ADVERTISEMENT

2023ಕ್ಕೆ ಭಾರತ ಹಿಂದೂರಾಷ್ಟ್ರ ಖಚಿತ: ಸನಾತನ ಸಂಸ್ಥೆಯ ದೀಪಾ ತಿಲಕ್‌ ಹೇಳಿಕೆ

ಹಿಂದೂ ಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 8:58 IST
Last Updated 17 ಫೆಬ್ರುವರಿ 2020, 8:58 IST
ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ದೀಪಾ ತಿಲಕ್‌ ಅವರು ಮಾತನಾಡಿದರು
ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ದೀಪಾ ತಿಲಕ್‌ ಅವರು ಮಾತನಾಡಿದರು   

ಚಾಮರಾಜನಗರ: ‘2023ರಲ್ಲಿ ಭಾರತದಲ್ಲಿ ಹಿಂದೂ ರಾಷ್ಟ್ರ ಆಗೇ ಆಗುತ್ತದೆ. ಸಂಸ್ಥೆಯು ಅದಕ್ಕಾಗಿ ವ್ರತದಂತೆ ಮಾಡುತ್ತಿರುವ ಕಾರ್ಯವನ್ನು ಕೈ ಬಿಡುವುದಿಲ್ಲ’ ಎಂದು ಸನಾತನ ಸಂಸ್ಥೆಯ ದೀಪಾ ತಿಲಕ್‌ ಭಾನುವಾರ ಹೇಳಿದರು.

ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ನಗರದಲ್ಲಿ ಹಮ್ಮಿಕೊಂಡಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ದೇಶ ಹಾಗೂ ಧರ್ಮ ಈಗ ಸಂಕ್ರಮಣ ಕಾಲಘಟ್ಟದಲ್ಲಿದೆ. ಜಮ್ಮು ಮತ್ತು ಕಾಶ್ಮೀರದಕ್ಕೆ ಸಂಬಂಧಿಸಿದಂತೆ ಸಂವಿಧಾನದ ಕಲಂ 370 ರದ್ದಾಯಿತು. ಪಾಕ್‌ ಆಕ್ರಮಿತ ಕಾಶ್ಮೀರವು ಮತ್ತೆ ಭಾರತದ ನಿಯಂತ್ರಣಕ್ಕೆ ಸಿಗುವ ಲಕ್ಷಣ ಕಾಣಿಸುತ್ತಿದೆ. ಅಯೋಧ್ಯೆಯ ರಾಮಜನ್ಮಭೂಮಿ ತೀರ್ಪು ನಮ್ಮ ಕಣ್ಣ ಮುಂದೆಯೇ ಇದೆ’ ಎಂದು ಹೇಳಿದರು.

‘ಈವರೆಗೂ 15 ಲಕ್ಷ ಕಾರ್ಯಕರ್ತರು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಸಂಸತ್ತಿನಲ್ಲಿ ಇರುವವರು ಕೂಡ ಹಿಂದೂ ರಾಷ್ಟ್ರದ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ನಮ್ಮ ದೇಶದಲ್ಲಿ ಮತಾಂತರ, ಲವ್‌ ಜಿಹಾದ್‌, ಗೋ ಹತ್ಯೆಯಂತಹ ಪ್ರಕರಣಗಳಿಂದ ಹಿಂದೂಗಳಿಗೆ ಸಂಕಷ್ಟ ಇದೆ. ಜಗತ್ತಿನಲ್ಲಿ 152 ಮುಸ್ಲಿಂ ರಾಷ್ಟ್ರಗಳಿವೆ. 56 ಕ್ರಿಶ್ಚಿಯನ್‌ ದೇಶಗಳು, 12 ಬೌದ್ಧ ರಾಷ್ಟ್ರಗಳಿವೆ. ಆದರೆ 100 ಕೋಟಿ ಹಿಂದೂಗಳಿಗೆ ಒಂದೇ ಒಂದು ರಾಷ್ಟ್ರ ಇಲ್ಲ. ಹಾಗಾಗಿ, ಹಿಂದೂ ರಾಷ್ಟ್ರದ ಸಂಕಲ್ಪ ಮಾಡಬೇಕಾದ ಅಗತ್ಯ ಇದೆ’ ಎಂದರು.

‘2061ರ ಇಸವಿಯ ಹೊತ್ತಿಗೆ ನಾವು ಹಿಂದೂಗಳು ಎಂದು ಹೇಳಿಕೊಳ್ಳುವುದಕ್ಕೂ ಭಯಪಡಬೇಕಾಗುತ್ತದೆ ಎಂದು ಕೆಲವು ಅಂಕಿ ಅಂಶಗಳು ಹೇಳುತ್ತವೆ. ಹಾಗಾಗಿ ಎಲ್ಲ ಹಿಂದೂಗಳು ಎಚ್ಚರಿಕೆಯಿಂದ ಇರಬೇಕು’ ಎಂದು ಅವರು ಹೇಳಿದರು.

‘ಎಲ್ಲಿ ಗಲಭೆ ನಡೆದರೂ ಸನಾತನ ಸಂಸ್ಥೆಯತ್ತ ಹಾಗೂ ಅದರ ಸಾಧಕರತ್ತ ಕೈತೋರಿಸಲಾಗುತ್ತಿದೆ. ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ’ ಎಂದು ದೀಪಾ ಹೇಳಿದರು.

ದೇಶದ ಸಂಸ್ಕೃತಿ ಮರೆಯಬೇಡಿ: ‘ದೇಶದಲ್ಲಿರುವ ದೇವಸ್ಥಾನಗಳನ್ನು ಸರ್ಕಾರೀಕರಣ ಮಾಡಲಾಗುತ್ತಿದೆ. ಅಲ್ಲಿನ ಹಣವನ್ನು ಇತರ ಧರ್ಮದವರೆ ತೀರ್ಥಯಾತ್ರೆಗೆ ಬಳಸಲಾಗುತ್ತದೆ. ಹಿಂದೂಗಳು ಇನ್ನಾದರೂ ಎಚ್ಚೆತ್ತುಕೊಂಡು ಮಂದಿರಗಳ ರಕ್ಷಣೆಗೆ ಮುಂದಾಗಬೇಕು’ ಎಂದರು.

‘ಕಟ್ಟಡ, ಕಚೇರಿಗಳ ಉದ್ಘಾಟನೆ ಮಾಡುವಾಗ ಟೇಪ್‌ ಕತ್ತರಿಸಲಾಗುತ್ತದೆ. ಇದು ನಮ್ಮ ಸಂಸ್ಕೃತಿ ಅಲ್ಲ. ದೀಪ ಪ್ರಜ್ವಲನ ಮಾಡಬೇಕು. ತೆಂಗಿನಕಾಯಿ ಒಡೆಯಬೇಕು. ಇಸ್ರೊ ವಿಜ್ಞಾನಿಗಳು ರಾಕೆಟ್‌ ಹಾರಿಸುವುದಕ್ಕೂ ಈಗ ಮುಹೂರ್ತ ನೋಡುತ್ತಿದ್ದಾರೆ. ತೆಂಗಿನ ಕಾಯಿ ಒಡೆಯುತ್ತಿದ್ದಾರೆ’ ಎಂದರು.

‌‘ಮಕ್ಕಳ ಹುಟ್ಟುಹಬ್ಬ ಆಚರಿಸುವಾಗ ಹಿಂದೂ ಕ್ಯಾಲೆಂಡರ್‌ ಅನ್ವಯ ಆಚರಿಸಬೇಕು. ನಮ್ಮ ಸಂಸ್ಕೃತಿ ಬಗ್ಗೆ ಹೆಮ್ಮೆ ಇರಬೇಕು. ಹಿಂದೂ ಧರ್ಮದ ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಹಿನ್ನಲೆ ಇದೆ. ಅವುಗಳನ್ನು ಆಚರಿಸಲು ಹಿಂದೆ ಮುಂದೆ ನೋಡಬೇಕಾಗಿಲ್ಲ. ಮುಜುಗರ ಪಡಬೇಕಾಗಿಲ್ಲ’ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಶಿವರಾಮ ಅವರು ಮಾತನಾಡಿದರು.

‘ಮಕ್ಕಳಿಗೆ ಸಂಸ್ಕಾರ ಕಲಿಸಿ’

ವಿದ್ವಾಂಸ ಪ್ರದೀಪ್‌ ಕುಮಾರ್‌ ದೀಕ್ಷಿತ್‌ ಅವರು ಮಾತನಾಡಿ, ‘ಕಾಲ ಬದಲಾದಂತೆ ನಮ್ಮ ಚಿಂತನ ಕ್ರಮ ಬದಲಾಗಿದೆ. ಗುರುಕುಲ ಶಿಕ್ಷಣ ಪದ್ಧತಿಯಿಂದ ವಿಮುಖರಾಗುತ್ತಿದ್ದೇವೆ. ಮುಂದಿನ ಪ್ರಜೆಗಳು ಎಂದು ಗುರುತಿಸಿಕೊಂಡಿರುವ ಮಕ್ಕಳು ವಿದೇಶಿ ಚಿಂತನೆ, ಅಲ್ಲಿನ ಕ್ರಮಗಳ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದಾರೆ’ ಎಂದರು.

‘ಭಾರತೀಯರಾದ ನಾವು ಧರ್ಮಶ್ರದ್ಧೆಯನ್ನು ಕಳೆದುಕೊಂಡಿದ್ದೇವೆ. ಭಾರತದ ವಿಶಿಷ್ಟ ‌ಆಚರಣೆ, ಪರಂಪರೆ ಸಂಸ್ಕೃತಿಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿಲ್ಲ. ಧರ್ಮ ಸತ್ವದ ವಿಚಾರಗಳನ್ನು ಹೇಳಿಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಧಾರ್ಮಿಕ ಶ್ರದ್ಧಾ ಕೇಂದ್ರಗಳು ಈಗ ಉದ್ಯಾನಗಳ ರೀತಿ ಆಗಿವೆ. ಸಾಂಸಾರಿಕ ಮಾತುಕತೆಗಳಿಗೆ ಅವು ಮೀಸಲಾಗಿವೆ.ಪೋಷಕರು ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರವನ್ನು ಕಲಿಸುವ ಕೆಲಸ ಆಗಬೇಕು’ ಎಂದು ಅವರು ಅಭಿಪ್ರಾಯ ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.