ADVERTISEMENT

ಮೈದುಂಬಿಕೊಂಡ ಹೊಗೆನಕಲ್‌ ಜಲಪಾತ; ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆ

ದಕ್ಷಿಣ ಭಾರತದ ನಯಾಗರ ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು

ಬಿ.ಬಸವರಾಜು
Published 7 ಜುಲೈ 2024, 5:16 IST
Last Updated 7 ಜುಲೈ 2024, 5:16 IST
ಧುಮ್ಮಿಕ್ಕಿ ಹರಿಯುತ್ತಿರುವ ಹೊಗೆನಕಲ್‌ ಜಲಪಾತ
ಧುಮ್ಮಿಕ್ಕಿ ಹರಿಯುತ್ತಿರುವ ಹೊಗೆನಕಲ್‌ ಜಲಪಾತ   

ಹನೂರು: ಕುಶಲ ಶಿಲ್ಪಿಗಳು ಸಾವಧಾನದಿಂದ ಕೆತ್ತಿದಂತೆ ಕಾಣುವ ಕಲ್ಲಿನ ಶಿಲ್ಪಗಳು. ಸುತ್ತಲೂ ಮಧುವಣಗಿತ್ತಿಯಂತೆ ಕಂಗೊಳಿಸುವ ಕಾನನ. ಮಧ್ಯೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯಲು ಇನ್ನೇನು ಬೇಕು?

ರುದ್ರರಮಣೀಯ ಜಲಪಾತ ಎಂದೇ ಪ್ರಸಿದ್ಧಿ ಪಡೆದಿರುವ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಗಡಿ ಭಾಗದಲ್ಲಿರುವ ಹೊಗೆನಕಲ್ ಜಲಪಾತ ಮಳೆಗೆ ಮೈದುಂಬಿಕೊಳ್ಳುತ್ತಿದ್ದು, ಕಣ್ಮನ ಸೆಳೆಯುತ್ತಿದೆ. ಗಡಿ ವಿಚಾರದಲ್ಲಿ ಕರ್ನಾಟಕ-ತಮಿಳುನಾಡು ನಡುವೆ ವಿವಾದವಿದ್ದರೂ ಉಭಯ ರಾಜ್ಯಗಳ ಜೀವನಾಡಿಯಾಗಿರುವ ಕೊಡಗಿನ ಕಾವೇರಿ ಬೆಡಗು ಭಿನ್ನಾಣದ ಮೂಲಕ ಎರಡು ನಾಡುಗಳನ್ನು ಬೆಸೆಯುತ್ತಿದ್ದು, ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ.

ದಕ್ಷಿಣ ಭಾರತದ ನಯಾಗರ ಜಲಪಾತ ಎಂದೇ ಸೌಂದರ್ಯೋಪಾಸಕರಿಂದ ಕರೆಸಿಕೊಳ್ಳುವ ಹೊಗೆನಕಲ್ ಫಾಲ್ಸ್‌ನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿವೆ. ಬೇಸಗೆಯಲ್ಲಿ ಸಹಜ ಚೆಲುವು ಕಳೆದುಕೊಂಡು ಸೊರಗಿದ್ದ ಜಲಪಾತ ಈಚೆಗೆ ಸುರಿಯುತ್ತಿರುವ ಮಳೆಯಿಂದ ನಳನಳಿಸುತ್ತಿದೆ. ಧುಮ್ಮಿಕ್ಕುವ ಜಲಧಾರೆ ಕಲ್ಲುಬಂಡೆಗಳಿಗೆ ಜೀವಕಳೆ ತಂದಿದೆ.

ADVERTISEMENT

ಬೆಟ್ಟಗಳ ರಾಶಿ, ಹಸಿರು ಸೌಂದರ್ಯವನ್ನು ಹೊದ್ದು ನಿಂತಿರುವ ಹೊಗೆನಕಲ್‌ ಜಲಪಾತ ಹನೂರು ತಾಲ್ಲೂಕು ಕೇಂದ್ರದಿಂದ 100 ಕಿ.ಮೀ ದೂರದ ರಾಜ್ಯದ ಗಡಿಭಾಗದಲ್ಲಿದೆ. ದಟ್ಟ ಕಾಡಿನ ನಡುವೆ 70 ಅಡಿಗಳಿಗೂ ಹೆಚ್ಚು ಎತ್ತರದಿಂದ ಧುಮ್ಮಿಕ್ಕುವ ಪರಿಯನ್ನು ಕಣ್ತುಂಬಿಕೊಳ್ಳುವುದೇ ಹಬ್ಬ.

ಬಂಡೆಗಳ ಮೇಲಿನಿಂದ ಹರಿದು ಬರುವ ಕಾವೇರಿ ನಲಿದು, ನರ್ತಿಸಿ ಪಾಲಮಡು ಎಂಬಲ್ಲಿ ಭೋರ್ಗರೆಯುತ್ತಾಳೆ. ಈ ಭಾಗದಲ್ಲಿ ಒಟ್ಟು 36 ಕಿರು ಝರಿಗಳು ಸೃಷ್ಟಿಯಾಗುತ್ತವೆ. ನೀರು ಧುಮ್ಮಿಕ್ಕುವ ರಭಸಕ್ಕೆ ನೀರಿನ ಹನಿಗಳು ಗಾಳಿಯೊಂದಿಗೆ ಬೆರೆತು ಮೋಡದ ಸ್ವರೂಪ ಪಡೆದುಕೊಳ್ಳುವ ದೃಶ್ಯ ರಮಣೀಯವಾಗಿರುತ್ತದೆ. ಜಲಪಾತದಿಂದ ಚಿಮ್ಮುವ ನೀರಿನ ಹನಿ ದಟ್ಟವಾದ ಹೊಗೆಯ ಸ್ವರೂಪ ಪಡೆಯುವ ಕಾರಣದಿಂದಲೇ ಇದಕ್ಕೆ ಹೊಗೇನಕಲ್ ಎಂಬ ಹೆಸರು ಬಂದಿದೆ.

ಜಲಪಾತದಿಂದ ಬಿದ್ದು ಹರಿಯುವ ನೀರಿನ ಪ್ರದೇಶ 70ಕ್ಕೂ ಹೆಚ್ಚು ಅಡಿ ಆಳವಿದೆ. ಈ ನೀರಿನ ಆವರಿಸುವಿಕೆಯಲ್ಲಿ ಅಲ್ಲಲ್ಲಿ ಕಿರು ದ್ವೀಪಗಳು ಸೃಷ್ಟಿಯಾಗಿವೆ. ಕರ್ನಾಟಕ ಭಾಗದಿಂದ ತೆರಳಿ ಕಲ್ಲು ಬಂಡೆ ಸುತ್ತಿ ಇಳಿದು ನೀರು ಜಲಧಾರೆಯಾಗಿ ಪಾಲಮಡು ಎನ್ನುವಲ್ಲಿಗೆ ತೆರಳಿದರೆ ಅಲ್ಲಿ ಜಲಧಾರೆಯ ಇನ್ನೊಂದು ಬಗೆಯ ಸೌಂದರ್ಯ ದರ್ಶನವಾಗುತ್ತದೆ. ನೀರಿನ ಹೊಡೆತಕ್ಕೆ ಸವೆದು ತರಹೇವಾರಿ ಆಕಾರದಲ್ಲಿ ಕೊರಕಲಾದ ಕಲ್ಲುಬಂಡೆಗಳ ಸೊಬಗು ಮನಸೆಳೆಯುತ್ತದೆ. ಕೊಡಗಿನಲ್ಲಿ ಹುಟ್ಟುವ ಕಾವೇರಿ ತಮಿಳುನಾಡಿಗೆ ಪ್ರವೇಶಿಸುವ ಹೆಬ್ಬಾಗಿಲಿದು.

ಪ್ರವಾಸಿಗರ ಹಸಿವು-ದಾಹವನ್ನು ನೀಗಿಸಲು ನೀರಿನ ಮೇಲಿನ ತೆಪ್ಪದಲ್ಲಿ ತಂಪು ಪಾನೀಯ ಹಾಗೂ ತಿಂಡಿ ತಿನಿಸುಗಳನ್ನು ಮಾರುವ ಸಂಚಾರಿ ಅಂಗಡಿಗಳಿವೆ. ಅಲ್ಲಲ್ಲಿ ಬಂಡೆಗಳ ಮೇಲೆ ಒಲೆ ಇಟ್ಟು, ಮೀನು, ಖಾದ್ಯ ತಯಾರಿಸಿಕೊಡುವ ಮಹಿಳೆಯರು ಇಲ್ಲಿ ಕಾಣ ಸಿಗುತ್ತಾರೆ.

ನೀರಿನ ಪ್ರಮಾಣ ಕಡಿಮೆಯಾದಾಗ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತ್ತು. ಪರಿಣಾಮ ತುತ್ತಿನ ಚೀಲ ತುಂಬಿಸಿಕೊಳ್ಳಲು ತಮಿಳುನಾಡಿನ ವಿವಿಧ ಭಾಗಗಳಿಗೆ ಕೂಲಿಯರಸಿ ಹೋಗಿದ್ದ ಇಲ್ಲಿನ ಜನರು, ಮಳೆ ಚುರುಕಾದ ಮೇಲೆ ಗ್ರಾಮಗಳಿಗೆ ಮರಳಿದ್ದು, ಅಂಗಡಿ ಮುಂಗಟ್ಟುಗಳನ್ನು ಮತ್ತೆ ತೆರೆದಿದ್ದಾರೆ.

ವಾರಾಂತ್ಯದ ದಿನಗಳಲ್ಲಿ ಹಾಗೂ ರಜಾದಿನಗಳಲ್ಲಿ ಬೆಂಗಳೂರು ಹಾಗೂ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಧಾಮದ ದಟ್ಟ ಕಾನನದೊಳಗೆ ಸಾಗುತ್ತಿರುವಾಗಲೇ ವಾಹನಗಳಿಗೆ ಅಡ್ಡಲಾಗಿ ನುಗ್ಗುವ, ರಸ್ತೆ ಬದಿಯಲ್ಲಿ ಸ್ವಚ್ಛಂದವಾಗಿ ಓಡಾಡುವ ವನ್ಯಪ್ರಾಣಿಗಳು ಪ್ರವಾಸಿಗರನ್ನು ಮತ್ತಷ್ಟು ಪುಳಕಿತರನ್ನಾಗಿಸುತ್ತದೆ.

ಮಳೆಗಾಲದ ಈ ದಿನಗಳು ಹೊಗೆನಕಲ್ ಕಣ್ತುಂಬಿಕೊಳ್ಳಲು ಸೂಕ್ತ ಸಮಯ. ಜಲಪಾತದ ಸನ್ನಿಧಿಯಲ್ಲಿ ನಿಂತರೆ ಮೈಮನಗಳ ತುಂಬ ಭೋರ್ಗರೆತದ್ದೇ ಸದ್ದು. ಅದು ಜಲಧಾರೆಯ ಭೋರ್ಗರೆತ ಮಾತ್ರವಲ್ಲ, ನೆನಪುಗಳೂ ಭೋರ್ಗರೆದಂತಹ ಅನುಭವ ಪ್ರವಾಸಿಗರಿಗೆ ಸಿಗಲಿದೆ. ನೀರು ಮತ್ತು ನೆನಪುಗಳ ಲಹರಿ ದೇಹ ಮನಸ್ಸನ್ನೂ ಹಗುರಗೊಳಿಸುತ್ತದೆ.

ಜಲಪಾತದ ನೀರಿನಲ್ಲಿ ತೆಪ್ಪ ವಿಹಾರದಲ್ಲಿ ತೊಡಗಿರುವ ಪ್ರವಾಸಿಗರು
ಗರಿಗೆದರಿದ ಪ್ರವಾಸೋದ್ಯಮ
ಮೂರು ದಶಕಗಳ ಕಾಲ ವೀರಪ್ಪನ್ ಅಟ್ಟಹಾಸಕ್ಕೆ ನಲುಗಿಹೋಗಿದ್ದ ಗಡಿಭಾಗ ಕಳೆದ ಒಂದು ದಶಕದಿಂದ ಪ್ರವಾಸೋದ್ಯಮ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಬಹುಜನರ ಆರಾಧ್ಯದೈವ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ಹೊಗೆನಕಲ್ ರಮಣೀಯ ಸೌಂದರ್ಯವನ್ನು ಆಸ್ವಾದಿಸಿ ತೆರಳುವುದು ಸಾಮಾನ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.