ADVERTISEMENT

ಚಾಮರಾಜನಗರ | ಅನ್ನಭಾಗ್ಯ ಯೋಜನೆ: ಕುಟುಂಬದ ಮುಖ್ಯಸ್ಥನ ನಂತರದ ವ್ಯಕ್ತಿಗೆ ಹಣ ಜಮೆ

ರಾಜ್ಯದಲ್ಲಿ 9,22,183, ಜಿಲ್ಲೆಯಲ್ಲಿ 12,011 ಫಲಾನುಭವಿಗಳು ಇನ್ನೂ ಪ್ರಯೋಜನ ವಂಚಿತ

ಸೂರ್ಯನಾರಾಯಣ ವಿ.
Published 8 ಡಿಸೆಂಬರ್ 2023, 5:38 IST
Last Updated 8 ಡಿಸೆಂಬರ್ 2023, 5:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ‘ಅನ್ನ ಭಾಗ್ಯ’ ಯೋಜನೆಯಡಿ ಹೆಚ್ಚುವರಿ ಐದು ಕೆಜಿಯ ಹಣವು ತಾಂತ್ರಿಕ ಕಾರಣಗಳಿಂದ ಅರ್ಹ ಫಲಾನುಭವಿಗಳ ಖಾತೆಗೆ ಜಮೆಯಾಗದಿರುವ ಸಮಸ್ಯೆಗೆ ರಾಜ್ಯ ಸರ್ಕಾರ ಪರಿಹಾರ ಕಂಡುಕೊಂಡಿದೆ. ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥರ ಖಾತೆಗೆ ಬದಲಾಗಿ, ಅವರ ನಂತರ ಬರುವ ವ್ಯಕ್ತಿಯ ಖಾತೆಗೆ ಜಮೆ ಮಾಡಲು ನಿರ್ಧರಿಸಿದೆ.   

ಈ ಪ್ರಸ್ತಾವಕ್ಕೆ ಇತ್ತೀಚೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ನವೆಂಬರ್‌ 29ರಂದು ಆದೇಶ ಹೊರಡಿಸಿದೆ. 

ಅಕ್ಟೋಬರ್‌ ತಿಂಗಳ ಅಂಕಿ ಅಂಶಗಳ ಪ್ರಕಾರ, ರಾಜ್ಯದಾದ್ಯಂತ ಇನ್ನೂ 9,22,183 ಪಡಿತರ ಚೀಟಿದಾರ ಕುಟುಂಬಗಳ ಮುಖ್ಯಸ್ಥರ ಖಾತೆಗೆ ‘ಅನ್ನಭಾಗ್ಯ’ದ ಹಣ ಜಮೆಯಾಗುತ್ತಿಲ್ಲ. ಜಿಲ್ಲೆಯಲ್ಲಿ 12,011 ಸಾವಿರ ಫಲಾನುಭವಿಗಳು ವಿವಿಧ ಕಾರಣಗಳಿಂದ ಯೋಜನೆಯ ಪ್ರಯೋಜನದಿಂದ ವಂಚಿತರಾಗಿದ್ದಾರೆ.       

ADVERTISEMENT

ಜುಲೈ ತಿಂಗಳಿಂದ ಈ ಯೋಜನೆ ಜಾರಿಗೆ ಬಂದಿದ್ದು, ಪ್ರತಿ ಕೆಜಿ ಅಕ್ಕಿಗೆ ₹34ರಂತೆ ಐದು ಕೆಜಿ ಅಕ್ಕಿ ಮೌಲ್ಯವನ್ನು ₹170 (ಒಬ್ಬ ಸದಸ್ಯನಿಗೆ) ಸರ್ಕಾರ ನೇರವಾಗಿ ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥನ ಖಾತೆಗೆ ಜಮೆ ಮಾಡುತ್ತಿದೆ. 

ಜಿಲ್ಲೆಯಲ್ಲಿ 2,65,716 ಪಡಿತರ ಚೀಟಿಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ನವೆಂಬರ್‌ ತಿಂಗಳಲ್ಲಿ 2,53,705 ಪಡಿತರ ಚೀಟಿದಾರ ಕುಟುಂಬಗಳ ಮುಖ್ಯಸ್ಥರ ಖಾತೆಗೆ ₹12.69 ಕೋಟಿ ಜಮೆ ಆಗಿದೆ. 12,011 ಫಲಾನುಭವಿಗಳ ಖಾತೆಗೆ ಹಣೆ ಬಂದಿಲ್ಲ. 

ಜಮೆಯಾಗದಿರುವುದು ಏಕೆ?: ಕುಟುಂಬದ ಮುಖ್ಯಸ್ಥರನ್ನು ಹೊಂದಿಲ್ಲದ ಪಡಿತರ ಚೀಟಿಗಳು, ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿಗಳು, ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆಯಾಗದಿರುವುದು, ಗುರುತು ಪ್ರಮಾಣೀಕರಣವಾಗಿಲ್ಲದ, ಎನ್‌ಪಿಸಿಐ (ರಾಷ್ಟ್ರೀಯ ಭಾರತೀಯ ಪಾವತಿ ನಿಗಮ) ವೈಫಲ್ಯದಿಂದಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗುತ್ತಿಲ್ಲ. 

‘ಕುಟುಂಬದ ಮುಖ್ಯಸ್ಥರು ವಿವಿಧ ಕಾರಣಗಳಿಂದ ಕುಟುಂಬದಿಂದ ದೂರ ಉಳಿದಿದ್ದರೆ, ಆ ಕುಟುಂಬದ ಉಳಿದ ಅರ್ಹ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗುತ್ತಾರೆ. ಇದನ್ನು ತಪ್ಪಿಸಲು ಆಯಾ ಕುಟುಂಬದ ಮುಖ್ಯಸ್ಥರ ನಂತರ ಬರುವ ಅಥವಾ ಸ್ಥಾನಿಕವಾಗಿ ಅತ್ಯಂತ ಹಿರಿಯ ವ್ಯಕ್ತಿಯ ಖಾತೆಗೆ ಹಣ ಜಮೆ ಮಾಡಬಹುದು. ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ಮತ್ತು ಇತರ ಅರ್ಹತೆ ಆಧರಿಸಿ ಅತ್ಯಂತ ಸೂಕ್ತ ವ್ಯಕ್ತಿಯನ್ನು ಗುರುತಿಸಿ, ರಾಜ್ಯದಲ್ಲಿ ಅರ್ಹರಿರುವ ಎಲ್ಲ ಫಲಾನುಭವಿಗಳಿಗೆ ಹಣ ಸಂದಾಯ ಮಾಡಲು ಕ್ರಮ ವಹಿಸಬೇಕು’ ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ. 

‘ಆದೇಶದಂತೆ ಅನುಷ್ಠಾನ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಯೋಗಾನಂದ ‘ನಮ್ಮ ಜಿಲ್ಲೆಯಲ್ಲಿ ಇನ್ನೂ 11 ಸಾವಿರ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈಗ ಹೊಸ ಆದೇಶ ಮಾಡಿರುವುದರಿಂದ ಅದರ ಅನ್ವಯ ಎಲ್ಲರಿಗೂ ಯೋಜನೆಯ ಪ್ರಯೋಜನ ತಲುಪಿಸಲು ಕ್ರಮವಹಿಸಲಾಗುವುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.