ADVERTISEMENT

ಯಳಂದೂರು | ದರ್ಪಣದಲ್ಲಿ ದರ್ಶನ ಕೊಡುವ ಹಿಂಡಿ ಮಾರಮ್ಮ

ಫ್ಲೆಕ್ಸ್, ಬ್ಯಾನರ್ ಧ್ವನಿವರ್ಧಕ ನಿಷೇಧ: ಅನಿವಾಸಿ ಭಾರತೀಯರಿಂದ ದರ್ಶನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 5:18 IST
Last Updated 27 ಅಕ್ಟೋಬರ್ 2024, 5:18 IST
ಯಳಂದೂರು ತಾಲ್ಲೂಕಿನ ಅಗರ-ಮಾಂಬಳ್ಳಿ ಹಿಂಡಿ ಮಾರಮ್ಮ ದೇವಳದ ನೋಟ
ಯಳಂದೂರು ತಾಲ್ಲೂಕಿನ ಅಗರ-ಮಾಂಬಳ್ಳಿ ಹಿಂಡಿ ಮಾರಮ್ಮ ದೇವಳದ ನೋಟ    

ಯಳಂದೂರು: ಪ್ರತಿ ಊರಿನಲ್ಲೂ ಮಾರಮ್ಮ ಗ್ರಾಮವನ್ನು ಪೊರೆಯುತ್ತಾಳೆ ಎಂಬುದು ನಂಬಿಕೆ. ಭಕ್ತರು ಮಾರಿಯ ದರ್ಶನ ಪಡದು ಪುನೀತರಾಗುತ್ತಾರೆ. ಆದರೆ, ಅಗರ-ಮಾಂಬಳ್ಳಿ ಗ್ರಾಮದಲ್ಲಿ ಮಾತ್ರ ಮಾರಮ್ಮನ ಆಚರಣೆ ವಿಶಿಷ್ಟ. ಕಾರಣ, ಹಿಂಡಿ ಮಾರಮ್ಮ ಇಲ್ಲಿ ದರ್ಪಣದಲ್ಲಿ ಕಾಣಿಸಿಕೊಳ್ಳುವುದು ವಿಶೇಷ. ಈ ಮೂಲಕ ನಂಬಿದ ಭಕ್ತಗಣಕ್ಕೆ ಹಿಂಡಿ ಮಾರಮ್ಮ ಅಭಯ ನೀಡುವ ಪರಂಪರೆ ಅನೂಚಾನವಾಗಿ ನಡದುಕೊಂಡು ಬಂದಿದೆ.

ತಾಲ್ಲೂಕಿನ ಅಗರದಲ್ಲಿ ನೆಲೆಸಿರುವ ಮಾರಮ್ಮನನ್ನು ಜನಪದ ಕಾವ್ಯಗಳಲ್ಲಿ ವರ್ಣಿಸಲಾಗಿದೆ. ದೀಪಾವಳಿಯ ಸಂದರ್ಭ ಮಾರಮ್ಮನ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತದೆ. ಈ ಧಾರ್ಮಿಕ ವೈಭವವನ್ನು ಕಣ್ತುಂಬಿಕೊಳ್ಳಲು ತಮಿಳುನಾಡು ಸೇರಿದಂತೆ ಹೊರ ದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ. ಈ ಸಮಯ ಕಠಿಣ ವ್ರತಾಧಾರಿಗಳಾಗಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿ ಧನ್ಯತೆ ಮೆರೆಯುತ್ತಾರೆ.

ಅಗರ ಮಾರಮ್ಮನ ಹಬ್ಬಕ್ಕೆ ಚೋಳ ಮತ್ತು ಗಂಗರ ಕಾಲದ ನಂಟಿದೆ. ರಾಜರು ಕಾಲಕಾಲಕ್ಕೆ ಹಲವು ದೇವಳಗಳನ್ನು ಇಲ್ಲಿ ಪ್ರತಿಷ್ಠಾಪಿಸಿರುವ ವಿಚಾರ ತಮಿಳು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಇಂದ್ರಾಣಿ ದೇವತೆಗಳ ಜೊತೆ ಪ್ರಧಾನವಾಗಿ ಚಾಮುಂಡಾಂಬೆಗೆ ಇಲ್ಲಿ ಅಗ್ರ ಪೂಜೆ ಸಲ್ಲುತ್ತದೆ ಎನ್ನುತ್ತಾರೆ ಇತಿಹಾಸ ತಜ್ಞರು.

ADVERTISEMENT

ದರ್ಪಣ ದರ್ಶನ ದೇವಿ: ಭಕ್ತರನ್ನು ಅರಸಿ ಬರುವ ಮಾರಮ್ಮ ಚಾಮುಂಡೇಶ್ವರಿ ಜೊತೆ ಕಾಳಗ ಮಾಡುತ್ತಾಳೆ. ನಂತರ ಮೂಗೂರು ಮಾರ್ಗವಾಗಿ ಕುಂತೂರಿಗೆ ಬರುತ್ತಾಳೆ. ಪ್ರಭುಲಿಂಗದೇವರ ಅಣತಿಯಂತೆ ಅಗರಕ್ಕೆ ಬಂದು ನೆಲೆಸುತ್ತಾಳೆ, ಮಾಂಬಳ್ಳಿ ಮಾಸ್ತಮ್ಮ ದೇವಿ ಮಾರಮ್ಮನಿಗೆ ಧೈರ್ಯ ತುಂಬಿ ಅಗರ-ಮಾಂಬಳ್ಳಿ ನಡುವೆ ನೆಲೆಸುವಂತೆ ಮಾಡುತ್ತಾಳೆ ಎಂಬುದು ಪ್ರತೀತಿ.

ಸಾಮಾನ್ಯವಾಗಿ ದೇವಿಯರು ಮುಮ್ಮುಖವಾಗಿ ದರ್ಶನ ನೀಡಿ ವಿರಾಜಿಸಿದರೆ, ಹಿಂಡಿ ಮಾರಮ್ಮ ಮಾತ್ರ ಸರ್ವಾಲಂಕೃತವಾಗಿ ಹಿಮ್ಮುಖವಾಗಿ ಕುಳಿತು ದರ್ಶನ ನೀಡುತ್ತಾಳೆ. ತಾಯಿಯ ದಿವ್ಯ ಶಕ್ತಿಯ ಪ್ರಭೆ ಹೆಚ್ಚಿರುವುದರಿಂದ ಹತ್ತಿರದಿಂದ ನೋಡಬಾರದು ಎಂಬ ನಂಬಿಕೆ ಭಕ್ತಗಣದಲ್ಲಿ ಇದೆ. ಹಾಗಾಗಿ, ದೇವಿಯ ಪ್ರತಿಬಿಂಬ ದರ್ಪಣದಲ್ಲಿ ಕಾಣುವಂತೆ ವಿನ್ಯಾಸ ಮಾಡಲಾಗಿದ್ದು ದರ್ಪಣದಲ್ಲಿ ದರ್ಶನ ನೀಡುವ ತಾಯಿ ಎಂದೇ ಪ್ರಸಿದ್ಧಿಯಾಗಿದೆ. ದೇವಿನ ಉತ್ಸವ ಮೂರ್ತಿಯನ್ನು ಹಬ್ಬದಂದು ಮೆರವಣಿಗೆ ಮಾಡಲಾಗುತ್ತದೆ, ಅಂದು ಕಣ್ತುಂಬಿಕೊಳ್ಳಬಹುದು ಎನ್ನುತ್ತಾರೆ ಅರ್ಚಕರು.

ಅನಿವಾಸಿ ಭಾರತೀಯರಿಂದ ದರ್ಶನ; ಜಿಲ್ಲೆಯ ವಿವಿಧ ಗ್ರಾಮಗಳಿಂದ ವಿದೇಶಗಳಿಗೆ ತೆರಳಿರುವ ಮಾರಮ್ಮನ ಭಕ್ತರು ಗ್ರಾಮ ದೇವತೆ ಹಬ್ಬಕ್ಕೆ ತಪ್ಪದೆ ಬರುತ್ತಾರೆ. 4 ದಿನ ನಡೆಯುವ ವಿಶೇಷ ಉತ್ಸವದಲ್ಲಿ ಪಾಲ್ಗೊಂಡು ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಅಗರ ಸುತ್ತಮುತ್ತಲಿನ 7 ಗ್ರಾಮಗಳನ್ನು ದೇವಿ ಸದಾ ಕಾಪಾಡುತ್ತಾಳೆ ಎಂಬ ನಂಬಿಕೆಯಿಂದ ಸಪ್ತ ಮಾತೃಕೆಯರನ್ನು ಅರ್ಚಿಸಲಾಗುತ್ತದೆ.

ಅಗರ-ಮಾಂಬಳ್ಳಿ, ಕಿನಕಳ್ಳಿ, ಕಟ್ನವಾಡಿ, ಬಸಾಪುರ, ಬನ್ನಿಸಾರಿಗೆ, ಹಾಗೂ ಚಿಕ್ಕ ಉಪ್ಪಾರ ಬೀದಿ ಗ್ರಾಮಗಳಲ್ಲಿ ಹಬ್ಬ ಆಚರಿಸಲಾಗುತ್ತದೆ. ನ.1ರಂದು ಮೊದಲ ಮೆರವಣಿಗೆ ಆರಂಭವಾಗುತ್ತದೆ. 2 ರಂದು ಕೇಲು ಉತ್ಸವ, 3 ರಂದು ಕೊಂಡೋತ್ಸವ ಮತ್ತು ಜಾತ್ರೆ, 4 ರಂದು ಅಗರ-ಮಾಂಬಳ್ಳಿಯಲ್ಲಿ ದೂಳು ಮೆರವಣಿಗೆ ನಡೆಯಲಿದೆ.

ಫ್ಲೆಕ್ಸ್, ಡಿಜೆಗೆ ತಡೆ; ಆದರ್ಶ ನಡೆ: ಹಿಂಡಿ ಮಾರಮ್ಮ ಹಬ್ಬದಲ್ಲಿ ಈ ಸಲ ಸುಮಾರು 50 ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆ. 7 ಗ್ರಾಮಗಳ ಎಲ್ಲಾ ಸಮುದಾಯಗಳ 20 ಸಾವಿರ ಭಕ್ತರು ಹಬ್ಬ ಸಾಂಗವಾಗಿ ನಡೆಸುವ ಹೊಣೆ ಹೊತ್ತಿದ್ದಾರೆ. ಗ್ರಾಮಗಳಲ್ಲಿ ಶುಭಾಶಯ ಕೋರುವ ಫ್ಲೆಕ್ಸ್, ಡಿಜೆ, ಧ್ವನಿವರ್ಧಕ ಅಳವಡಿಸದಂತೆ ನಿರ್ಣಯ ತೆಗೆದುಕೊಂಡಿರುವುದು ಮಾದರಿ ನಡೆ ಎನ್ನುತಾರೆ ನಾಡಗೌಡರಾದ ಬಿ. ಪುಟ್ಟಸುಬ್ಬಣ್ಣ ಮತ್ತು ಎಂ.ಸಿ.ರಮೇಶ್.

ಸರ್ವಾಲಂಕೃತ ಹಿಂಡಿ ಮಾರಮ್ಮ
ದರ್ಪಣದಲ್ಲಿ ದರ್ಶನ ನೀಡುತ್ತಿರುವ ಹಿಂಡಿ ಮಾರಮ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.