ADVERTISEMENT

ಯಾವುದೇ ಷರತ್ತುಗಳಿಲ್ಲದೇ ಕಾಂಗ್ರೆಸ್‌ ಸೇರುತ್ತಿದ್ದೇನೆ: ನಂಜುಂಡಸ್ವಾಮಿ

ಬಿಜೆಪಿಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆ, ಮುಜುಗರದ ಘಟನೆಗಳಿಂದ ನೋವು; ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 16:59 IST
Last Updated 6 ಮಾರ್ಚ್ 2023, 16:59 IST
ಜಿ.ಎನ್‌.ನಂಜುಂಡಸ್ವಾಮಿ
ಜಿ.ಎನ್‌.ನಂಜುಂಡಸ್ವಾಮಿ   

ಚಾಮರಾಜನಗರ: ‘ಯಾವುದೇ ಷರತ್ತುಗಳನ್ನು ಹಾಕದೇ ನನ್ನ ಮಾತೃಪಕ್ಷ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿದ್ದೇನೆ’ ಎಂದು ಕೊಳ್ಳೇಗಾಲದ ಮಾಜಿ ಶಾಸಕ, ಬಿಜೆಪಿ ಎಸ್‌.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ‌ರಾಗಿದ್ದ ಜಿ.ಎನ್.ನಂಜುಂಡಸ್ವಾಮಿ ಸೋಮವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘33 ವರ್ಷಗಳಿಂದ ಸ್ವಾಭಿಮಾನಿಯಾಗಿ, ಪ್ರಾಮಾಣಿಕವಾಗಿ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಐದಾರು ತಿಂಗಳುಗಳಿಂದ ಬಿಜೆಪಿಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಮುಜುಗರದ ಘಟನೆಗಳಾಗಿವೆ. ಮಾನಸಿಕವಾಗಿ ನೋವಾಗಿದೆ. ಎಲ್ಲವನ್ನೂ ಬಿಜೆಪಿಯ ಜಿಲ್ಲಾ ಘಟಕದ ಮುಖಂಡರು ಹಾಗೂ ರಾಜ್ಯದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಆದರೆ, ಸರಿಪಡಿಸುವ ಕೆಲಸ ಮಾಡಲಿಲ್ಲ. ಹೀಗಾಗಿ ಪಕ್ಷ ತೊರೆಯುವ ತೀರ್ಮಾನಕ್ಕೆ ಬಂದಿದ್ದೇನೆ. ಭಾನುವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ‌ಕುಮಾರ್ ಕಟೀಲ್ ಅವರಿಗೆ ಸಲ್ಲಿಸಿದ್ದೇನೆ’ ಎಂದರು.

‘ಮಾನಸಿಕವಾಗಿ ಒತ್ತಡ ಇರಬಾರದು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಆದರೆ, ಬಿಜೆಪಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮುಜುಗರ ಆಯಿತು. ಮೊನ್ನೆ ನಡೆದ ವಿಜಯ ಸಂಕಲ್ಪ ಯಾತ್ರೆಗೂ ನನಗೆ ಸಮರ್ಪಕ ಮಾಹಿತಿ ನೀಡಿಲ್ಲ. ಮುನ್ನಾ ದಿನ ಜಿಲ್ಲಾ ಘಟಕದ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್‌ ಕರೆ ಮಾಡಿ ಹೇಳಿದರು. ಆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ಮಾತುಗಳಲ್ಲಿ ಅವರ ಭಾವನೆ ಎಲ್ಲರಿಗೂ ಅರ್ಥವಾಗಿದೆ. ‘ಹೋಗುವವರು ಹೋಗಬಹುದು, ಇರುವವರು ಇರಬಹುದು’ ಎಂಬ ಅರ್ಥದಲ್ಲಿ ಕೆಲವು ಮುಖಂಡರು ಮಾತನಾಡಿದ್ದಾರೆ. ಅಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಇರಲು ನನ್ನಿಂದ ಸಾಧ್ಯವಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ’ ಎಂದರು.

ADVERTISEMENT

ಮಾತೃ ಪಕ್ಷಕ್ಕೆ ಹೋಗುವೆ: 'ಮುಂದಿನ ನಡೆಯ ಬಗ್ಗೆ ಬೆಂಬಲಿಗರು, ಹಿತೈಷಿಗಳೊಂದಿಗೆ ಸಭೆ ನಡೆಸಿದ್ದೇನೆ. ಅವರ ಅಭಿಪ್ರಾಯಗಳನ್ನು ಪಡೆದಿದ್ದೇನೆ. ನನ್ನ ಮಾತೃ ಪಕ್ಷ ಕಾಂಗ್ರೆಸ್‌ಗೆ ಸೇರಲು ನಿರ್ಧರಿಸಿದ್ದೇನೆ. ನನ್ನ ಗುರುಗಳು ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರೊಂದಿಗೆ ಸಮಾಲೋಚನೆ ಮಾಡಿದ್ದೇನೆ. ಬುಧವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶಿವಕುಮಾರ್, ಸಿದ್ದರಾಮಯ್ಯ, ಧ್ರುವನಾರಾಯಣ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆಗೊಳ್ಳಲಿದ್ದೇನೆ' ಎಂದರು.

‘ಕಾಂಗ್ರೆಸ್‌ ಸೇರ್ಪಡೆಗೆ ನಾನು ಯಾವುದೇ ಷರತ್ತುಗಳನ್ನು ಹಾಕಿಲ್ಲ. ಬೇಷರತ್ತಾಗಿ ಕಾಂಗ್ರೆಸ್‌ಗೆ ಸೇರುತ್ತಿದ್ದೇನೆ. ನನ್ನೊಂದಿಗೆ ದೊಡ್ಡಬಳ್ಳಾಪುರದ ಬಿಜೆಪಿ ಮುಖಂಡ ನರಸಿಂಹಮೂರ್ತಿ, ವಿಜಯಪುರದ ಮುಖಂಡ ಮನೋಹರ್‌ ಐನಾಪುರ ಅವರು ಕಾಂಗ್ರೆಸ್‌ ಸೇರಲಿದ್ದಾರೆ. ಮೂರ್ನಾಲ್ಕು ತಿಂಗಳ ಹಿಂದೆಯೇ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಕಾಂಗ್ರೆಸ್‌ ಮುಖಂಡರು ಆಹ್ವಾನ ನೀಡಿದ್ದರು. ಆದರೆ, ನಾನು ನಿರ್ಧಾರ ಕೈಗೊಂಡಿರಲಿಲ್ಲ' ಎಂದರು.

ಬಿಜೆಪಿ ಕಟ್ಟಿ ಬೆಳೆಸಿದ್ದೇನೆ: 1990ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. 1999ರಲ್ಲಿ ಕಾಂಗ್ರೆಸ್‌ ಸೇರಿ ಶಾಸಕನಾಗಿದ್ದೆ. 2008ರಲ್ಲಿ ಯಡಿಯೂರಪ್ಪ ಅವರು ಆಹ್ವಾನ ನೀಡಿದ್ದರಿಂದ ಮತ್ತೆ ಬಂದು ಜಿಲ್ಲೆಯಾದ್ಯಂತ ಬಿಜೆಪಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಈ ಸಂದರ್ಭದಲ್ಲಿ ನಾನು ಯಾರನ್ನೂ ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ, ನಾನು ಸಮಸ್ಯೆಗಳನ್ನು ಗಮನಕ್ಕೆ ತಂದರೂ ಮುಖಂಡರು ಅದನ್ನು ಸರಿ ಮಾಡುವುದಕ್ಕೆ ಯತ್ನಿಸಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸ್ಥಳೀಯ ಕಾಂಗ್ರೆಸ್‌ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಒಟ್ಟಿಗೆ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟೋಣ ಎಂದು ಅವರು ಹೇಳಿದ್ದಾರೆ. ನಾನು ಕಾಂಗ್ರೆಸ್‌ ಟಿಕೆಟ್‌ ಬಯಸುತ್ತಿಲ್ಲ’ ಎಂದು ನಂಜುಂಡಸ್ವಾಮಿ ಸ್ಪಷ್ಟಪಡಿಸಿದರು.

ಬೆಂಬಲಿಗರಾದ ಮಾದೇಶ್‌, ಮಹೇಶ್‌, ಕೃಷ್ಣ, ರೇವಣ್ಣ, ಜಯಣ್ಣ ಮತ್ತು ಪುಟ್ಟಣ್ಣ ಇದ್ದರು.

‘ಶಾಸಕ ಎನ್.ಮಹೇಶ್‌ ನನ್ನ ಸ್ಪರ್ಧಿಯಲ್ಲ’

ಬಿಜೆಪಿ ತೊರೆಯಲು ಶಾಸಕ ಎನ್‌.ಮಹೇಶ್‌ ಕಾರಣವೇ ಎಂದು ಕೇಳಿದ್ದಕ್ಕೆ, ‘ಮಹೇಶ್‌ ಅವರು ನನಗೆ ಎಂದಿಗೂ ಸ್ಪರ್ಧಿಯಲ್ಲ. ಅವರು ಇತ್ತೀಚೆಗೆ ರಾಜಕೀಯಕ್ಕೆ ಬಂದವರು. ನಾನು 33 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನ ಅಣ್ಣ ಎಐಸಿಸಿ ಸದಸ್ಯರಾಗಿದ್ದರು. ನಮ್ಮ ಕುಟುಂಬ ಮೊದಲಿನಿಂದಲೂ ರಾಜಕೀಯದಲ್ಲಿತ್ತು’ ಎಂದರು.

ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದಾಗ, ‘ನಾನು ಅವರ ಪರವಾಗಿ ಕೆಲಸಮಾಡಿಲ್ಲ ಎಂದು ಬಿಂಬಿಸುವ ಪ್ರಯತ್ನವನ್ನು ಮಹೇಶ್‌ ಮಾಡಿದ್ದರು. ಈ ಬಗ್ಗೆ ನಾನು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದೆ’ ಎಂದರು.

ಇದೇ ತಿಂಗಳು 18ರಿಂದ 22ರ ಒಳಗಾಗಿ ಕೊಳ್ಳೇಗಾಲದಲ್ಲಿ ಬೃಹತ್‌ ಸಮಾವೇಶ ಮಾಡಲಿದ್ದೇವೆ. ಅದರಲ್ಲಿ ಕಾಂಗ್ರೆಸ್‌ನ ರಾಜ್ಯ, ರಾಷ್ಟ್ರೀಯ ಮುಖಂಡರು ಭಾಗವಹಿಸಲಿದ್ದಾರೆ
-ಜಿ.ಎನ್‌.ನಂಜುಂಡಸ್ವಾಮಿ, ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.