ಕೊಳ್ಳೇಗಾಲ: ಕಬಿನಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು ಕೊಳ್ಳೇಗಾಲ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಸಾಮಾನ್ಯವಾಗಿ ಜುಲೈ ಹಾಗೂ ಆಗಸ್ಟ್‌ನಲ್ಲಿ ಕಬಿನಿ ಹಾಗೂ ಕೆಆರ್‌ಎಸ್‌ನಿಂದ ನೀರು ಹೊರಬಿಡುವುದರಿಂದ ನದಿ ಪಾತ್ರದ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತವೆ. ತಾಲ್ಲೂಕಿನ ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆ ಅಣಗಳ್ಳಿ, ಹರಳೆ, ಸರಗೂರು, ಧನಗೆರೆ, ಸತ್ತೇಗಾಲ, ಯಡಕುರಿಯಾ ಗ್ರಾಮಗಳಲ್ಲಿ ಆತಂಕ ಮನೆಮಾಡುತ್ತದೆ.
ಕಾವೇರಿ ನದಿಯಲ್ಲಿ ನೀರು ಹೆಚ್ಚಾದ ಕೂಡಲೇ 9 ಗ್ರಾಮಗಳು ಭಾಗಶಃ ಮುಳುಗಡೆಯಾಗುತ್ತವೆ. ಸಾವಿರಾರು ಎಕರೆ ಕೃಷಿ ಭೂಮಿಯೂ ಜಲಾವೃತಗೊಂಡು ಬೆಳೆ ನಷ್ಟ ಸಂಭವಿಸುತ್ತದೆ. ಈ ಬಾರಿಯೂ ಮುಳುಗಡೆಯಾಗಬಹುದು ಎಂಬ ಆತಂಕ ಗ್ರಾಮಸ್ಥರಲ್ಲಿದೆ.
ಕಳೆದ ವರ್ಷ ಸರಿಯಾಗಿ ಮಳೆಯಾಗದ ಕಾರಣ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರಲಿಲ್ಲ. ಆದರೆ ಈ ವರ್ಷ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳು ಮುಳುಗಡೆಯಾಗಬಹುದು. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ನೆರವಿಗೆ ದಾವಿಸಬೇಕು ಎನ್ನುತ್ತಾರೆ ದಾಸನಪುರ ಗ್ರಾಮದ ಶಿವರಾಜು.
ಕೇರಳದ ವೈನಾಡು ಹಾಗೂ ಸುತ್ತಮುತ್ತ 20 ದಿನಗಳಿಂದಲೂ ಭಾರಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು ಹೊರಹರಿವು ಏರಿಕೆಯಾಗಿದೆ. ಕೆಆರ್‌ಎಸ್‌ನಿಂದ ನೀರು ಹೊರಬಿಡದಿದ್ದರೂ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದೆ. ನಿರಂತರ ಮಳೆ ಸುರಿದು ಕೆಆರ್‌ಎಸ್‌ನಿಂದಲೂ ಹೊರಹರಿವು ಹೆಚ್ಚಾದರೆ ತಾಲ್ಲೂಕಿನ ಗ್ರಾಮಗಳಿಗೆ ಜಲಕಂಟಕ ಎದುರಾಗಿದೆ.
ತಡೆಗೋಡೆ ನಿರ್ಮಾಣ ಯಾವಾಗ? ಪ್ರತಿವರ್ಷ ಮಳೆ ಬಂದು ಈ ಒಂಬತ್ತು ಗ್ರಾಮಗಳು ಮುಳುಗಡೆಯಾದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಗೋಜಿಗೆ ಹೋಗಿಲ್ಲ ಎಂದು ಹೇಳುತ್ತಾರೆ ಇಲ್ಲಿನ ಗ್ರಾಮಸ್ಥರು.
ಮುಳ್ಳೂರು ಹಾಗೂ ದಾಸನಪುರ ಗ್ರಾಮದಲ್ಲಿ ಹರಿಯುವ ನದಿಗೆ ತಡೆಗೋಡೆ ನಿರ್ಮಾಣ ಮಾಡಿದರೆ ಗ್ರಾಮಗಳು ಮುಳುಗಡೆಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ವರ್ಷಗಳು ಕಳೆದರೂ ಸಚಿವರಾಗಲಿ, ಶಾಸಕರಾಗಲಿ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಕ್ರಮ ಕೈಗೊಂಡಿಲ್ಲ.
ಹಾಗಾಗಿ ನದಿ ತೀರದ ಗ್ರಾಮಸ್ಥರು ಜುಲೈ ಆಗಸ್ಟ್ ಬಂದರೆ ಸಾಕು ಗ್ರಾಮಗಳನ್ನು ಬಿಟ್ಟು ಹೊರ ಬರಬೇಕಾದ ಪರಿಸ್ಥಿತಿ ಅನುಭವಿಸುತ್ತಾರೆ. ಈ ಸಮಸ್ಯೆಗೆ ಮುಕ್ತಿ ಯಾವಾಗ? ನಾವೂ ಮನುಷ್ಯರೇ, ಗ್ರಾಮಗಳು ಮುಳುಗಡೆಯಾಗದಂತೆ ತಡೆಗೋಡೆಗಳನ್ನು ನಿರ್ಮಾಣ ಮಾಡಿ ಎಂದು ಹೇಳುತ್ತಾರೆ ಮುಳ್ಳೂರು ಗ್ರಾಮದ ಮಹದೇವಮ್ಮ.
ನಸುಗೆಂಪು ನೀರು: ಕಳೆದ 5 ತಿಂಗಳಿನಿಂದ ಕಾವೇರಿ ನದಿ ಬತ್ತಿ ಹೋಗಿ ಬಂಡೆಗಳು ಕಾಣುತ್ತಿತ್ತು. ಆದರೆ ಪ್ರಸ್ತುತ ನದಿಯಲ್ಲಿ ನೀರಿನಮಟ್ಟ ಹೆಚ್ಚಾಗಿ ಬಂಡೆಗಳು ಕಾಣಿಸುತ್ತಿಲ್ಲ. ಕಾವೇರಿ ಮೈದುಂಬಿಕೊಳ್ಳುತ್ತಿದ್ದಾಳೆ. ನಸುಗೆಂಪು ನೀರು ಹರಿಯಲು ಆರಂಭವಾಗಿದ್ದು ಹರಿವು ಇನ್ನಷ್ಟು ಹೆಚ್ಚಾದರೆ ಪ್ರಸಿದ್ಧ ಪ್ರವಾಸಿ ಸ್ಥಳವಾದ ಭರಚುಕ್ಕಿ ಜಲಪಾತ ಕಳೆಗಟ್ಟಲಿದೆ.
ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ತಾಲ್ಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತ ಮೈದುಂಬುತ್ತಿದ್ದು ನೀರು ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ. ಪ್ರವಾಸಿಗರು ಹೆಚ್ಚಾಗಿ ಬರುವ ನಿರೀಕ್ಷೆಯೂ ಇದೆ.
ತಡೆಗೋಡೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ ಕೆಆರ್‌ಎಸ್ ಹೊರಹರಿವು ಹೆಚ್ಚಾದರೆ ಗ್ರಾಮಗಳು ಮುಳುಗಡೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.