ಗುಂಡ್ಲುಪೇಟೆ: ಅಂತರ ರಾಜ್ಯದ ನಡುವೆಯೇ ಇನ್ನೂ ಮುಕ್ತ ಸಂಚಾರ ಆರಂಭವಾಗದೇ ಇರುವುದರಿಂದ ಗಡಿನಾಡು ಮತ್ತು ಹೊರ ರಾಜ್ಯದ ಕನ್ನಡಿಗರಿಗೆ ತೊಂದರೆಯಾಗುತ್ತಿದೆ.
ತಮಿಳುನಾಡಿನಲ್ಲಿ ನೀಲಗಿರಿ ಜಿಲ್ಲೆಯಲ್ಲಿ ಶೇ 50ರಷ್ಟು ಕನ್ನಡಿಗರಿದ್ದು, ತಾಲ್ಲೂಕಿನ ಜೊತೆಗೆ ಸಂಬಂಧ ಬೆಳೆಸಿಕೊಂಡಿದ್ದಾರೆ.
ಕೋವಿಡ್–19 ಹಾವಳಿ ಆರಂಭವಾದ ನಂತರ, ಅಂತರ ರಾಜ್ಯಗಳ ನಡುವೆಯೇ ಸುಗಮ ಸಂಚಾರ ಇನ್ನೂ ಸರಿಯಾಗಿ ಆರಂಭವಾಗಿಲ್ಲ. ಬಸ್‌ಗಳು ಸಂಚರಿಸುತ್ತಿಲ್ಲ. ಖಾಸಗಿ ವಾಹನಗಳು ಓಡಾಡುತ್ತಿವೆ. ತಾಲ್ಲೂಕಿನ ಮೂಲಕ ತಮಿಳುನಾಡು ಪ್ರವೇಶಿಸಬೇಕಾದರೆ ಅಲ್ಲಿನ ಸರ್ಕಾರದ ಪಾಸ್ ಬೇಕು. ಪಾಸ್ ಇಲ್ಲದಿದ್ದರೆ ಚೆಕ್‌ಪೋಸ್ಟ್‌ನಲ್ಲಿ ಬಿಡಲಾಗುತ್ತಿಲ್ಲ. ಆದರೆ, ನೀಲಗಿರಿಯಿಂದ ಕರ್ನಾಟಕಕ್ಕೆ ಪಾಸ್ ಇಲ್ಲದೆಯೇ ಬರಬಹುದು.
‘ನೀಲಗಿರಿ ಜಿಲ್ಲೆಗೆ ಹೋಗಲು ಪಾಸ್ ಬೇಕು. ಆದರೆ, ಅಗತ್ಯ ಸಮಯದಲ್ಲಿ ಪಾಸ್ ಸಿಗುತ್ತಿಲ್ಲ, ಸಾವಿಗೆ ಹೋಗಬೇಕಾದರೆ ಮರಣ ಪ್ರಮಾಣ ಪತ್ರವನ್ನು ದಾಖಲೆಯಾಗಿ ನೀಡಬೇಕು. ಹೀಗೆ ಎಲ್ಲದಕ್ಕೂ ಅಗತ್ಯ ದಾಖಲೆಗಳನ್ನು ಒದಗಿಸಬೇಕಾದ್ದರಿಂದ ಸಾವು ನೋವುಗಳಿಗೆ ಸ್ಪಂದಿಸಲು ಆಗುತ್ತಿಲ್ಲ’ ಎಂದು ಬೆಂಗಳೂರಿನ ಸೌಭಾಗ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮ್ಮ ತಾಯಿ ತಂದೆ ವಯಸ್ಸಾಗಿದೆ. ಅವರು ನೀಲಗಿರಿಯಲ್ಲಿ ವಾಸ ಮಾಡುತ್ತಾರೆ. ಈಗ ತಾಯಿ ಆರೋಗ್ಯ ತೀವ್ರ ಹದಗೆಟ್ಟಿದೆ. ಸಾವು ಬದುಕಿನ ನಡುವೆ ಇದ್ದಾರೆ. ಇಂತಹ ಸಮಯದಲ್ಲಿ ಅವರ ಬಳಿ ಹೋಗಲು ಆಗುತ್ತಿಲ್ಲ. ತಮಿಳುನಾಡಿನ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿ ಬಿಡುತ್ತಿಲ್ಲ, ಆನ್‌ಲೈನ್‌ನಲ್ಲಿ ಪಾಸ್‌ಗೆ ಅರ್ಜಿ ಸಲ್ಲಿಸಿದರೆ ತಿರಸ್ಕೃತವಾಗುತ್ತಿದೆ’ ಎಂದು ಅವರು ತಿಳಿಸಿದರು.
ನಮ್ಮ ಕುಟುಂಬದವರು ನೀಲಗಿರಿ ಜಿಲ್ಲೆಯ ಎಸ್ಟೇಟ್‌ಗಳಲ್ಲಿ ಇದ್ದಾರೆ. ಶುಕ್ರವಾರ ಮಧ್ಯರಾತ್ರಿ ನಮ್ಮ ಚಿಕ್ಕಮ್ಮ ತೀರಿ ಹೋಗಿದ್ದಾರೆ, ವಿಷಯ ತಿಳಿದ ತಕ್ಷಣವೇ ಬೆಂಗಳೂರಿನಿಂದ ಹೊರಟು ಬಂದಿದ್ದೇವೆ, ನಮ್ಮನ್ನು ಬಿಡುತ್ತಿಲ್ಲ, ಪಾಸ್ ಅರ್ಜಿ ಸಲ್ಲಿಸಬೇಕಾದರೆ ಮರಣ ಪ್ರಮಾಣ ಪತ್ರ ಕೇಳುತ್ತಿದೆ. ಅಲ್ಲಿ ನೆಟ್ವರ್ಕ್ ಇಲ್ಲ, ಬಸ್ ವ್ಯವಸ್ಥೆ ಇಲ್ಲ’ ಎಂದು ಬೆಂಗಳೂರಿನಿಂದ ಬಂದು, ಕೆಕ್ಕನ ಹಳ್ಳ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಪ್ರಕಾಶ್ ಅವರು ಹೇಳಿದರು.
‘ತಂದೆ ತಾಯಿ ತಮಿಳುನಾಡಿನಲ್ಲಿ ಇದ್ದಾರೆ. ನಾವು ಇಲ್ಲಿದ್ದೇವೆ. ಅವರ ಕಷ್ಟಗಳಿಗೆ ಸ್ಪಂದಿಸಲು ಆಗುತ್ತಿಲ್ಲ. ಅನ್‌ಲಾಕ್ ಆರಂಭವಾದ ನಂತರವೂ ಈ ರೀತಿ ನಿಯಮ ಹೇರಿದರೆ ಹೇಗೆ, ಅಧಿಕಾರಿಗಳು ಜನರ ಕಷ್ಟಗಳನ್ನೂ ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.