ಚಾಮರಾಜನಗರ: ಗೃಹಲಕ್ಷ್ಮೀ ಯೋಜನೆ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ (ಮೈಸೂರು ವಿಭಾಗ) ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದರು.
ಬುಧವಾರ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 2,73,948 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದು ಇದುವರೆಗೂ ₹ 53,77 ಕೋಟಿಗೂ ಹೆಚ್ಚಿನ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಿದೆ.
ತಾಂತ್ರಿಕ ದೋಷ ಹಾಗೂ ಯೋಜನೆಯ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ 3,599 ಮಂದಿ ನೋಂದಣಿಗೆ ಬಾಕಿ ಇದ್ದಾರೆ. ಅರ್ಹರೆಲ್ಲರಿಗೂ ಗೃಹ ಲಕ್ಷ್ಮೀ ಯೋಜನೆಯ ಲಾಭ ಸಿಗಬೇಕು, ಶೇ 100 ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪುಷ್ಪಾ ಅಮರನಾಥ್ ಹೇಳಿದರು.
ತಾಂತ್ರಿಕ ಸಮಸ್ಯೆ, ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಪಾವತಿದಾರರನ್ನು ಯೋಜನೆಯಿಂದ ಹೊರಗಿಡುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಗೃಹ ಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಎರಡು ತಿಂಗಳು ತಡವಾಗಿದೆ. ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮುಂಚಿತವಾಗಿ ₹ 56,000 ಕೋಟಿ ಮೀಸಲಿರಿಸಿರುವುದರಿಂದ ಸರ್ಕಾರದ ಬಳಿ ಹಣದ ಕೊರೆತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಕ್ತಿ ಯೋಜನೆ ಜಾರಿಯಾದ ಬಳಿಕ ಜಿಲ್ಲೆಯ 10.20 ಕೋಟಿ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸಿದ್ದಾರೆ. ಅವರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಬರೋಬ್ಬರಿ 6.27 ಕೋಟಿಗೂ ಹೆಚ್ಚಿದೆ. ಶೇ 61.50ರಷ್ಟು ಮಹಿಳಾ ಪ್ರಯಾಣಿಕರು ಸಂಚರಿಸಿದ್ದು ಸಾರಿಗೆ ಸಂಸ್ಥೆಗೆ ₹ 216.67 ಕೋಟಿ ಆದಾಯ ಬಂದಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟ ಸಹಿತ ಪ್ರಸಿದ್ಧ ಯಾತ್ರಾಸ್ಥಳಗಳು ಇರುವುದರಿಂದ ನೆರೆ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಭಾರಿ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚುವರಿ ಬಸ್‌ಗಳನ್ನು ಒದಗಿಸಲಿದೆ. ಜಿಲ್ಲಾಡಳಿತ 100 ಹೆಚ್ಚುವರಿ ಬಸ್‌ಗಳ ಬೇಡಿಕೆ ಸಲ್ಲಿಸಿದ್ದು 52 ಬಸ್‌ಗಳನ್ನು ಮಂಜೂರು ಮಾಡಲಾಗಿದೆ. ಉಳಿದ 48 ಬಸ್‌ಗಳನ್ನು ಶೀಘ್ರ ಒದಗಿಸಲಾಗುವುದು ಎಂದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಶೇ 99.48ರಷ್ಟು ಗುರಿ ಸಾಧನೆಯಾಗಿದ್ದು 2,65,911 ಮಂದಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ನೋಂದಣಿಗೆ ಬಾಕಿ ಇರುವವರ ಸಂಖ್ಯೆ 1386 ಮಂದಿ ಇದ್ದಾರೆ ಎಂದು ಮಾಹಿತಿ ನೀಡಿದರು. ಹೊಸದಾಗಿ ಮನೆ ನಿರ್ಮಾಣ ಮಾಡಿದವರಿಗೆ ಪ್ರತಿ ತಿಂಗಳು ಉಚಿತವಾಗಿ 58 ಯುನಿಟ್ ಬಳಕೆಗೆ ಅವಕಾಶವಿದೆ. ಮಿತಿಯ ನಂತರ ಬಳಕೆ ಮಾಡಿದ ಯುನಿಟ್‌ಗೆ ಹಣ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.
ಅನ್ಯಭಾಗ್ಯ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಇದುವರೆಗೂ 151.65 ಕೋಟಿ ನಗದು ಜಮೆ ಮಾಡಲಾಗಿದೆ. ಜಾರಿಗೆ ಇ ಕೆವೈಸಿ ತಾಂತ್ರಿಕ ಸಮಸ್ಯೆಯಿಂದ 7405 ಮಂದಿಗೆ ಹಣ ವರ್ಗಾವಣೆ ಸಾಧ್ಯವಾಗಿಲ್ಲ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
ಯುವನಿಧಿ ಯೋಜನೆಯಡಿ 2175 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಅರ್ಹ 1809 ಫಲಾನುಭವಿಗಳ ಖಾತೆಗೆ ನೇರವಗಿ ನಗದು ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಈ ನಿಟ್ಟಿನಲ್ಲಿ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಯುವನಿಧಿ ಯೋನೆಯ ಫಲಕಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ.
ಮಹಿಳೆಯರು ಸ್ವಾಭಿಮಾನದ ಹಾಗೂ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನೆರವಾಗಿವೆ. ಜಿಲ್ಲೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಶಕ್ತಿ ಯೋಜನೆ ಪ್ರಗತಿ
ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸಿದವರು : 102003308
ಮಹಿಳಾ ಪ್ರಯಾಣಿಕರು : 62727062
ಸಾರಿಗೆ ಸಂಸ್ಥೆಗೆ ಆದಾಯ : 216 ಕೋಟಿ
ಗೃಹ ಜ್ಯೋತಿ ಯೋಜನೆ ಪ್ರಗತಿ
ಗೃಹಜ್ಯೋತಿಗೆ ಅರ್ಹರು : 267297
ನೋಂದಣಿ ಮಾಡಿಸಿಕೊಂಡವರು : 265911
ನೋಂದಣಿಗೆ ಬಾಕಿ ಇರುವವರು : 1386
ಶೇಕಡವಾರು ಪ್ರಗತಿ : ಶೇ99.48
ಅನ್ನಭಾಗ್ಯ ಯೋಜನೆ ಪ್ರಗತಿ
ಒಟ್ಟು ಪಡಿತರ ಕಾರ್ಡ್‌ಗಳು : 289849
ನೇರ ನಗದು ಯೋಜನೆಯ ಲಾಭ ಪಡೆದ ಕಾರ್ಡ್‌ಗಳು: 260114
ಡಿಬಿಟಿ ಮೂಲಕ ವರ್ಗಾವಣೆಯಾದ ಮೊತ್ತ :1516588920
ಗೃಹ ಲಕ್ಷ್ಮೀ ಯೋಜನೆ ಪ್ರಗತಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು : 273948
ನೋಂದಣಿಗೆ ಬಾಕಿ ಇರುವವರ ಸಂಖ್ಯೆ : 3599
ಬಿಡುಗಡೆಯಾದ ಮೊತ್ತ : 537716000
ಶೇಕಡವಾರು ಸಾಧನೆ : ಶೇ 98.51
ಯುವನಿಧಿ ಯೋಜನೆ ಪ್ರಗತಿ
ನೋಂದಣಿಯಾದ ಅಭ್ಯರ್ಥಿಗಳು : 2175
ಯುವನಿಧಿ ಪಡೆದ ಫಲಾನುಭವಿಗಳು : 1809
ಶೇಕಡವಾರು ಸಾಧನೆ : ಶೇ83.17
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.