ಯಳಂದೂರು: ಭಾಷೆ, ಸಾಹಿತ್ಯ, ಸಂಸ್ಕೃತಿ, ಚರಿತ್ರೆ ಅಧ್ಯಯನಕ್ಕೆ ಶಾಸನಗಳು ಅಮೂಲ್ಯ ಆಕರಗಳು. ಆಯಾ ಕಾಲಗಟ್ಟದ ಜನಾಂಗದ ಆಸ್ತಿ. ಈಗಲೂ ಯಾರ ಕಣ್ಣಿಗೂ ಬೀಳದೆ ಹೊಲ, ಗದ್ದೆ, ಹೊಳೆ, ದೇಗುಲ, ದಡಗಳಲ್ಲಿ ನೂರಾರು ಶಾಸನಗಳು ಉಳಿದಿವೆ. ನಾಡಿನ ಹಿರಿಮೆ ಮತ್ತು ಸಾಂಸ್ಕೃತಿಕ ಚೆಲುವನ್ನು ಸಾರುವ ಇಂತಹ ಕನ್ನಡ ಶಿಲಾ ಶಾಸನಗಳು ವಿವಿಧ ಕಾರಣಗಳಿಂದ ಅಳಿಯುತ್ತಿವೆ.
ಜಿಲ್ಲೆಯಲ್ಲಿ 932 ಶಾಸನಗಳು ಸಿಕ್ಕಿರುವುದನ್ನು ದಾಖಲಿಸಲಾಗಿದೆ. ಯಳಂದೂರು ತಾಲ್ಲೂಕಿನಲ್ಲಿ 211 ಶಾಸನಗಳನ್ನು ಗುರುತಿಸಲಾಗಿದೆ. ಚೋಳ, ಗಂಗಾ, ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸ ಕಾಲದ ಕುರುಹುಗಳು ಸಿಕ್ಕಿವೆ. ತಾಮ್ರ, ಶಿಲಾ ಹಾಗೂ ತಾಳೆಗರಿ ಶಾಸನಗಳು ಉಳಿದಿವೆ. ತಮಿಳು, ಹಳೆಗನ್ನಡ ಶಾಸನಗಳು ಸಂಸ್ಕೃತ ಭೂಯಿಷ್ಟತೆಯಿಂದ ಕೂಡಿದ್ದು, ನಾಡು-ನುಡಿ ಅರ್ಥೈಸಿಕೊಳ್ಳುವವರಿಗೆ ವರವಾಗಿವೆ. ಆದರೆ, ಕೆಲವು ಶಾಸನಗಳು ಅವನತಿಯತ್ತ ಸಾಗಿದರೆ, ವೀರಗಲ್ಲು, ಮಾಸ್ತಿಗಲ್ಲು ಪ್ರಾಮುಖ್ಯ ಕಳೆದುಕೊಳ್ಳುತ್ತಿವೆ.
ಪಟ್ಟಣದ ಸುತ್ತಮುತ್ತ 10ಕ್ಕೂ ಹೆಚ್ಚಿನ ಶಾಸನಗಳು ಸಿಕ್ಕಿವೆ. ಗೌರೀಶ್ವರ ದೇವಾಲಯ ಪ್ರಾಂಗಣದಲ್ಲಿ 16ನೇ ಶತಮಾನಕ್ಕೆ ಸೇರಿದ ಹಳೆಗನ್ನಡ ಶಾಸನ ಮುದ್ದಭೂಪ, ರಾಮರಾಜನಾಯಕ ಬಗ್ಗೆ ತಿಳಿಸುತ್ತದೆ. ಆದರೆ, ಶಾಸನದ ಕೆತ್ತನೆ ಮರೆಯಾಗುತ್ತಿದ್ದು, ಭಾಷಾ ವೈವಿಧ್ಯತೆ ನಶಿಸುವ ಆತಂಕ ತಂದಿತ್ತಿದೆ. 11ನೇ ಶತಮಾನದ ಹೊಯ್ಸಳ ವೀರಬಲ್ಲಾಳ ಬಗ್ಗೆ ಮಾಹಿತಿ ನೀಡುವ ಬಿಳಿಗಿರಿರಂಗನಬೆಟ್ಟದ ಶ್ರವಣನ ಅರೆ ಶಾಸನಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ, ಪ್ರಾಚ್ಯ ಪ್ರಜ್ಞೆ ಉಳಿಸಬೇಕು ಎನ್ನುತ್ತಾರೆ ಇತಿಹಾಸ ಆಸಕ್ತರು.
ಯಳಂದೂರು ಹೆಸರಿನ ಹಿನ್ನಲೆ
ಕೊಳ್ಳೇಗಾಲ 11ನೇ ಶತಮಾನದಲ್ಲಿ ಚೋಳ ರಾಣಿಯ ಹೆಸರಿನೊಂದಿಗೆ ಬೆಸೆದುಕೊಂಡಿದ್ದರೆ, ಹೊನ್ನೂರು ಇಮ್ಮಡಿ ಬಲ್ಲಾಳನ ರಾಣಿಯ ಸ್ಮರಣೆಗೆ ನಿರ್ಮಿಸಲಾಗಿದೆ. 13ನೇ ಶತಮಾನದಲ್ಲಿ ಮದ್ದೂರು ಹೆಸರಾಗಿತ್ತು. ಹೀಗೆ ತಮಿಳು ಮತ್ತು ಕನ್ನಡ ಶಾಸನಗಳಲ್ಲಿ ಊರಿನ ಇತಿಹಾಸದ ಬಗ್ಗೆ ಕುತೂಹಲದ ಮಾಹಿತಿ ಲಭ್ಯವಾಗಿದೆ.
ಕಪಿಲ ಋಷಿ ತನ್ನ ಕಮಂಡಲದಲ್ಲಿ ಗಂಗೆಯ ನೀರನ್ನು ಇಟ್ಟಿಕೊಂಡು ನೀಲಗಿರಿಯಲ್ಲಿ ತಪಸ್ಸು ಮಾಡುತ್ತಿದ್ದ. ಈ ಉದಕವನ್ನು ಉತ್ತರಾಭಿಮುಖವಾಗಿ ಹರಿಸಿ ಸಕಲ ಜನರಿಗೆ ಭುಕ್ತಿಮುಕ್ತಿ ನೀಡಬೇಕು ಎಂದು ನಂದೀಶ್ವರನನ್ನು ಪ್ರಾರ್ಥಿಸಿದ. ತಕ್ಷಣ ಸುವರ್ಣಾವತಿ ನದಿ ಹುಟ್ಟಿತು. ಅದರ ದಡದ ಮೇಲೆ ಬ್ರಹ್ಮ ‘ಎಳೆಯಂದೂರು’ ಪಟ್ಟಣ ಸ್ಥಾಪಿಸಿದ. ಇಲ್ಲಿ ಪದಿನಾಡಿನ ಸಿಂಗದೇವಭೂಪ ಗೌರೀಶ್ವರ ಗೇಗುಲ ನಿರ್ಮಿಸಿದರ ಬಗ್ಗೆ ಉಲ್ಲೇಖವಿದೆ. ಈ ಬಗ್ಗೆ ಎಪಿಗ್ರಾಫಿಯ ಕರ್ನಾಟಕ ಜಿಲ್ಲೆಯ ಸಾವಿರಾರು ಶಾಸನಗಳ ಬಗ್ಗೆ ಬೆಳಕು ಚೆಲ್ಲಿದೆ.
ತಾಲ್ಲೂಕಿನಲ್ಲಿ 211 ಶಾಸನಗಳು
ಅಗರ-74, ಮದ್ದೂರು-25, ಮಾಂಬಳ್ಳಿ-22, ಯರಿಯೂರು-14, ಗುಂಬಳ್ಳಿ-12, ಯಳಂದೂರು-10, ಯರಗಂಬಳ್ಳಿ-9, ಗಣಿಗನೂರು-8, ಹೊನ್ನೂರು-7 ಹಾಗೂ ಬಿಳಿಗಿರಿಬೆಟ್ಟ-3 ಸೇರಿದಂತೆ ವಿವಿಧ ಗ್ರಾಮಗಳ ಒಟ್ಟು 211 ತಾಮ್ರ ಹಾಗೂ ಶಿಲಾ ಶಾಸನಗಳನ್ನು ಗುರುತಿಸಲಾಗಿದೆ. ರಸ್ತೆ ಜಮೀನು ಒತ್ತುವರಿ ಸಮಸ್ಯೆಗಳಿಂದ ಕೆಲವು ನಾಶವಾದರೆ ಕೆಲವು ಉಳಿದಿವೆ.
‘ಚರಿತ್ರೆ ಬಿಂಬಿಸುವ ಶಿಲಾ ಮೂರ್ತಿಗಳು ಚರಂಡಿ ಕಾಲು ದಾರಿಗಳಲ್ಲಿ ಸೇರಿವೆ. ಕೆಲವು ಪೊದೆಗಳಲ್ಲಿ ಜಾನುವಾರು ಕಟ್ಟುವ ಬಳಕೆಗೆ ಸೀಮಿತವಾಗಿವೆ. ಹಾಗಾಗಿ ಕನ್ನಡ ನೆಲದ ಮೂಲ ಚಾರಿತ್ರಿಕ ಶಿಲ್ಪ-ಕಲ್ಪಗಳನ್ನು ಉಳಿಸಬೇಕು. ಕನ್ನಡ ಭಾಷೆಯ ವಿಕಾಸ ಮತ್ತು ಅಕ್ಷರಗಳ ವಿನ್ಯಾಸವನ್ನು ಗುರುತಿಸಿ ಮುಂದಿನ ಪೀಳಿಗೆಗೂ ಕನ್ನಡಿಗರ ಶೌರ್ಯ ಪರಂಪರೆಯನ್ನು ಸಾರಬೇಕು’ ಎನ್ನುತ್ತಾರೆ ಸಾಹಿತಿ ಗುಂಬಳ್ಳಿ ಬಸವರಾಜು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.