ಚಾಮರಾಜನಗರ: ‘ಬೇರೆ ರಾಜ್ಯಗಳಲ್ಲಿರುವ ಕರ್ನಾಟಕದ ಪ್ರದೇಶಗಳು ರಾಜ್ಯಕ್ಕೆ ಸೇರ್ಪಡೆಗೊಂಡಾಗ ಕರ್ನಾಟಕ ಏಕೀಕರಣ ಪೂರ್ಣಗೊಳ್ಳುತ್ತದೆ’ ಎಂದು ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬುಧವಾರ ಪ್ರತಿಪಾದಿಸಿದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾವು ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಕರ್ನಾಟಕ ಏಕೀಕರಣ ಮಹೋತ್ಸವ’ದಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಏಕೀಕರಣ ಚಳವಳಿ ಹಾಗೂ ಸ್ವಾತಂತ್ರ್ಯ ಹೋರಾಟ ಜೊತೆ ಜೊತೆಯಾಗಿ ನಡೆದಂತಹವು. ಹಾಗಾಗಿ, ಏಕೀಕರಣ ಚಳವಳಿಯೂ ಒಂದು ರೀತಿಯಲ್ಲಿಸ್ವಾತಂತ್ರ್ಯ ಹೋರಾಟವೇ’ ಎಂದು ಹೇಳಿದರು.
‘ಚೆಲುವ ಕನ್ನಡ ನಾಡು ಸಂಪೂರ್ಣವಾಗಿ ಉದಯವಾಗಿಲ್ಲ. ಭೌಗೋಳಿಕಗಾಗಿ ಎಲ್ಲರೂ ಒಗ್ಗಟ್ಟಾಗಿದ್ದಂತೆ ಕಂಡುಬಂದರೂ, ಭಾವೈಕ್ಯ ಉಂಟಾಗಿಲ್ಲ. ಇನ್ನೂ ಒಡಕಿದೆ. ರಾಜಕಾರಣಿಗಳಿಗೆ ನಾಡು ನುಡಿಯ ಬಗ್ಗೆ ಜ್ಞಾನ ಇಲ್ಲ. ಅಧಿಕಾರ ಲಾಲಸೆಯೇ ಹೆಚ್ಚಾಗಿದೆ. ಜನರಲ್ಲೂ ಜಾಗೃತಿ ಇಲ್ಲ.ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಏಕೀಕರಣ ನಡೆದಿದೆ. ಆ ಉದ್ದೇಶ ಸಂಪೂರ್ಣವಾಗಿ ಈಡೇರಿಲ್ಲ. ಇದನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ’ಎಂದರು.
ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಇರಲಿ: ‘ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಇಂಗ್ಲಿಷ್ ಒಂದು ಭಾಷೆಯಾಗಿ, ಮಾಧ್ಯಮವಾಗಿ ಬೇಕು. ಆದರೆ, ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮಾತೃಭಾಷೆಯೇ ಮಾಧ್ಯಮವಾಗಬೇಕು. ಸರ್ಕಾರ ಈ ಬಗ್ಗೆ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ಚಾಮರಾಜನಗರ ಜಿಲ್ಲೆ ಭಾಷೆಯ ತೊಟ್ಟಿಲು. ಕೊಳ್ಳೇಗಾಲ ಈ ಹಿಂದೆ ಮದ್ರಾಸು ಪ್ರಾಂತ್ಯಕ್ಕೆ ಸೇರಿದ್ದರೂ ಇಲ್ಲಿ ಎಲ್ಲರೂ ಕನ್ನಡವನ್ನೇ ಮಾತನಾಡುತ್ತಾರೆ. ಗಡಿಗ್ರಾಮದ ಗೋಪಿನಾಥಂ ಜನರಲ್ಲೂ ಕನ್ನಡ ಪ್ರೀತಿ ಹೆಚ್ಚಾಗಿದೆ. ಕನ್ನಡ ಶಾಲೆ ಬೇಕು ಎಂದು ಅವರೇ ಮನವಿ ಮಾಡುತ್ತಿದ್ದಾರೆ. ಮೇರುನಟ ಡಾ.ರಾಜಕುಮಾರ್, ಖ್ಯಾತ ಸಾಹಿತಿ ಜಿ.ಪಿ.ರಾಜರತ್ನಂ ಅವರು ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ’ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್ ಮಾತನಾಡಿ, ‘ಹಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಬೆಳಗಾವಿಯಲ್ಲಿ ಮರಾಠಿ ಪ್ರಭಾವ ಹೆಚ್ಚಾಗಿದೆ. ಕಲಬುರ್ಗಿಯಲ್ಲಿ ತೆಲುಗು ಮಾತನಾಡುವವರು ಹೆಚ್ಚಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ತೆಲುಗು ಭಾಷೆಯ ಪ್ರಭಾವ ಹೆಚ್ಚಿದೆ. ಈ ಜಿಲ್ಲೆ ಕೇರಳ ಮತ್ತು ತಮಿಳುನಾಡಿಗೆ ಹೊಂದಿಕೊಂಡಿದ್ದರೂ ಇಲ್ಲಿ ಅಲ್ಲಿನ ಭಾಷೆಗಳ ಪ್ರಭಾವ ಇಲ್ಲ’ ಎಂದರು.
ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಿ.ಕೆ.ರಾಮೇಗೌಡ, ಸಿದ್ದಪ್ಪ ಹೊಟ್ಟಿ, ಕೈವಾರ ಶ್ರಿನಿವಾಸ್, ಟಿ.ವೀರಭದ್ರಪ್ಪ, ಸೋಮಶೇಖರ್, ದೊಡ್ಡಗವಿ ಬಸಪ್ಪ, ಡಾ.ರಘುರಾಮ್ ಸರ್ವೇಗಾರ, ಕೆ.ಸುರೇಶ್, ದಾನೇಶ್ವರಿ, ಚಂದ್ರಶೇಖರ್, ಎಚ್.ಸತೀಶ್, ನಾರಾಯಣರಾವ್, ಆಲೂರು ಮಲ್ಲು, ಅಲಿಖಾನ್ ಮತ್ತು ಗಣೇಶ್ ಅವರನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್.ನಾರಾಯಣರಾವ್, ಎಎಸ್‌ಪಿ ಅನಿತಾ ಬಿ.ಹದ್ದಣ್ಣವರ್ ಸನ್ಮಾನಿಸಿದರು.
ಹಕ್ಕೋತ್ತಾಯ: ಮಹಾಸಭಾವು ಮೂರು ಹಕ್ಕೋತ್ತಾಯಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿತು.
‘ಚಾಮರಾಜೇಶ್ವರ ದೇವಸ್ಥಾನದ ರಥವನ್ನು ಶೀಘ್ರವಾಗಿ ನಿರ್ಮಾಣ ಮಾಡಬೇಕು, ಚಾಮರಾಜನಗರದಲ್ಲಿ ಡಾ.ರಾಜಕುಮಾರ್ ಪ್ರತಿಮೆಯನ್ನು ಸ್ಥಾಪಿಸಬೇಕು ಮತ್ತು ಅಂಬೇಡ್ಕರ್‌ಗೆ ಅಗೌರವ ತೋರಿದ ಶಿಕ್ಷಣ ಇಲಾಖೆಯ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂಬ ಹಕ್ಕೋತ್ತಾಯಗಳನ್ನು ಓದಿದಮಹಾಸಭಾದ ಗೌರವ ಅಧ್ಯಕ್ಷ ಶಾ.ಮುರಳಿ ಅವರು ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎಚ್.ನಾರಾಯಣ ರಾವ್ ಮಾತನಾಡಿದರು. ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್ ವೈ., ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ವಿನಯ್, ಮಹಾಸಭಾ ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು ಇದ್ದರು.
‘ಪ್ರತ್ಯೇಕತೆ ಕೂಗು ಹೋಗಲಾಡಿಸಿ’
‘ರಾಜ್ಯವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಗಡಿಜಿಲ್ಲೆಗಳ ಜನರ ಸ್ಥಿತಿ ಶೋಚನೀಯವಾಗಿದೆ. ಕನ್ನಡಿಗರ ಮೇಲೆಹಿಂದಿ ಹೇರಿಕೆ ಹುನ್ನಾರ ನಡೆಯುತ್ತಿದೆ. ನೆಲ, ಜಲಗಳ ಅಸ್ಮಿತೆ ಕಾಪಾಡಲು ಪ್ರಯತ್ನಿಸಬೇಕು’ ಎಂದು ಸಿಪಿಕೆ ಹೇಳಿದರು.
‘ರಾಜ್ಯದ ಕೊಡಗು, ಉತ್ತರ ಕರ್ನಾಟಕ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿರುತ್ತದೆ. ಈಗ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇದನ್ನು ಶಾಶ್ವತವಾಗಿ ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
‘ಸರೋಜಿನಿ ಮಹಿಷಿ ವರದಿಯಲ್ಲಿ ಕೆಲವು ಬದಲಾವಣೆಗಳನ್ನು ತಂದು ಜಾರಿಗೊಳಿಸಬೇಕು’ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.