ಚಾಮರಾಜನಗರ: ಕೆಲಸ ಕಾಯಂಗೊಳಿಸುವಂತೆ ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕ ಮಹಾ ಸಂಘದ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗ ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
‘ಸರ್ಕಾರವು ಹೊರಗುತ್ತಿಗೆ ವ್ಯವಸ್ಥೆ ರದ್ದುಗೊಳಿಸಿ ಗುತ್ತಿಗೆ ಪೌರಕಾರ್ಮಿಕರಿಗೆ ರಾಜ್ಯದಾದ್ಯಂತ ನೇರ ಪಾವತಿ ವ್ಯವಸ್ಥೆ ಮಾಡಲಾಗಿದೆ. ಇದು ಕೂಡ ಪೌರಕಾರ್ಮಿಕರ ಬದುಕಿಗೆ ಮಾರಕವಾಗಿದೆ.ಇದರಿಂದ ಪೌರಕಾರ್ಮಿಕರಿಗೆ ಸೇವಾ ಭದ್ರತೆ, ಆರೋಗ್ಯ ಭದ್ರತೆ, ಸಾಮಾಜಿಕ ಭದ್ರತೆಯಾಗಲಿ ಇಲ್ಲ’ ಎಂದು ದೂರಿದರು.
‘ನೇರ ವೇತನ ಪೌರಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಗಳಿಗೆ ಯಾವುದೇ ಅನುಕಂಪದ ಕೆಲಸ ಸಿಗುವುದಿಲ್ಲ. ನಿವೃತ್ತಿಯಾದರೆ ಪಿಂಚಣಿ ಸೇರಿದಂತೆ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ. ಇದರಿಂದ ಪೌರಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗುತ್ತವೆ. ಸರ್ಕಾರ ನೇರ ಪಾವತಿ ಮಾಡುವ ಪದ್ಧತಿಯು ಆಧುನಿಕ ಜೀತ ಪದ್ಧತಿಯಂತೆ ಇದೆ’ ಎಂದು ಆರೋಪಿಸಿದರು.
‘2017ರಲ್ಲಿ ಹಿಂದಿನ ಸರ್ಕಾರದ ಆದೇಶದಂತೆ ಬೀದಿ ಕಸ ಗುಡಿಸುವ ಪೌರಕಾರ್ಮಿಕರನ್ನು ಮಾತ್ರ ನೇರ ಪಾವತಿ ವ್ಯವಸ್ಥೆಗೆ ಸೇರಿಸಲಾಗಿದೆ.ಸ್ವಚ್ಛತೆಯ ಕೆಲಸ ನಿರ್ವಹಿಸುವ ಒಳಚರಂಡಿ ಕಾರ್ಮಿಕರು, ಕಸ ಸಾಗಿಸುವ ವಾಹನ ಚಾಲಕರು ಮತ್ತು ಕಸವನ್ನು ವಾಹನಕ್ಕೆ ತುಂಬುವವರು, ಕ್ಲೀನರ್‌ಗಳನ್ನು ಎಂದಿನಂತೆ ಗುತ್ತಿಗೆ ಪದ್ಧತಿಯಲ್ಲಿ ಮುಂದುವರಿಸಿರುವುದು ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕೆಲಸ ಮಾಡುವ ಎಲ್ಲ ಪೌರಕಾರ್ಮಿಕರ ಸೇವೆಯನ್ನು ಕಾಯಂ ಮಾಡಬೇಕು ಎಂದು 2017ರ ಆಗಸ್ಟ್‌ನಲ್ಲಿ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಆದರೆ, ಅಧಿಕಾರಿಗಳು ಈ ಕಾನೂನು ಜಾರಿಗೆ ತಂದಿಲ್ಲ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ, ಅನಿವಾರ್ಯವಾಗಿ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದೇವೆ’ ಎಂದು ಪ್ರತಿಭಟನಕಾರರು ಹೇಳಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ್, ಪೌರಕಾರ್ಮಿಕರಾದ ನಾಗರಾಜು, ಸುಬ್ರಮಣಿ, ಸೋಮಶೇಖರ್, ಷಣ್ಮುಗ, ಸ್ವಾಮಿನಾಥನ್, ತುಳಸಮ್ಮ, ಮಹದೇವಮ್ಮ, ಜಾನಕಿ, ವಿಜಯಮ್ಮ, ಲಕ್ಷ್ಮಿ, ರುಕ್ಮಿಣಿ, ಭಾಗ್ಯಾ, ಜಯಮ್ಮ, ಮುರುಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.