ಚಾಮರಾಜನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಪ್ರೊ ಮಲೆಯೂರು ಗುರುಸ್ವಾಮಿ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇಬ್ಬರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್, ‘ಇಬ್ಬರೂ ಜಿಲ್ಲೆಯ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರದ ದಿಗ್ಗಜರಾಗಿದ್ದರು. ಇಬ್ಬರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ’ ಎಂದರು.
‘ಮಲೆಯೂರು ಗುರುಸ್ವಾಮಿ ಅವರು ಜಿಲ್ಲಾ ಪರಿಷತ್ತಿನ ಮೊದಲ ಅಧ್ಯಕ್ಷರಾಗಿ ಸಾಹಿತ್ಯದ ಕೆಲಸಗಳಿಗೆ ಭದ್ರ ಬುನಾದಿ ಹಾಕಿದ್ದರು’ ಎಂದು ಬಣ್ಣಿಸಿದರು.
ಸಾಹಿತಿ ಮಹಾದೇವ ಶಂಕನಪುರ ಮಾತನಾಡಿ, ‘ಗುರುಸ್ವಾಮಿಯವರು ನಾಡಿನ ಶ್ರೇಷ್ಠ ವಿದ್ವಾಂಸರಾದರೂ ಎಲ್ಲರೊಂದಿಗೆ ಬೆರೆಯುತ್ತಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಸಾಹಿತ್ಯ ಪರಂಪರೆಗೆ ಹೊಸಬರನ್ನು ತರುವ ಮೂಲಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಹಾಗೆಯೇ ರಾಜಕೀಯ ಕ್ಷೇತ್ರದಲ್ಲಿ ಧೃವನಾರಾಯಣ ಅವರು ಯುವಕರಿಗೆ ಆದರ್ಶ ಪ್ರಾಯರಾಗಿದ್ದರು’ ಎಂದು ಹೇಳಿದರು.
ಸಾಹಿತಿ ಸೋಮಶೇಖರ ಬಿಸಲ್ವಾಡಿ ಹಾಗೂ ಎ.ಎಂ.ನಾಗಮಲ್ಲಪ್ಪ ಅವರು ಅಗಲಿದ ಇಬ್ಬರಿಗೆ ನುಡಿ ನಮನ ಸಲ್ಲಿಸಿದರು.
ಕನ್ನಡ ಹೋರಾಟಗಾರರಾದ ಶಾ.ಮುರಳಿ, ಚಾ.ರಂ.ಶ್ರೀನಿವಾಸಗೌಡ, ಚಾ.ಹ.ರಾಮು, ಕೊತ್ತಲವಾಡಿ ಶಿವಕುಮಾರ್, ದೇಪಾಪುರ ಚಂದ್ರು, ನಾಗಭೂಷಣ, ಬಸವಪುರ ಸುರೇಶ್, ಸುರೇಶ್ ಎನ್.ಋಗ್ವೇದಿ, ಪಳನಿಸ್ವಾಮಿ, ಮಹಾಲಿಂಗಗಿರ್ಗಿ, ಕಲೆನಟರಾಜು, ಕಿಶೋರ್, ಮಂಗಳಾ ವೇಣುಗೋಪಾಲ್, ಲಕ್ಷ್ಮಿನರಸಿಂಹ ಇಬ್ಬರ ಬಗ್ಗೆ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.