ಪ್ರಜಾವಾಣಿ ವಾರ್ತೆ
ಚಾಮರಾಜನಗರ: 'ನಾವು ಬೇರೆಯವರ ಹಕ್ಕುಗಳನ್ನು ಗೌರವಿಸಿದರೆ ಮಾತ್ರ ಮಾನವ ಹಕ್ಕುಗಳಿಗೆ ಅರ್ಥ ಬರುತ್ತದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ ಹೇಳಿದರು.
ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ರಂಗವಾಹಿನಿ, ಸಾಧನಾ ಸಂಸ್ಥೆ, ಕಾಲೇಜು ಮತ್ತು ರಾಜ್ಯಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಸೋಮವಾರ ನಡೆದ ‘ಮಾನವ ಹಕ್ಕುಗಳು ಮತ್ತು ಸಂವಿಧಾನ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾನವ ಹಕ್ಕುಗಳ ದಿನವನ್ನು 1988ರಿಂದಲೂ ಆಚರಣೆ ಮಾಡುತ್ತಿದ್ದೇವೆ. ಮುಂದಿನ ಪೀಳಿಗೆಗೆ ಇದನ್ನು ತಿಳಿಸುವಂತಹ ಕಾರ್ಯ ಆಗಬೇಕು’ ಎಂದು ಹೇಳಿದರು.
‘ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮಾನವ ಹಕ್ಕುಗಳ ಸ್ತಂಭಗಳಿದ್ದಂತೆ. ಉತ್ತಮ ಸಮಾಜ ಬೇಕಾಗದೆ ಈ ಮೂರು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಸ್ವಾಸ್ಥ್ಯ ಸಮಾಜ ನಿರ್ಮಾಣವಾದಾಗ ಮಾತ್ರ ಪರಸ್ಪರ ಗೌರವಿಸಿ ಬದುಕಲು ಸಾಧ್ಯ’ ಎಂದು ತಿಳಿಸಿದರು.
ಮೈಸೂರಿನ ವಕೀಲ ಬಾಬುರಾಜ್ ಮಾತನಾಡಿ, ‘ಮಾನವ ಹಕ್ಕುಗಳ ರಕ್ಷಣೆ ನಮ್ಮ ದೇಶದ ಪ್ರಗತಿಗೆ ಪೂರಕವಾದುದು ಮತ್ತು ಮಾನವ ಹಕ್ಕುಗಳನ್ನು ಗೌರವಿಸುತ್ತಿದ್ದರೆ ದೇಶದ ಸಾಮರಸ್ಯ ಮತ್ತಷ್ಟು ಮುಂದಕ್ಕೆ ಹೋಗುತ್ತದೆ’ ಎಂದು ತಿಳಿಸಿದರು.
‘ನಮ್ಮ ದೇಶದಲ್ಲಿ ಜಾತಿ ಧರ್ಮ ಸೇರಿದಂತೆ ಅನೇಕ ಕಟ್ಟುಪಾಡುಗಳು ಇದ್ದು ಇವೆಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆ’ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹದೇವು ಮಾತನಾಡಿ, ‘ಭಾರತದ ಸಂವಿಧಾನವೇ ಎಲ್ಲ ಧರ್ಮಗಳಿಗಿಂತ ಮಿಗಿಲಾದ ಧರ್ಮ ಸಂಹಿತೆ ಧರ್ಮ ವಿಧಿಸುವ ನಿಯಮಗಳು ಅಂತಿಮವಲ್ಲ. ಸಂವಿಧಾನ ವಿಧಿಸುವ ನಿಯಮವೇ ಅಂತಿಮ’ ಎಂದು ತಿಳಿಸಿದರು.
ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಜೆ.ಎಸ್.ಎಸ್.ಮಹಿಳಾ ಕಾಲೇಜಿನ ಪ್ರಾಂಶುಪಾಲ ಜಿ. ಸಿದ್ದರಾಜು, ಸಾಧನಾ ಸಂಸ್ಥೆಯ ನಿರ್ದೇಶಕ ಟಿ.ಜೆ.ಸುರೇಶ್, ರಾಜ್ಯ ಶಾಸ್ತ್ರ ವಿಭಾಗದ ಸುಶ್ಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.