ಸಂತೇಮರಹಳ್ಳಿ: ಹೋಬಳಿಯ ಕುದೇರು ಗ್ರಾಮದ ಪರಿಶಿಷ್ಟ ಸಮುದಾಯದವರ ಬೀದಿಯಲ್ಲಿ ಅಳವಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ನಾಮಫಲಕಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಶನಿವಾರ ಒತ್ತಾಯಿಸಿದರು.
ಮೋರ್ಚಾ ಪದಾಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ದಲಿತ ಮುಖಂರೊಂದಿಗೆ ಮಾತುಕತೆ ನಡೆಸಿದರು.
‘ಜಿಲ್ಲೆಯಲ್ಲಿ ಇಂಥ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶದ ಆಸ್ತಿ. ಅಂತಹ ಮಹಾಪುರುಷರಿಗೆ ಅವಮಾನ ಮಾಡುವುದು ಎಂದರೆ ದೇಶಕ್ಕೆ ಅಗೌರವ ತೋರಿದಂತೆ. ಈ ಘಟನೆಯಲ್ಲಿ ಯಾರೇ ಇದ್ದರೂ ಅವರನ್ನು ಕೂಡಲೇ ಬಂಧಿಸಿ, ಶಿಕ್ಷೆ ನೀಡಬೇಕು. ಅದು ಇತರರಿಗೆ ಪಾಠವಾಗಬೇಕು’ ಎಂದು ಅವರು ಹೇಳಿದರು.
ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ವೇಣುಗೋಪಾಲ್, ಹನೂರು ಮಂಡಲ ಅಧ್ಯಕ್ಷ ಕೊತನೂರು ರಾಜಶೇಖರ್, ಕಬ್ಬಳ್ಳಿ ರೇವಣ್ಣ. ಟಗರಪುರ ರೇವಣ್ಣ, ಕುದೇರು ಗ್ರಾಮದ ಮುಖಂಡರಾದ ಮಹದೇವಯ್ಯ. ರೇವಣ್ಣ, ಜೈಶಂಕರ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.