ADVERTISEMENT

ಹೂ ಅರಳಿಸದ ಕಾನು; ವಲಸೆ ಹೋದ ಜೇನು!

ಜೇನು ನೊಣದ ಆವಾಸದಲ್ಲಿ ‘ಸಿಹಿ ಕ್ರಾಂತಿ’ಗೆ ಕುತ್ತು

ನಾ.ಮಂಜುನಾಥ ಸ್ವಾಮಿ
Published 3 ಸೆಪ್ಟೆಂಬರ್ 2023, 6:48 IST
Last Updated 3 ಸೆಪ್ಟೆಂಬರ್ 2023, 6:48 IST
ಯಳಂದೂರು ತಾಲ್ಲೂಕಿನ ಗದ್ದೆಯೊಂದರ ಬಳಿ ಆಶ್ರಯ ಪಡೆದಿರುವ ಜೇನ್ನೊಣಗಳು
ಯಳಂದೂರು ತಾಲ್ಲೂಕಿನ ಗದ್ದೆಯೊಂದರ ಬಳಿ ಆಶ್ರಯ ಪಡೆದಿರುವ ಜೇನ್ನೊಣಗಳು   

ಯಳಂದೂರು: ಭಾರತದಲ್ಲಿ ಕೃಷಿ ಆಧಾರಿತ ಪೂರಕ ವೃತ್ತಿ ಜೇನು ಸಾಕಾಣಿಕೆ ಈಚಿನ ದಿನಗಳಲ್ಲಿ ಮುನ್ನಲೆಗೆ ಬರುತ್ತಿದೆ. ನೈಸರ್ಗಿಕ ಸಿಹಿಕಾರಕ ಜೇನಿನ ಬಳಕೆ ಹೆಚ್ಚಳಕ್ಕೆ ಸರ್ಕಾರ ‘ಹನಿ ಮಿಷನ್’ ಯೋಜನೆ ರೂಪಿಸಿದೆ. ಆದರೆ, ಕಾನನದ ಸಸ್ಯರಾಶಿ ಮತ್ತು ಬೇಸಾಯದ ಪರಾಗ ಸ್ಪರ್ಶ ಸರಾಗವಾಗಿ ನಡೆಸುವ ಜೇನ್ನೊಣಗಳ ವಲಸೆಯಲ್ಲಿ ಈ ಬಾರಿ ವ್ಯತ್ಯಯವಾಗಿದೆ. ಇದರಿಂದ ಜೇನುತುಪ್ಪ ನಂಬಿದ ಆದಿವಾಸಿಗಳ ಬದುಕಿನಲ್ಲೂ ಪಲ್ಲಟ ಉಂಟಾಗಿದೆ.

ತಾಲ್ಲೂಕಿನಲ್ಲಿ ಈ ವರ್ಷ ಮಳೆ ವೈಭವ ಮರೆಯಾಗಿದೆ. ಜೇನು, ದುಂಬಿಗಳು ಸ್ಪರ್ಶಿಸುವ ಹೂಗಳ ಹುಡುಕಾಟಕ್ಕೂ ಹಿನ್ನಡೆಯಾಗಿದೆ. ಇವುಗಳ ಶ್ವಾಸಕ್ಕೆ ಬೇಕಾದ ಶುದ್ಧ ಹವೆ ಕಾಣದಾಗಿದೆ. ಪುಷ್ಪ ದಳಗಳ ಬಣ್ಣ ಹಾಗೂ ಸುಗಂಧ ದ್ರವ್ಯಗಳ ಪ್ರಮಾಣ, ಇವು ಸೂಸುವ ದ್ರವಗಳ ಸುವಾಸನೆಯೂ ಜೇನನ್ನು ಆಕರ್ಷಿಸುತ್ತಿಲ್ಲ. ಕೃಷಿ ಭೂಮಿಯಲ್ಲೂ ವಾಯು ಮಾಲಿನ್ಯ ಮತ್ತು ಕೀಟ ನಾಶಕಗಳ ಪ್ರಯೋಗ ಜೇನ್ನೊಣಗಳ ಆವಾಸಕ್ಕೆ ಕುತ್ತು ತಂದಿದೆ.

ಎಲ್ಲಿ ಹೋದವೋ: ಬಿಳಿಗಿರಿರಂಗನಬೆಟ್ಟದ ಪರಿಸರದಿಂದ ಹೆಜ್ಜೇನು (ರಾಕ್ ಬೀಸ್) ಪ್ರತಿವರ್ಷ ವಲಸೆ ಹೋಗುತ್ತದೆ. ಮಾರ್ಚ್-ಮೇ ನಡುವಿನ ಹೂಗಳ ಸುಗ್ಗಿಕಾಲದಲ್ಲಿ ಬನದ ವೃಕ್ಷ ರಾಶಿಯನ್ನು ಅಪ್ಪಿಕೊಳ್ಳುತ್ತವೆ. ಮಳೆಗಾಲ ಮುಗಿದ ನಂತರ ಹೊಲ ಗದ್ದೆಗಳತ್ತ  ದಾಂಗುಡಿ ಇಡುತ್ತವೆ. ಹೂ ಅರಳಿಸುವ ಪೊದೆ, ಹೂಗಳ ತೋಟದ ಬಳಿ ಬಿಡಾರ ಹೂಡುತ್ತವೆ.

ADVERTISEMENT

‘ಜೇನು ಹಿಂಗಾರಿಗೂ ಮೊದಲು ಗಿರಿಶಿಖರದತ್ತ ವಾಪಸ್ ಆಗುತ್ತವೆ. ಆದರೆ, ಈ ವಲಸೆ ಪ್ರಕ್ರಿಯೆಗೆ ಈ ವರ್ಷ ತಡೆ ಬಿದ್ದಿದೆ. ಹಿಡುವಳಿಗಳಲ್ಲಿ ಬಳಕೆಯಾಗುವ ಅತಿಯಾದ ಕೀಟ, ಕಳೆ ನಾಶಕ ಜೇನು ಕುಟುಂಬವನ್ನು ಬಲಿ ತೆಗೆದುಕೊಳ್ಳುತ್ತಿದೆ. ಬನದಲ್ಲಿ ಕಾಣಸಿಗುವ 4 ಪ್ರಭೇದದ ಜೇನ್ನೊಣಗಳ ಸಂಖ್ಯೆ ಕುಸಿಯುತ್ತ ಸಾಗಿದ್ದು, ಲ್ಯಾಂಪ್ಸ್ ಸೊಸೈಟಿಯಲ್ಲಿ ಸಂಗ್ರಹವಾಗುವ ಜೇನಿನ ಪ್ರಮಾಣ ಇಳಿಕೆ ಕಂಡಿದೆ’ ಎಂದು ಏಟ್ರೀ ಸಂಶೋಧಕ ಡಾ.ಸಿ.ಮಾದೇಗೌಡ ಹೇಳಿದರು.

ಸಸ್ಯ ವೈವಿಧ್ಯತೆಗೆ ಧಕ್ಕೆ: ‘ವರ್ಷಧಾರೆ ಈ ಬಾರಿ ಕೈಕೊಟ್ಟಿದೆ. ಬೆಜ್ಜೆ ಈ ಬಾರಿ ಸಮೃದ್ಧವಾಗಿ ಹೂ ಮುಡಿದಿಲ್ಲ. ಹೊನ್ನೆ ಮೊಗ್ಗು ಅರಳಿಸಲಿಲ್ಲ. ನೆಲ್ಲಿಯ ನೆಲೆ ವಿಸ್ತರಿಸುತ್ತಿಲ್ಲ. ಋತುಮಾನಕ್ಕೆ ಅನುಗುಣವಾಗಿ ಸುಗಂಧ ಸೂಸುವ ಚೌವೆ, ದೊಳ್ಳಿ, ಕರ್ವಾಡಿ, ಅಂಟುವಾಳ, ಬೈಸೆ ವೃಕ್ಷಗಳ ಲತೆಗಳ ಸಂಭ್ರಮ ಮೊದಲಿನಂತೆ ಕಾಣುತ್ತಿಲ್ಲ. ಈ ವೃಕ್ಷಗಳ ಮುಕುಟದ ಕುಸಮಗಳ ಮಕರಂದ ಹೀರುವ ಜೇನು ವಲಸೆಯಲ್ಲಿ ಬಾರಿ ವ್ಯತ್ಯಯವಾಗಿದೆ’ ಎಂದು ಜೇನುತುಪ್ಪ ಸಂಗ್ರಹಿಸುವ ಬಿಳಿಗಿರಿಬನದ ಸೋಲಿಗರು ಹೇಳುತ್ತಾರೆ. 

ಸಿಹಿ ಕ್ರಾಂತಿ: ಭಾರತದಲ್ಲಿ 2017ರಿಂದ ಜೇನು ಸಾಕಣೆಯನ್ನು ಕಡಿಮೆ ಹೂಡಿಕೆಯ ಹಾಗೂ ಗರಿಷ್ಠ ಕೌಶಲದ ಉದ್ಯಮವಾಗಿ ರೂಪಿಸಲು ಸರ್ಕಾರ ನೆರವು ನೀಡುತ್ತದೆ. ಗುಣಮಟ್ಟದ ಜೇನು ಮತ್ತು ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಲು ಭಾರತ ಸರ್ಕಾರ ತಾಂತ್ರಿಕ ಮೆರಗು ನೀಡಿದೆ. ಜೇನುಮೇಣ, ಅಂಟು, ಪಾಕ, ಪರಾಗರೇಣು, ಜೇನು ವಸಾಹತು ಹೆಚ್ಚಳದಿಂದ ಉದ್ಯಮದ ರೂಪ ನೀಡುವ  ‘ಸಿಹಿ ಕ್ರಾಂತಿ’ಗೆ ಜೇನು ಮಿಷನ್ ಪ್ರೋತ್ಸಾಹ ನೀಡುತ್ತಿದೆ. 

ಯಳಂದೂರು ತಾಲ್ಲೂಕಿನಲ್ಲಿ ಕೀಟ ನಾಶಕ ಸಿಂಪಡಿಸಿದ ಮೆಕ್ಕೆಜೋಳ ಪರಾಗಕ್ಕೆ ಅಂಟಿ ಕುಳಿತ ಜೇನ್ನೊಣ
ಜೇನ್ನೊಣಗಳು ಹೂವುಗಳಿಂದ ಮಕರಂದ ಸಂಗ್ರಹಿಸುವ ಜೊತೆಗೆ ಪರಾಗಸ್ಪರ್ಶ ಮಾಡುತ್ತವೆ. ಅಳಲೆ ತಾರೆ ಸೀಗೆ ಫಸಲು ಜೇನಿನ ಸಮೃದ್ಧತೆ ಮೇಲೆ ನಿಂತಿದೆ
. ಸಿದ್ದಪ್ಪಶೆಟ್ಟಿ ಏಟ್ರೀ ವಿಜ್ಞಾನಿ ಬಿಳಿಗಿರಿಬೆಟ್ಟ

ಕುಸಿದ ಜೇನು ಉತ್ಪಾದನೆ ‘ಬೆಟ್ಟದ ಸುತ್ತಮುತ್ತ ಪ್ರತಿವರ್ಷ ಜೇನು ಕುಟುಂಬಗಳ ಸಂಖ್ಯೆಯನ್ನು ಲೆಕ್ಕಹಾಕಿ ಜೇನು ಹೆಚ್ಚಳದ ಸೂಚ್ಯಂಕ ನಿರ್ಧರಿಸಲಾಗುತ್ತದೆ. ಕೆಲವು ಹುಟ್ಟುಗಳಲ್ಲಿ 20 ಸಾವಿರ ಜೇನು ಕಾಣಸಿಕ್ಕರೆ  ಕೆಲವೆಡೆ 1 ಲಕ್ಷಕ್ಕೂ ಹೆಚ್ಚಿನ ಜೇನ್ನೊಣಗಳಿರುತ್ತವೆ. ಕಮರಿಯ ಶಿಖರಾಗ್ರದ ಬಂಡೆ. ವೃಕ್ಷ ಸಮೂಹದಲ್ಲಿ ಸರಾಸರಿ 284 ಜೇನು ಕುಟುಂಬಗಳು ವಾಸಿಸುತ್ತವೆ. ಈ ಬಾರಿ ಇವುಗಳ ಸಂಖ್ಯೆ 142ಕ್ಕೆ ಕುಸಿದಿದೆ. 2002ರಲ್ಲಿ 26 ಟನ್ ಜೇನು ಸಂಗ್ರಹವಾಗಿದ್ದರೆ 2023ರಲ್ಲಿ 4 ಟನ್‌ಗೆ ಕುಸಿದಿದೆ. ಇದರಿಂದ ಸೋಲಿಗರ ವರಮಾನಕ್ಕೂ  ಕುತ್ತು ಉಂಟಾಗಿದೆ’ ಎಂದು ಬಿಳಿಗಿರಿರಂಗಬೆಟ್ಟದ ಗಿಡಮೂಲಕೆ ತಜ್ಞ ಬೊಮ್ಮಯ್ಯ ಹೇಳಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.