ADVERTISEMENT

ಕನಕದಾಸರು ಇಡೀ ಸಮಾಜಕ್ಕೆಸೇರಿದವರು: ವೆಂಕಟೇಶ್‌

ದಾಸ ಶ್ರೇಷ್ಠನ ಜಯಂತಿ, ಜಿಲ್ಲಾಕೇಂದ್ರದಲ್ಲಿ ವಿಜೃಂಭಣೆಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 14:21 IST
Last Updated 30 ನವೆಂಬರ್ 2023, 14:21 IST
ಚಾಮರಾಜನಗರದ ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ಸಂಶೋಧಕ ರಾಜಶೇಖರ ಜಮದಂಡಿ ಅವರು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್‌, ಸಮುದಾಯದ ಮುಖಂಡ ಉಮೇಶ್‌ ಇತರರು ಇದ್ದರು
ಚಾಮರಾಜನಗರದ ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ಸಂಶೋಧಕ ರಾಜಶೇಖರ ಜಮದಂಡಿ ಅವರು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್‌, ಸಮುದಾಯದ ಮುಖಂಡ ಉಮೇಶ್‌ ಇತರರು ಇದ್ದರು   

ಚಾಮರಾಜನಗರ: ‘ಕನಕದಾಸರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲ ವರ್ಗಗಳಿಗೂ ಅನ್ವಯವಾಗುವ, ಜಾಗೃತಗೊಳಿಸುವ ಕೀರ್ತನೆಗಳನ್ನು ರಚಿಸಿ ಸಮಾಜವನ್ನು ಅವರು ಎಚ್ಚರಿಸಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಗುರುವಾರ ಹೇಳಿದರು. 

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಭಕ್ತ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಸಾಮಾಜಿಕ ಬದಲಾವಣೆಗೆ ಒತ್ತು ನೀಡಿದ್ದ ಕನಕದಾಸರು, ಸಮಾಜ ಸುಧಾರಕರು. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಮೌಢ್ಯ, ಜಾತೀಯತೆಯನ್ನು ತೊಡೆದುಹಾಕಲು ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಕೀರ್ತನೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಅವರ ಕೀರ್ತನೆಗಳ ಸಾರ, ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ’ ಎಂದರು. 

ADVERTISEMENT

‘ಸಂತರ, ತತ್ವ ಸಿದ್ದಾಂತ, ವಿಚಾರಧಾರೆ, ಚಿಂತನೆಗಳನ್ನು ಅರಿಯಲು ಸರ್ಕಾರ ವಿವಿಧ ಮಹಾಪುರುಷರ, ದಾರ್ಶನಿಕರ ಜಯಂತಿಗಳನ್ನು ಆಚರಿಸಲು ಅನುವು ಮಾಡಿಕೊಟ್ಟಿದೆ. ಅವರ ಸಂದೇಶಗಳನ್ನು ಅರಿತು ಸಮಾಜದ ಇತರರಿಗೂ ಮನವರಿಕೆ ಮಾಡುವ ಮೂಲಕ ಕನಕದಾಸರಿಗೆ ಗೌರವ ಸಲ್ಲಿಸಬೇಕು’ ಎಂದರು.

ಜಿಲ್ಲಾಕೇಂದ್ರದಲ್ಲಿ ಕನಕಭವನದ ಮುಂದವರಿದ ಕಾಮಗಾರಿಗಾಗಿ ಅಗತ್ಯವಾದ ಅನುದಾನ ಒದಗಿಸುವುದಾಗಿ ಸಚಿವ ವೆಂಕಟೇಶ್‌ ಅವರು ಭರವಸೆ ನೀಡಿದರು. 

ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾ ನಾಗ್ ಮಾತನಾಡಿ, ‘1509ರಲ್ಲಿ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದ ಕನಕದಾಸರು 100 ವರ್ಷಗಳ ಕಾಲ ಜೀವಿಸಿದ್ದರು. ಕನಕದಾಸರು ಕನ್ನಡದಲ್ಲಿ ಸರಳ ಕೀರ್ತನೆಗಳನ್ನು ರಚಿಸುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಜೀವನದಲ್ಲಿ ಪ್ರತಿಯೊಬ್ಬರೂ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಮಹಾಪುರುಷರು ಕೀರ್ತನಾ ಸಂದೇಶಗಳನ್ನು ನಮಗೆ ನೀಡಿದ್ದಾರೆ. ಅವರ ಜೀವನಾದರ್ಶಗಳನ್ನು ಪಾಲಿಸಬೇಕು’ ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪ್‌ ಜೆ.ಕಾಂಟ್ರ್ಯಾಕ್ಟರ್, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಬಸವರಾಜು, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಉಮೇಶ್, ಮುಖಂಡರಾದ ರಾಜಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ ಇತರರು ಇದ್ದರು. 

ಅದ್ದೂರಿ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ರಾಜ್‌ಕುಮಾರ್‌ ರಂಗಮಂದಿರದ ವರೆಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. 

ಶಾಸಕ ಸಿ.ಪುಟ್ಟರಂಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ಪುಟ್ಟರಂಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸ್ವಲ್ಪ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಬೆಳಿಗ್ಗೆ 11.30ಕ್ಕೆ ಆರಂಭಗೊಂಡ ಮೆರವಣಿಗೆ ರಂಗಮಂದಿರ ತಲುಪುವಾಗ ಮಧ್ಯಾಹ್ನ 2.15 ಆಗಿತ್ತು. 

ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಗೊರವರ ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. 

‘ಸರಳ ಜೀವನ ಮಾರ್ಗ ತೋರಿದರು’

ಮುಖ್ಯ ಭಾಷಣ ಮಾಡಿದ ಮೈಸೂರಿನ ಸಂದರ್ಶಕ ಪ್ರಾಧ್ಯಾಪಕ ಸಂಶೋಧಕ ರಾಜಶೇಖರ ಜಮದಂಡಿ ಅವರು ‘ಕನಕದಾಸರು ಅಧ್ಯಾತ್ಮದ ದಿವ್ಯದೃಷ್ಟಿ  ಹೊಂದಿದ್ದರು. ಮನಸ್ಸಿನ ಕಲ್ಮಶವನ್ನು ತೊಡೆದುಹಾಕಿದ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದೆ. ಮನಸ್ಸಿನ ಕಲ್ಮಶ ತಿಳಿಯಲು ಅಂತರಂಗದ ಕಣ್ಣು ತೆರೆಯಬೇಕು. ಅಂತರಂಗ ಬಹಿರಂಗ ಶುದ್ದಿಯನ್ನು ಜೀವನದಲ್ಲಿ ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದರು. ‘ಕನಕ ಎಂದರೆ ಬಂಗಾರ. ಶ್ರೀಮಂತರಾಗಿ ಹುಟ್ಟಿದ್ದರೂ ಸರಳ ಜೀವನ ಅನುಸರಿಸಿ ಇತರರಿಗೂ ಸರಳ ಜೀವನಮಾರ್ಗ ತೋರಿದರು. ಮೋಹನ ತರಂಗಿಣಿ ರಾಮದಾಸಚರಿತೆ ಕೃತಿಗಳನ್ನು ರಚಿಸಿದ ಕನಕದಾಸರು ಲೌಕಿಕ ಜೀವನದ ಆಸೆ ಆಮಿಷಗಳನ್ನು ತೊರೆದು ಭಕ್ತಿ ಮಾರ್ಗದಲ್ಲಿ ನಡೆಯುವಂತೆ ಜನರನ್ನು ಪ್ರೇರೇಪಿಸಿದರು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.