಿ ನಗರಸಭೆ ಕಾರಣವಾಗುತ್ತದೆ.  ಚೇತನ್ ಕೊಳ್ಳೇಗಾಲ ನಿವಾಸಿ ಸರ್ಕಾರಿ ಕಚೇರಿಗಳಲ್ಲಿ ವಾಸ್ತವ್ಯ ಯಳಂದೂರು ತಾಲ್ಲೂಕು ಕಚೇರಿ ಸುತ್ತಮುತ್ತ ದನಕರುಗಳ ಸಂಚಾರ ಸಾಮಾನ್ಯವಾಗಿದೆ. ಕೆಲವು ಕಚೇರಿಗಳ ಮುಂಭಾಗದ ಗೇಟ್‌ಗಳು ಸದಾ ತೆರೆದಿರುವುದರಿಂದ ಕುರಿ–ಮೇಕೆಗಳು ಅಡ್ಡಾಡುತ್ತಿವೆ.  

-ಕುಮಾರ್ ಗಾಣಿಗನೂರು ಯಳಂದೂರು

ರಸ್ತೆ ನಡುವೆ ಠಿಕಾಣಿ ರಾಷ್ಟ್ರೀಯ ಹೆದ್ದಾರಿ ನಡುವೆ ದನಗಳು ಸಂಚರಿಸುವುದು ಸಾಮಾನ್ಯವಾಗಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಬಿಡಾಡಿ ದನಗಳ ಹಾವಳಿ ನಿಯಂತ್ರಿಸಬೇಕು.  ರಘು ನಾಯಕ್ ಯಳಂದೂರು ‘ಗೋಶಾಲೆಗೆ ಕೊಡಿ’ ಸ್ಥಳೀಯ ಆಡಳಿತ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗಳಿಗೆ ಕಳುಹಿಸಬೇಕು. ಇದರಿಂದ ಸಮಸ್ಯೆ ನಿಯಂತ್ರಿಸಲು ಸಾಧ್ಯವಿದೆ.  

-ಕುಮಾರ್ ಹೆಗ್ಗವಾಡಿ.

ದನಗಳನ್ನು ಬೀದಿಗೆ ಬಿಡುವುದೇಕೆ
‘ಬಿಡಾಡಿ ದನಗಳಿಗೆ ಮಾಲೀಕರು ಇದ್ದು ನಿತ್ಯ ಬೆಳಿಗ್ಗೆ ಹಾಲು ಕರೆದು ದನಗಳನ್ನು ಬೀದಿಗೆ ಬಿಡಲಾಗುತ್ತದೆ. ಕೊಟ್ಟಿಗೆಯಲ್ಲಿ ಕಟ್ಟಿದರೆ ಬೆಳಿಗ್ಗಿನಿಂದ ಸಂಜೆಯವರೆಗೂ ಮೇವು ನೀರು ಸೇರಿದಂತೆ ನಿರ್ವಹಣೆಗೆ ಒಬ್ಬರ ಅವಶ್ಯಕತೆಯೂ ಇರುವುದರಿಂದ ಮಾಲೀಕರು ದನಗಳನ್ನು ಬೀದಿಗೆ ಬಿಡುತ್ತಿದ್ದಾರೆ. ಸಾರ್ವಜನಿಕರು ರಸ್ತೆಗೆ ತಂದು ಸರಿಯುವ ಹಸಿ ತ್ಯಾಜ್ಯ ಹೂವು ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ರಾಶಿಯಾಗಿ ಬೀಳುವ ತ್ಯಾಜ್ಯವೇ ಬಿಡಾಡಿ ದನಗಳ ಪ್ರಮುಖ ಆಹಾರ. ಬೆಳಿಗ್ಗಿನಿಂದ ಸಂಜೆಯವರೆಗೂ ಬೀದಿಗಳನ್ನು ಸುತ್ತುವ ದನಗಳು ಕತ್ತಲಾಗುತ್ತಿದ್ದಂತೆ ಮನೆಯ ಹಾದಿ ಹಿಡಿಯುತ್ತವೆ. ಕೆಲವು ಸಲ ಮಾಲೀಕರೇ ಸಂಜೆ ದನಗಳನ್ನು ಮನೆಗೆ ಎಳೆದೊಯ್ಯುತ್ತಾರೆ.
ಜಾನುವಾರು ಜೀವಕ್ಕೂ ಕಂಟಕ
‘ನಿತ್ಯ ನಗರದ ಜನವಸತಿ ಪ್ರದೇಶ ಹೋಟೆಲ್ ರೆಸ್ಟೋರೆಂಟ್‌ ಮಾರುಕಟ್ಟೆಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ ಪ್ಲಾಸ್ಟಿಕ್ ಕವರ್‌ಗಳ ಸಹಿತ ಜಾನುವಾರುಗಳ ಹೊಟ್ಟೆ ಸೇರುತ್ತಿವೆ. ಕವರ್‌ನೊಳಗೆ ಕಟ್ಟಿ ಎಸೆಯುವ ಹಸಿ ತ್ಯಾಜ್ಯವನ್ನು ತಿನ್ನುವ ಭರದಲ್ಲಿ ಅಪಾಯಕಾರಿ ಪ್ಲಾಸ್ಟಿಕ್‌ ಕವರ್‌ಗಳನ್ನೂ ಬಿಡಾಡಿ ದನಗಳು ಸೇವಿಸುತ್ತಿವೆ. ಈಚೆಗೆ ಮಾರುಕಟ್ಟೆ ಬಳಿ ದನವೊಂದು ಹೊಟ್ಟೆ ಉಬ್ಬರಿಸಿ ಮೃತಪಟ್ಟಾಗ ದೇಹದೊಳಗೆ ಐದಾರು ಕೆ.ಜಿ ಪ್ಲಾಸ್ಟಿಕ್‌ ಕವರ್‌ಗಳು ಜೀರ್ಣವಾಗದೆ ಉಳಿದಿತ್ತು ಎನ್ನುತ್ತಾರೆ’ ಮಾರುಕಟ್ಟೆಯ ವ್ಯಾಪಾರಿ ರಫೀಕ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.