ಚಾಮರಾಜನಗರ: ಕನ್ನಡವು ಮನೆಯಂಗಳದ ಭಾಷೆ, ಮನದಂಗಳದ ಭಾಷೆ ಆಗದೇ ಹೋದರೆ ಅದು ರಾಜ್ಯ ಭಾಷೆ, ಸಾರ್ವಭೌಮ ಭಾಷೆಯಾಗಲು ಸಾಧ್ಯವಿಲ್ಲ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರು ಸೋಮವಾರ ಹೇಳಿದರು.
ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಮಕ್ಕಳು ಇಂಗ್ಲಿಷ್‌ನಲ್ಲಿ ಮಾತನಾಡಿದರೆ ತಂದೆ, ತಾಯಂದರಿಗೆ ಏನೋ ಆನಂದ. ನಮ್ಮಲ್ಲಿರುವ ‘ಮಮ್ಮಿ’ ‘ಡ್ಯಾಡಿ’ ಸಂಸ್ಕೃತಿ ಹೋಗಬೇಕು. ಪೋಷಕರು ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಕಲಿಸುವ ಅಗತ್ಯವಿದೆ’ ಎಂದು ಹೇಳಿದರು.
‘ಕಾನ್ವೆಂಟ್‌ನಲ್ಲಿ ಸೇರಿಸಿದರೆ ಮಾತ್ರ ಮಕ್ಕಳು ಪ್ರತಿಭಾವಂತರಾಗುತ್ತಾರೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಅದು ಹೋಗಬೇಕು. ಕನ್ನಡ ಶಾಲೆಯಲ್ಲಿ ಓದಿದರವರೂ ದೊಡ್ಡ ಹುದ್ದೆಗೆ ಏರಿದ್ದಾರೆ. ಭಾರತರತ್ನವೂ ಆಗಿದ್ದಾರೆ.ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು’ ಎಂದು ಅವರು ಸಲಹೆ ನೀಡಿದರು.
‘ರಾಜ್ಯವು ಆರು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಇಲ್ಲಿನ ಶಾಲೆಗಳಲ್ಲಿ ಹಾಗೂ ಆ ಭಾಗದಲ್ಲಿ ಕನ್ನಡದ ಅನಾಥ ಪ್ರಜ್ಞೆ ಕಾಡುತ್ತಿದೆ. ಈ ಆರು ಕಡೆಗಳಲ್ಲಿ ಕನ್ನಡದ ಮನಸ್ಸುಗಳನ್ನು ಕಟ್ಟಬೇಕಾಗಿದೆ. ಸಾಂಸ್ಕೃತಿಕ ಭದ್ರತೆಯನ್ನು ಕೊಡಬೇಕಾಗಿದೆ’ ಎಂದರು.
‘ಈ ಉದ್ದೇಶದಿಂದ ಗಡಿ ಭಾಗದ ಪ್ರಾರಂಭದಲ್ಲಿ ಸ್ವಾಗತ ಕಮಾನು ನಿರ್ಮಿಸುವ, ಗಡಿನಾಡಿನ ಸಾಧಕರ ಹೆಸರಿನಲ್ಲಿ ಪ್ರಶಸ್ತಿ ಕೊಡುವ, ಗಡಿ ಪ್ರದೇಶದಲ್ಲಿ ತಿಂಗಳಿಗೊಂದು ಕನ್ನಡ ಜಾಗೃತಿ ಕಾರ್ಯಕ್ರಮ ನಡೆಸುವ ಯೋಜನೆ ಇದೆ. ಮರಾಠಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಗಡಿ ಭಾಗದಲ್ಲಿರುವ ದಾರ್ಶನಿಕರ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ’ ಎಂದು ಸೋಮಶೇಖರ್ ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಮಾತನಾಡಿ, ‘ಕೋವಿಡ್ ಬಂದ ಮೇಲೆ ಎಲ್ಲ ಕಡೆ ನಕಾರಾತ್ಮಕ ವಾತಾವರಣ ನೋಡುತ್ತಿದ್ದೇವೆ. ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಸಮ್ಮೇಳನದಿಂದ ಜಿಲ್ಲೆಗೆ ಹಾಗೂ ಸಮಾಜಕ್ಕೆ ಸಕಾರಾತ್ಮಕ ಸಂದೇಶ ಹೋಗಬೇಕು. ಒಳ್ಳೆಯ ಕಾರ್ಯ ಆಗುತ್ತಿದೆ ಆಗುತ್ತಿದೆ ಎಂಬ ಸಂದೇಶ ಹೋದರೆ, ಈ ಸಮ್ಮೇಳನ ಸಾರ್ಥಕವಾಗುತ್ತದೆ’ ಎಂದರು.
‘ಇತ್ತೀಚೆಗೆ ನಡೆದ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು, ಚಾಮರಾಜನಗರಕ್ಕೆ ಪ್ರವೇಶಿಸುವಾಗ ಜಾನಪದ ಕಲೆಗಳ ತವರು ಎಂಬ ಫಲಕ ಅಳವಡಿಸಲು ಮನವಿ ಮಾಡಿದ್ದರು. ಶೀಘ್ರದಲ್ಲಿ ಆ ಫಲಕ ಹಾಕಲಾಗುವುದು’ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ವಿನಯ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಿ.ಚಾಮಶೆಟ್ಟಿ ಅವರು ಕನ್ನಡದ ಧ್ವಜವನ್ನು ಸಮ್ಮೇಳನದ ಸರ್ವಾಧ್ಯಕ್ಷ ಮಂಜು ಕೋಡಿಉಗನೆ ಅವರಿಗೆ ಹಸ್ತಾಂತರಿಸಿದರು.
ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು, ದಿ.ಮುದ್ದುಮಾದಪ್ಪ ದತ್ತಿ ಪ್ರಶಸ್ತಿಯನ್ನು ವೈದ್ಯ ಹಾಗೂ ಸಾಹಿತಿ ಡಾ.ಎನ್. ಮಧುಸೂದನ್ ಅವರಿಗೆ ಪ್ರದಾನ ಮಾಡಿದರು. ದತ್ತಿ ದಾನಿಗಳಾದ ಮಂಗಳಾ ಮುದ್ದುಮಾದಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ ಮೊಳಗಿದಾಗ ಕಲಾವಿದ ತಾರಕೇಶ್ ಅವರು ದಾರವನ್ನು ಬಣ್ಣದಲ್ಲಿ ಅದ್ದಿ ಭುವನೇಶ್ವರಿಯ ಚಿತ್ರ ಬಿಡಿಸಿದ್ದು (ಕಾವ್ಯ ಕುಂಚ ಕಲೆ) ಗಮನಸೆಳೆಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ, ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಉಪಾಧ್ಯಕ್ಷೆ ಸುಧಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬರಗಿ ಚೆನ್ನಪ್ಪ, ಕೆ.ಪಿ.ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್, ಬೊಮ್ಮಯ್ಯ ಇತರರು ಇದ್ದರು.
ಏಳು ಕೃತಿಗಳ ಬಿಡುಗಡೆ
ಕೊತ್ತಲವಾಡಿ ಶಿವಕುಮಾರ್ ಅವರ ಕಥಾ ಸಂಕಲನ ‘ಗತಿ’, ಎಂ.ಪಿ.ಸಂಪತ್ ಆರಾಧ್ಯ ಅವರ ಚುಟುಕು ಕವನ ಸಂಕಲನ ‘ಹೂದೋಟ’, ಡಾ.ಮಹೇಶ ಮಲೆಯೂರು ಅವರು ಬರೆದಿರುವ ಕವನ ಸಂಕಲನ ‘ನೆಪ್ಪು’ ಸಿ.ವಿ.ಬಾಹುಬಲಿ ಜಯರಾಜ್ ಅವರ ‘ಜಿಲ್ಲಾ ದರ್ಶನ’ ಪ್ರವಾಸಿ ಕೈಪಿಡಿ, ಅನುರಾಧ ಕೆ.ಸಿಂಗಾನಲ್ಲೂರು ಅವರ ‘ಸ್ಫೂರ್ತಿಯ ಸೆಲೆ’ ಕವನ ಸಂಕಲನ ಹಾಗೂ ಎ.ಶಿವರಾಜು ಅವರ ‘ಜಾನಪದ ವೈಭವ’ ಸಂಶೋಧನಾ ಲೇಖನಗಳನ್ನೊಳಗೊಂಡ ಕೃತಿಗಳನ್ನು ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ, ಕಸಾಪ ಸದಸ್ಯರಾದ ಎ.ಎಂ.ನಾಗಮಲ್ಲಪ್ಪ, ಸಾಹಿತಿ ಸೋಮಶೇಖರ ಬಿಸಲ್ವಾಡಿ ಅವರು ಬಿಡುಗಡೆ ಮಾಡಿದರು.
ವಿಶೇಷ ಸಾಧಕರು ಹಾಗೂ ಕೊರೊನಾ ಯೋಧರಿಗೆ ಸನ್ಮಾನ
ಉದ್ಘಾಟನಾ ಕಾರ್ಯಕ್ರಮದಲ್ಲಿ ಐದು ಮಂದಿ ವಿಶೇಷ ಸಾಧಕರಿಗೆ ಹಾಗೂ ಎಂಟು ಮಂದಿ ಕೊರೊನಾ ಯೋಧರನ್ನು ಸನ್ಮಾನಿಸಲಾಯಿತು.
ಕಸಾಪ ಕಾವ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ರ‍್ಯಾಂಕ್ ಗಳಿಸಿ ಶರಣ್ಯ, ಪಿಎಚ್‌ಡಿ ಪದವಿ ಪಡೆದ ದೃಷ್ಟಿ ದೋಷ ಹೊಂದಿದ ಸಾಧಕ ಡಾ.ಮನು, ರಾಜ್ಯೋತ್ಸವಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಆರ್.ರಾಮಕೃಷ್ಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಬಂಗಾರಾಚಾರ್, ಜಾನಪದ ಅಕಾಡೆಮಿ ಪ್ರಶಸ್ತಿಪುರಸ್ಕೃತ ಹೊನ್ನಮ್ಮ ಅವರನ್ನು ಸನ್ಮಾನಿಸಲಾಯಿತು. ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ ಬಿ.ಪುಟ್ಟಸ್ವಾಮಿ ಅವರು ಭಾಗವಹಿಸಿರಲಿಲ್ಲ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದ ವೈದ್ಯ ಡಾ.ಕೆ.ಬಿ.ಅಭಿಷೇಕ್, ಮೂಡ್ಲುಪುರ ನಂದೀಶ್, ಕಫೀಲ್ ಅಹಮದ್, ಎಎಸ್‌ಐ ಚಂದ್ರಪ್ಪ, ಹೆಡ್ ಕಾನ್‌ಸ್ಟೆಬಲ್ ಎಂ.ಕುಮಾರ್ ಹೊಸೂರು, ವೈದ್ಯ ಡಾ.ಅಂಕಪ್ಪ, ನರ್ಸ್ ಸುಮಾ, ಪೌರ ಕಾರ್ಮಿಕ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.