ಗುಂಡ್ಲುಪೇಟೆ: ಕೇರಳದಲ್ಲಿ ಸುರಿದ ಮಹಾಮಳೆ ಅಲ್ಲಿನ ಜನರ ಮೇಲೆ ಮಾತ್ರ ಪರಿಣಾಮ ಬೀರಿಲ್ಲ, ತಾಲ್ಲೂಕಿನ ವ್ಯಾಪಾರ, ಹೋಟೆಲ್ ಉದ್ಯಮ ಮತ್ತು ಪ್ರವಾಸೋದ್ಯಮದ ಮೇಲೂ ವ್ಯತಿರಿಕ್ತ ಪ್ರಭಾವ ಬೀರಿದೆ.
ನೆರೆಯಿಂದ ತತ್ತರಿಸಿರುವ ಕೇರಳದ ಮಂದಿ, ಹೊಸ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ. ಹೀಗಾಗಿ ಅಲ್ಲಿಂದ ತಾಲ್ಲೂಕಿಗೆ ಬರುವ ಪ್ರವಾಸಿಗರ ಮತ್ತು ವ್ಯಾಪಾರಿಗಳ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಇದರಿಂದಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆಯುವ ಸಫಾರಿ ಕಳೆಗುಂದಿದೆ; ರೈತರು, ದಲ್ಲಾಳಿಗಳ ವಹಿವಾಟಿಗೂ ಧಕ್ಕೆಯಾಗಿದೆ.
ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ ದಿನಾಚರಣೆ, ಬಕ್ರಿದ್ ಮತ್ತು ಓಣಂ ಹಬ್ಬಗಳು ಇರುವುದರಿಂದ ರಜಾದಿನಗಳಲ್ಲಿ ಸಫಾರಿಗಾಗಿ ಕೇರಳದಿಂದ ನೂರಾರು ಮಂದಿ ಬಂಡೀಪುರಕ್ಕೆ ಬರುತ್ತಿದ್ದರು. ಈ ತಿಂಗಳಲ್ಲೇ ಹೆಚ್ಚಿನ ಆದಾಯ ಬರುತ್ತಿತ್ತು. ವಾರಾಂತ್ಯದಲ್ಲಿ ಸಫಾರಿಗೆ ಟಿಕಟ್ ಸಿಗುತ್ತಿರಲಿಲ್ಲ. ಆದರೆ, ಈ ಬಾರಿ ಸಫಾರಿಗೆ ಸ್ವಲ್ಪ ಪ್ರಮಾಣದ ಹೊಡೆತ ಬಿದ್ದಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದರು.
ಮಳೆಗಾಲದಲ್ಲಿ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮತ್ತು ದೇವಸ್ಥಾನ ಸಂಪೂರ್ಣ ಹಿಮದಿಂದ ಆವೃತವಾಗಿ ನೋಡುಗರನ್ನು ಸೆಳೆಯುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಪ್ರವಾಸಿಗರು ಬರುತ್ತಾರೆ.
‘ಕಳೆದ ವರ್ಷ ಆಗಸ್ಟ್ ತಿಂಗಳಿನ ವಾರಾಂತ್ಯದಲ್ಲಿ ಹೆಚ್ಚಿನ ಬಸ್‌ಗಳನ್ನು ಬಿಡಬೇಕಾಯಿತು. ಈ ಬಾರಿ ಪ್ರವಾಸಿಗರ ಕೊರತೆಯಿಂದ ಹೆಚ್ಚಿನ ಬಸ್‌ಗಳು ಬೇಕಾಗಲಿಲ್ಲ’ ಎಂದು ಸಾರಿಗೆ ಅಧಿಕಾರಿ ತಿಳಿಸಿದರು.
ತರಕಾರಿ ಬೆಳೆಗಾರರಿಗೆ ಭಾರಿ ಹೊಡೆತ: ಕೇರಳಿಗರು ಗುಂಡ್ಲುಪೇಟೆ ತಾಲ್ಲೂಕಿನೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದಾರೆ. ಕೇರಳಕ್ಕೆತರಕಾರಿ, ಹೂ, ಇನ್ನಿತರೆ ವಸ್ತುಗಳು ಬೇಕು ಎಂದರೆಗುಂಡ್ಲುಪೇಟೆ ಮೂಲಕವೇ ಹೋಗಬೇಕು. ಕೇರಳಿಗರು ತರಕಾರಿಯನ್ನು ಗುಂಡ್ಲುಪೇಟೆ ತಾಲ್ಲೂಕಿನ ರೈತರು ಮತ್ತು ದಲ್ಲಾಳಿಗಳಿಂದಲೇ ಖರೀದಿಸುತ್ತಾರೆ. ಇದರಿಂದ ಇಲ್ಲಿನ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು.
‘ಟೊಮೆಟೊ, ಸಣ್ಣ ಈರುಳ್ಳಿ, ಬೀನ್ಸ್, ಬೀಟ್‌ರೂಟ್, ಕೋಸು, ಇನ್ನಿತರತರಕಾರಿಗಳು, ಹೂಗಳು ಕೇರಳಕ್ಕೆ ಟನ್‌ಗಟ್ಟಲೆ ಹೋಗುತ್ತಿದ್ದವು. ಆಗಸ್ಟ್‌ನಲ್ಲಿ ಕೇರಳದಿಂದ ಹೆಚ್ಚು ಪ್ರವಾಸಿಗರು ಬರುತ್ತಿದ್ದರಿಂದ ತರಕಾರಿಗಳ ಬೆಲೆ ಕೊಂಚ ಜಾಸ್ತಿಯಾಗುತ್ತಿತ್ತು. ರೈತರಿಗೂ ಲಾಭ ದೊರೆಯುತ್ತಿತ್ತು. ಈ ಸಲ ಕೇರಳಕ್ಕೆ ಹೆಚ್ಚಾಗಿ ಹೋಗದ ಪರಿಣಾಮ ಲಾಭ ಕಡಿಮೆಯಾಗಿದೆ’ ಎಂದು ದಲ್ಲಾಳಿ ತಿಮ್ಮರಾಜು ಅವರು ತಿಳಿಸಿದರು.
ಹೋಟೆಲ್ ಮತ್ತು ವಸತಿ ಗೃಹಗಳು ಖಾಲಿ
ಪ್ರವಾಸಿಗರಿಲ್ಲದೆ ತಾಲ್ಲೂಕಿನ ಹೋಟೆಲ್ ಮತ್ತು ವಸತಿ ಗೃಹಗಳೂ ಖಾಲಿ ಹೊಡೆಯುತ್ತಿವೆ.
ಜೂನ್ –ಜುಲೈ ತಿಂಗಳಲ್ಲಿ ಶಾಲೆಗಳು ಆರಂಭವಾಗುವುದರಿಂದ ಹೆಚ್ಚಿನ ಪ್ರವಾಸಿಗರು ಬರದೆ, ವ್ಯಾಪಾರ ನಡೆಯುವುದಿಲ್ಲ, ಬದಲಾಗಿ ಆಗಸ್ಟ್ ತಿಂಗಳ ರಜಾ ದಿನಗಳಲ್ಲಿ ಕೇರಳಿಗರು ಕುಟುಂಬ ಸಮೇತರಾಗಿ ವಾರಗಟ್ಟಲೆ ಪ್ರವಾಸಕ್ಕೆ ಬರುತ್ತಾರೆ. ಈ ಅವಧಿಯಲ್ಲಿ ತಾಲ್ಲೂಕಿನ ಹೋಟೆಲ್ ಮತ್ತು ವಸತಿ ಗೃಹಗಳಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತದೆ.
‘ನಮ್ಮ ತಾಲ್ಲೂಕು ಗಡಿಭಾಗದಲ್ಲಿರುವುದರಿಂದ ಹೆಚ್ಚಾಗಿ ಕೇರಳ ಪ್ರವಾಸಿಗರನ್ನೇ ಅವಲಂಬಿಸಿದ್ದೇವೆ. ಅಲ್ಲಿನ ಮಳೆಯ ಹೊಡೆತಕ್ಕೆ ಇಲ್ಲಿನ ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ನಷ್ಟವಾಗಿದೆ’ ಎಂದು ಹೋಟೆಲ್ ಮತ್ತು ವಸತಿ ಗೃಹದ ಮಾಲೀಕ ನಟರಾಜು ಅವರು ಬೇಸರ ವ್ಯಕ್ತಪಡಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.