ADVERTISEMENT

ಅಧಿವೇಶನದಲ್ಲಿ ಕಾಂತರಾಜು ವರದಿ ಜಾರಿಗೊಳಿಸಿ: ಮಂಗಲ ಶಿವಕುಮಾರ್ ಒತ್ತಾಯ

ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಗಲ ಶಿವಕುಮಾರ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 13:04 IST
Last Updated 9 ಜುಲೈ 2024, 13:04 IST
ಮಂಗಲ ಶಿವಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ
ಮಂಗಲ ಶಿವಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ   

ಚಾಮರಾಜನಗರ: ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಸಲ್ಲಿಕೆಯಾಗಿರುವ ಎಚ್‌.ಕಾಂತರಾಜ್‌ ವರದಿಯನ್ನು ರಾಜ್ಯ ಸರ್ಕಾರ ಮುಂದಿನ ಅಧಿವೇಶನದಲ್ಲಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಮಂಗಲ ಶಿವಕುಮಾರ್ ಒತ್ತಾಯಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳು ಶತಮಾನಗಳಿಂದಲೂ ಶೋಷಣೆ, ಅಪಮಾನ, ದೌರ್ಜನ್ಯಗಳನ್ನು ಅನುಭವಿಸುತ್ತಲೇ ಬಂದಿದ್ದು ಇಂದಿಗೂ ಸಾಮಾಜಿಕ ನ್ಯಾಯ ದೊರೆತಿಲ್ಲ. ಆಳುವ ಸರ್ಕಾರಗಳೂ ಹಿಂದುಳಿದ ವರ್ಗಗಳನ್ನು ಮತಬ್ಯಾಂಕ್‌ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಅರಸರ ಕಾಲದಲ್ಲಿ ಮಿಲ್ಲರ್ ಆಯೋಗ ರಚಿಸಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಕೆಲಸ ನಡೆಸಿತ್ತು. ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಹಿಂದುಳಿದ ವರ್ಗಗಳ ಬಗ್ಗೆ ತಾತ್ಸಾರ ತೋರುತ್ತಿವೆ. ಹಿಂದುಳಿದ ವರ್ಗಗಳ ಆಯೋಗಗಳನ್ನು ರಚಿಸಿದರೂ ಸಲ್ಲಿಸಿದ ವರದಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿಲ್ಲ.

ADVERTISEMENT

ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ, ಶಿಕ್ಷಣ ನೀಡಲು ಹಾಗೂ ಮುಖ್ಯವಾಹಿನಿಗೆ ತರಲು ಪೂರಕವಾಗಿದ್ದ ಎಲ್.ಜೆ.ಹಾವನೂರು ವರದಿ, ವೆಂಕಟಸ್ವಾಮಿ ವರದಿ, ಚನ್ನಪ್ಪರೆಡ್ಡಿ ವರದಿಗಳ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.

2015ರಲ್ಲಿ ಅಂದಿನ ಮುಖ್ಯಮಂತ್ರಿ ಹಾಗೂ ಪ್ರಸ್ತುತವೂ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯಲು ಕಾಂತರಾಜು ನೇತೃತ್ವದ ಸಮಿತಿ ರಚಿಸಿ ವರದಿ ಸಿದ್ಧಪಡಿಸಲು ₹ 178 ಕೋಟಿ ಖರ್ಚು ಮಾಡಿತ್ತು. ಈಚೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದ ಸಿದ್ದರಾಮಯ್ಯ ಕಾಂತರಾಜು ವರದಿಯನ್ನು ಜಾರಿಗೊಳಿಸಲು ಮೀನಮೇಷ ಎಣಿಸುತ್ತಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ವರದಿ ಜಾರಿಗೊಳಿಸಿ ಹಿಂದುಳಿದ ವರ್ಗಗಳ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

ಕೆ.ಕಾಂತರಾಜು ವರದಿ ಜಾರಿಯಾದರೆ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ನಿಖರವಾದ ಜನಸಂಖ್ಯೆಯ ಜತೆಗೆ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಅರಿಯಬಹುದು. ಅದಕ್ಕೆ ಅನುಗುಣವಾಗಿ ಅರ್ಹ ಸಮುದಾಯಗಳಿಗೆ ಮೀಸಲಾತಿ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬಹುದು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ನಟರಾಜೇಗೌಡ, ರಾಮಶೆಟ್ಟಿ, ಉಪಾಧ್ಯಕ್ಷರಾದ ವೈ.ಕೆ.ನಾಗರಾಜು, ಬೆಳ್ಳಶೆಟ್ಟಿ, ಕಾರ್ಯಕಾರಿಣಿ ಸದಸ್ಯರಾದ ಮಹದೇವ ಸ್ವಾಮಿ, ಸಂಪತ್, ವೆಂಕಟರಾಜು, ಗುಂಡ್ಲುಪೇಟೆ ವೆಂಕಟೇಶ್ ಮತ್ತು ರಾಜೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.