ADVERTISEMENT

ಆದಿ ಕರ್ನಾಟಕ ಸಂಘದ ಹಾಸ್ಟೆಲ್‌ ಆಸ್ತಿ ಮಾರಾಟ ಆಗಿಲ್ಲ: ಎಸ್‌. ನಂಜುಂಡಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 4:28 IST
Last Updated 20 ಜನವರಿ 2024, 4:28 IST
ಎಸ್‌.ನಂಜುಂಡಸ್ವಾಮಿ
ಎಸ್‌.ನಂಜುಂಡಸ್ವಾಮಿ   

ಚಾಮರಾಜನಗರ: ‘ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ದಿ ಸಂಘದ ಹಾಸ್ಟೆಲ್‌ನ ಆಸ್ತಿ ಮಾರಾಟವಾಗಿಲ್ಲ. ಕೆಲವು ‍ಪಟ್ಟಭದ್ರ ಹಿತಾಸಕ್ತಿಗಳು ನನ್ನ ವಿರುದ್ಧ ಮತ್ತು ಸಂಘದ ವಿರುದ್ಧ ಮಾಡಿರುವ ಇಲ್ಲ ಸಲ್ಲದ ಆರೋಪ ಮಾಡಿದ್ದು, ಎಲ್ಲವೂ ಸುಳ್ಳು’ ಎಂದು ಸಂಘದ ಅಧ್ಯಕ್ಷ ಎಸ್‌.ನಂಜುಂಡಸ್ವಾಮಿ ಶುಕ್ರವಾರ ಹೇಳಿದರು. 

ನಗ‌ರದಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ‘ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದೇನೆ. ಈಗ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದ್ದು, ಒಟ್ಟಾರೆ ತಿಂಗಳಿಗೆ ₹1.5 ಲಕ್ಷದಷ್ಟು ಬಾಡಿಗೆ ಬರುವ ವ್ಯವಸ್ಥೆ ಮಾಡಲಾಗಿದೆ. ಇದರ ಮೇಲೆ ಕಣ್ಣಿಟ್ಟಿರುವ ಕೆಲವರು ಸಂಘದ ಜಮೀನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಸಂಘದ ಆಸ್ತಿಯನ್ನು ನನ್ನ ತಮ್ಮನ ಮಕ್ಕಳು ಖರೀದಿ ಮಾಡುತ್ತಿಲ್ಲ’ ಎಂದರು. 

‘ಹಾಸ್ಟೆಲ್‌ ಇರುವ ಜಾಗವನ್ನು 1962ರಲ್ಲಿ ಎಸ್‌.ರಂಗಸ್ವಾಮಿಯವರ ಹೆಸರಿನಲ್ಲಿ ಖರೀದಿ ಮಾಡಲಾಗಿದೆ. 1967ರಲ್ಲಿ ನಗರಸಭೆಯಲ್ಲಿ ‌230x210 ವಿಸ್ತೀರ್ಣದ ಜಾಗ ನಗರಸಭೆಯಲ್ಲಿ ಅಸೆಸ್‌ಮೆಂಟ್‌ ಕೂಡ ಆಗಿದೆ. ಸಮುದಾಯಕ್ಕೆ ಸೇರಿದ ಆಸ್ತಿಯಾಗಿರುವುದರಿಂದ ನಗರಸಭೆ ಕಂದಾಯ ಕಟ್ಟುವುದರಿಂದ ವಿನಾಯಿತಿಯನ್ನೂ ನೀಡಿದೆ. ಸಂಘದ ಅಭಿವೃದ್ಧಿ ಕಾರ್ಯವನ್ನು ಗಮನಿಸಿರುವ ಸಂಸದ ವಿ.ಶ್ರೀನಿವಾಸ ಪ್ರಸಾದ್‌, ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ₹10 ಲಕ್ಷ ಅನುದಾನ ನೀಡಿದ್ದಾರೆ’ ಎಂದು ಹೇಳಿದರು. 

ADVERTISEMENT

‘ನಗರಸಭೆಯಲ್ಲಿ ಅಸೆಸ್‌ಮೆಂಟ್‌ ಆದ ಬಳಿಕ ಸರ್ವೆ ನಂಬರ್‌ ಲೆಕ್ಕಕ್ಕೆ ಬರುವುದಿಲ್ಲ. ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದವರು ಪ್ರಸ್ತಾಪಿಸಿರುವ ಸರ್ವೆ ನಂಬರ್‌ 295/4ಸಿ ಜಮೀನು ಈಗ ಖರಾಬಿಗೆ ಸೇರಿದೆ. ಸರ್ವೆ ನಂಬರ್‌ಗಳನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಕ್ರಯ, ಖಾತೆ ಮಾಡುವ ದೊಡ್ಡ ದಂಧೆ ನಗರದಲ್ಲಿ ನಡೆಯುತ್ತಿದೆ’ ಎಂದು ನಂಜುಂಡಸ್ವಾಮಿ ಹೇಳಿದರು. 

ಮಾನನಷ್ಟ ಮೊಕದ್ದಮೆ ಹೂಡುವೆ: ‘ಪತ್ರಿಕಾಗೋಷ್ಠಿಯಲ್ಲಿ ನನ್ನ ಹಾಗೂ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿರುವವರ ಹಿಂದೆ ಯಾರ ಪಿತೂರಿ ಇದೆ ಎಂಬುದು ಗೊತ್ತಿದೆ. ಸುಳ್ಳು ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ. ನಂತರ ಮಾಧ್ಯಮಗಳಿಗೆ ಇನ್ನಷ್ಟು ದಾಖಲೆಗಳನ್ನು ನೀಡುವೆ’ ಎಂದರು.

ಸಂಘದ ಖಜಾಂಚಿ ಸಿ.ಕೆ.ರವಿಕುಮಾರ್‌ ಮಾತನಾಡಿ, ‘1967ರಲ್ಲಿಯೇ ಪುರಸಭೆ ಇದ್ದಾಗ ಅಸೆಸ್‌ಮೆಂಟ್ ನಂ. 948/914ರಲ್ಲಿ 230x260 ಅಳತೆಗೆ ಪರಿವರ್ತನೆ ಮಾಡಿ, ಎಂಆರ್-19 ಮಾಡಲಾಗಿದೆ. ಇ- ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ್ದೇವೆ’ ಎಂದರು.

ಹಾಸ್ಟೆಲ್‌ನ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ನಗರಸಭೆಯ ಅನುಮತಿ ಪಡೆದಿಲ್ಲ ಎಂಬ ಆರೋಪದ ಬಗ್ಗೆ ಕೇಳಿದ್ದಕ್ಕೆ, ‘ಎರಡು ಪಟ್ಟು ಕಂದಾಯ ಕಟ್ಟಿ, ನಂತರ ಸಕ್ರಮ ಮಾಡುವುದಕ್ಕೆ ಅವಕಾಶ ಇದೆ’ ಎಂದು ಹೇಳಿದರು. 

ಸಂಘದ ಕಾರ್ಯದರ್ಶಿ ರಾಜಗೋಪಾಲ್, ರಾಮಸಮುದ್ರದ ನಾಗರಾಜು, ಶಿವರಾಜು, ಮಹೇಶ್‌ಕುಮಾರ್ ಇದ್ದರು. 

‘ಸಮುದಾಯದ ಆಸ್ತಿ ಬೇಡ’
ಎಂಟು ಗುಂಟೆ ಜಮೀನು ಖರೀದಿಸಿರುವ ಶ್ರೀನಿಧಿ ಕುದರ್‌ ಮಾತನಾಡಿ ‘ನಾವು ಖರೀದಿಸುವುದಕ್ಕೂ ಮೊದಲು ಮೂವರ ಹೆಸರಿಗೆ ಅದು ಕ್ರಯ ಆಗಿದೆ. ಮೊದಲಿನಿಂದಲೇ ಅದೇ ರೀತಿ ಬಂದಿದೆ. ಖಾತೆಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ತಹಶೀಲ್ದಾರರು ಅದು ಹಾಸ್ಟೆಲ್‌ಗೆ ಸೇರಿದ ಆಸ್ತಿಯಂತೆ ಕಾಣುತ್ತಿದೆ ಎಂದು ಗಮನ ಸೆಳೆದಾಗ ಹಾಸ್ಟೆಲ್‌ಗೆ ಸೇರಿದ ಜಾಗವಾಗಿದ್ದರೆ ಖಾತೆ ಮಾಡಬೇಡಿ ಎಂದು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿಯೇ ಬರೆದು ಕೊಟ್ಟಿದ್ದೇವೆ. ಹಾಗಿದ್ದರೂ ಮೂರು ತಿಂಗಳ ಬಳಿಕ ನಮ್ಮ ಕುಟುಂಬದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಗರದಲ್ಲಿ ನಮ್ಮ ಆಸ್ತಿಯೇ ಸಾಕಷ್ಟಿದೆ. ಸಮುದಾಯಕ್ಕೆ ನಾವೇ ಕೊಡುತ್ತೇವೆಯೇ ವಿನಾ ಜನರ ಆಸ್ತಿ ನಮಗೆ ಬೇಡ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.