ADVERTISEMENT

ಜಾನಪದ ಶಾಸ್ತ್ರೀಯ ಪಠ್ಯಕ್ಕೆ ಅನುಮತಿ‌ ನೀಡಿ: ಹಂಸಲೇಖ

ಚಾಮರಾಜನಗರ: ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಮನವಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 14:27 IST
Last Updated 7 ಫೆಬ್ರುವರಿ 2021, 14:27 IST
ಚಾಮರಾಜನಗರದಲ್ಲಿ ಭಾನುವಾರ ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ಹಾಗೂ 2018 ಮತ್ತು 2019ನೇ ಸಾಲಿನ ಪುಸ್ತಕ ಬಹುಮಾನವನ್ನು ಪ್ರದಾನ ಮಾಡಲಾಯಿತು. ಸಚಿವರಾದ ಅರವಿಂದ ಲಿಂಬಾವಳಿ, ಎಸ್‌.ಸುರೇಶ್‌ಕುಮಾರ್‌ ಹಾಗೂ ಇತರ ಗಣ್ಯರೊಂದಿಗೆ  ಪ್ರಶಸ್ತಿ ಪುರಸ್ಕೃತರು ಹಾಗೂ ಬಹುಮಾನಿತರು
ಚಾಮರಾಜನಗರದಲ್ಲಿ ಭಾನುವಾರ ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ಹಾಗೂ 2018 ಮತ್ತು 2019ನೇ ಸಾಲಿನ ಪುಸ್ತಕ ಬಹುಮಾನವನ್ನು ಪ್ರದಾನ ಮಾಡಲಾಯಿತು. ಸಚಿವರಾದ ಅರವಿಂದ ಲಿಂಬಾವಳಿ, ಎಸ್‌.ಸುರೇಶ್‌ಕುಮಾರ್‌ ಹಾಗೂ ಇತರ ಗಣ್ಯರೊಂದಿಗೆ  ಪ್ರಶಸ್ತಿ ಪುರಸ್ಕೃತರು ಹಾಗೂ ಬಹುಮಾನಿತರು   

ಚಾಮರಾಜನಗರ: ‘ಕರ್ನಾಟಕ ಸಂಗೀತ ಮಾದರಿಯಲ್ಲಿ ಜಾನಪದಕ್ಕೂ ಶಾಸ್ತ್ರ ಪಠ್ಯಕ್ರಮ ಸಿದ್ಧಪಡಿಸಿ ಪಾಠ ಮಾಡುವ ಅಗತ್ಯವಿದೆ. ಈ ಪಠ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಬೇಕು’ ಎಂದು ಹಂಸಲೇಖ ದೇಸಿ ಕಾಲೇಜಿನ ಸ್ಥಾಪಕ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರು ಭಾನುವಾರ ಹೇಳಿದರು.

ನಗರದಲ್ಲಿ ನಡೆದ ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ‌ಹಾಗೂ 2018 ಹಾಗೂ 2019ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು,
'ಜನಪದ ಎಂದರೆ ಮೆರವಣಿಗೆ. ಮೆರವಣಿಗೆ ಇಲ್ಲದಿದ್ದರೆ ಜನಪದ ಇಲ್ಲ. ಜನಪದಕ್ಕೀಗ ಬರವಣಿಗೆ ಬಂದಿದೆ. ಇನ್ನೂ ಶಾಸ್ತ್ರೋಕ್ತವಾಗಿಲ್ಲ. ಜನಪದ ಎಂದರೆ ಸೊಗಡು ಶಾಸ್ತ್ರ. ಸ್ವರಗಳನ್ನು ಕಲಿಸುವುದಕ್ಕೆ ಶಾಸ್ತ್ರ ಮಾಡಬಹುದು. ಸೊಗಡನ್ನು ಕಲಿಸುವುದಕ್ಕೆ ಯಾವುದೇ ಶಾಸ್ತ್ರವಿಲ್ಲ. ಹಾಗಾಗಿ ಜನಪದ ಸೊಗಡಿನ ಶಾಸ್ತ್ರ ಸಿದ್ಧಪಡಿಸಬೇಕಿದೆ' ಎಂದರು.

'ಈ ನಿಟ್ಟಿನಲ್ಲಿ 20 ವರ್ಷಗಳ ಕಾಲ ಸಂಶೋಧನೆ ಮಾಡಿ, ಹಿರಿಯರೊಂದಿಗೆ ಚರ್ಚಿಸಿ ಜನಪದ ನಾದಕ್ಕೆ ಐದನಿ ಶಾಸ್ತ್ರ, ತಾಳಕ್ಕೆ ದುಂದುಮೆ ಶಾಸ್ತ್ರ ಸಿದ್ಧಪಡಿಸಲಾಗಿದೆ. ಕರ್ನಾಟಕ ಸಂಗೀತಕ್ಕೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಅದೇ ರೀತಿ ಐದನಿ, ದುಂದುಮಕ್ಕೆ ಅನುಮೋದನೆ ನೀಡಿದರೆ, ಸಂಗೀತ ಕಲಿಸುವ ಶಾಲೆಗಳಲ್ಲಿ, ಜಾನಪದ ವಿಶ್ವವಿದ್ಯಾಲಯಗಳಲ್ಲಿ, ಪರೀಕ್ಷೆಗಳಲ್ಲಿ ಈ ಶಾಸ್ತ್ರವನ್ನು ಪರಿಚಯಿಸಬಹುದು’ ಎಂದು ಹಂಸಲೇಖ ಹೇಳಿದರು.

ADVERTISEMENT

ದೇಸಿ ಸಂಗೀತ ಲಿಪಿ: ‘ಜಾನಪದ ಸಂಗೀತ ಬರೆಯುವುದಕ್ಕೆ ದೇಸಿ ಸಂಗೀತ ಲಿಪಿಯನ್ನೂ ನಾನು ಕಂಡು ಹಿಡಿದಿದ್ದೇನೆ. ದೇಸಿ ಲಿಪಿ, ಐದನಿ ನಾದ ಶಾಸ್ತ್ರ, ಮತ್ತು ದುಂದುಮೆ ತಾಳಶಾಸ್ತ್ರ. ಈ ಮೂರೂ ಜಾರಿಗೆ ಬಂದರೆ ಜಾನಪದ ಇನ್ನಷ್ಟು ಗಟ್ಟಿಯಾಗುತ್ತದೆ’ ಎಂದು ಅವರು ಹೇಳಿದರು.

ಅನುದಾನ ಹೆಚ್ಚಳಕ್ಕೆ ಪ್ರಯತ್ನ: ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಮಾತನಾಡಿ, ‘ಅಕಾಡೆಮಿಗಳಿಗೆ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ ಎಂಬುದು ನನಗೂ ತಿಳಿದಿದೆ. ಈ ಬಜೆಟ್‌ನಲ್ಲಿ ಅದನ್ನು ಹೆಚ್ಚಿಸಲು ಪ್ರಯತ್ನ ಪಡುತ್ತೇನೆ. ಇದೇ 9ರಂದು ಎಲ್ಲ ಅಕಾಡೆಮಿಗಳ ಅಧ್ಯಕ್ಷರ ಸಭೆ ಕರೆದಿದ್ದೇನೆ. ಅಲ್ಲಿ ಸಮಸ್ಯೆಗಳನ್ನು ಚರ್ಚಿಸಿ ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ’ ಎಂದರು.

ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಎಲ್ಲ ಮೂವತ್ತು ಜಿಲ್ಲೆಗಳ ತಲಾ ಒಬ್ಬರು ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಕ್ಷಿಣ ಕನ್ನಡದ ಗಾಯತ್ರೀ ನಾವಡ ಅವರಿಗೆ ಡಾ.ಜಿ.ಶಂ.ಪ ಪ್ರಶಸ್ತಿ, ಪ್ರೊ. ಬಸವರಾಜ ಸಬರದ ಅವರಿಗೆ ಡಾ.ಬಿ.ಎಸ್‌.ಗದ್ದಗೀಮಠ ಪ್ರಶಸ್ತಿ ಪ್ರದಾನ ಮಾಡಲಾಯಿತು.

2018ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದ್ದ ‘ಜನಪದ ಸಾಹಿತ್ಯದಲ್ಲಿ ತವರುಮನೆ’ ಕೃತಿಯ ಲೇಖಕಿ ಡಾ.ಮಮ್ತಾಜ್‌ ಬೇಗಂ ಹಾಗೂ 2019ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದ್ದ ‘ಜಾನಪದ ಜ್ಞಾನವಿಜ್ಞಾನ’ ಕೃತಿಯ ಲೇಖಕ ಡಾ.ಎಚ್‌.ಡಿ.ಪೋತೆ ಅವರನ್ನೂ ಸನ್ಮಾನಿಸಲಾಯಿತು.

2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು:

ಬೆಂಗಳೂರು ಜಿಲ್ಲೆಯ ಜಾನಪದ ಗಾಯಕ ಎಂ.ಕೆ.ಸಿದ್ಧರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಬಾನೆ ಪದ ಕಲಾವಿದೆ ಹೊನ್ನಗಂಗಮ್ಮ, ರಾಮನಗರ ಜಿಲ್ಲೆಯ ತಮಟೆ ವಾದನದ ತಿಮ್ಮಯ್ಯ, ಕೋಲಾರ ಜಿಲ್ಲೆಯ ತತ್ವಪದ ಭಜನೆ ಕಲಾವಿದ ಕೆ.ಎನ್. ಚೆಂಗಪ್ಪ, ಚಿಕ್ಕಬಳ್ಳಾಪುರ ಜಿಲ್ಲೆಯ ಕೀಲುಕುದುರೆ ಕಲಾವಿದ ನಾರಾಯಣಪ್ಪ, ತುಮಕೂರು ಜಿಲ್ಲೆಯ ವೀರಭದ್ರನ ಕುಣಿತದ ಸಿ.ವಿ.ವೀರಣ್ಣ, ದಾವಣೆಗೆರೆ ಜಿಲ್ಲೆಯ ಸೋಬಾನೆ ಪದದ ಭಾಗ್ಯಮ್ಮ, ಚಿತ್ರದುರ್ಗ ಜಿಲ್ಲೆಯ ಮದುವೆ ಹಾಡಿನ ಕೆಂಚಮ್ಮ, ಶಿವಮೊಗ್ಗ ಜಿಲ್ಲೆಯ ಜಾನಪದ ಗಾಯಕ ಕೆ. ಯುವರಾಜ್, ಮೈಸೂರು ಜಿಲ್ಲೆಯ ಕಂಸಾಳೆ ಕಲಾವಿದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಕೋಲಾಟ ಕಲಾವಿದ ಭೂಮಿಗೌಡ, ಚಿಕ್ಕಮಗಳೂರು ಜಿಲ್ಲೆಯ ಚೌಡಿಕೆ ಪದದ ಎಂ.ಸಿ. ಭೋಗಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ಗೊಂಬೆ ಕುಣಿತದ ಗೋಪಾಲಕೃಷ್ಣ ಬಂಗೇರಾ, ಉಡುಪಿ ಜಿಲ್ಲೆಯ ಕರಗ ಕೋಲಾಟದ ರಮೇಶ್ ಕಲ್ಮಾಡಿ, ಕೊಡಗು ಜಿಲ್ಲೆಯ ಬಾಳೋಪಾಟ್‌ನ ಕೆ.ಕೆ. ಪೊನ್ನಪ್ಪ, ಚಾಮರಾಜನಗರ ಜಿಲ್ಲೆಯ ಸೋಬಾನೆ ಕಲಾವಿದೆ ಬಿ. ಹೊನ್ನಮ್ಮ, ಹಾಸನ ಜಿಲ್ಲೆಯ ಹಾಡುಗಾರಿಕೆ ಕಲಾವಿದ ಗ್ಯಾರಂಟಿ ರಾಮಣ್ಣ, ಬೆಳಗಾವಿ ಜಿಲ್ಲೆಯ ತತ್ವಪದ ಕಲಾವಿದ ಮುತ್ತಪ್ಪ ಅಲ್ಲಪ್ಪ ಸವದಿ, ಧಾರವಾಡ ಜಿಲ್ಲೆಯ ತತ್ವಪದ ಕಲಾವಿದ ಮಲ್ಲೇಶಪ್ಪ ತಡಸದ, ವಿಜಯಪುರದ ಡೊಳ್ಳು ಕುಣಿತದ ಸುರೇಶ್ ರಾಮಚಂದ್ರ ಜೋಶಿ, ಬಾಗಲಕೋಟೆ ಜಿಲ್ಲೆಯ ಭಜನೆ ಕಲಾವಿದ ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ,ಉತ್ತರ ಕನ್ನಡ ಜಿಲ್ಲೆಯ ಲಾವಣಿ ಕಲಾವಿದ ಸಹದೇವಪ್ಪ ಈರಪ್ಪ ನಡಗೇರಾ, ಹಾವೇರಿ ಜಿಲ್ಲೆಯ ತತ್ವಪದ ಕಲಾವಿದ ಬಸವರಾಜ ಶಿಗ್ಗಾಂವಿ, ಗದಗ ಜಿಲ್ಲೆಯ ಪುರವಂತಿಕೆಯ ಮುತ್ತಪ್ಪ ರೇವಣ್ಣಪ್ಪ ರೋಣ, ಕಲ್ಬುರ್ಗಿಯ ಹಲಗೆ ಸಾಯಬಣ್ಣ, ಕೊಪ್ಪಳ ಜಿಲ್ಲೆಯ ಗೋಂದಳಿ ತಿಪ್ಪಣ್ಣ ಅಂಬಾಜಿ ಸುಗತೇಕರ, ಬಳ್ಳಾರಿ ಜಿಲ್ಲೆಯ ಗೋಂದಳಿ ರಾಮಣ್ಣ, ಯಾದಗಿರಿ ಜಿಲ್ಲೆಯ ಮದುವೆಹಾಡುಗಾರ್ತಿ ಬಸವಲಿಂಗಮ್ಮ ಅವರಿಗೆ ನೀಡಿ ಗೌರವಿಸಲಾಯಿತು.

ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್. ಮಹೇಶ್, ಸಿ.ಎಸ್. ನಿರಂಜನಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ. ಅಶ್ವಿನಿ, ನಗರಸಭಾಧ್ಯಕ್ಷೆ ಆಶಾ , ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿ.ಪಂ, ಸಿಇಒ ಹರ್ಷಲ್ ಭೊಯರ್ ನಾರಾಯಣರಾವ್, ಎಸ್ಪಿ ದಿವ್ಯಾ ಸಾರಾ ಥಾಮಸ್, ಅಕಾಡೆಮಿ ಸದಸ್ಯರಾದ ಸಿ.ಎಂ.ನರಸಿಂಹಮೂರ್ತಿ, ಲಕ್ಷ್ಮಿದೇವಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.