ADVERTISEMENT

ಕೊಳ್ಳೇಗಾಲ: ಬಡಾವಣೆಗಳಿಗೆ ಬೇಕಿದೆ ರಸ್ತೆ

ಅಭಿವೃದ್ಧಿ ಕಾಡದ ಮಾರ್ಗಗಳು, ಮಳೆಗಾಲದಲ್ಲಿ ಓಡಾಟ ದುಸ್ತರ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 5:43 IST
Last Updated 8 ಜೂನ್ 2024, 5:43 IST
ಕೊಳ್ಳೇಗಾಲದ ಮಹದೇಶ್ವರ ಕಾಲೇಜು ಸಮೀಪದ ರಸ್ತೆ ಮಳೆಗಾಲದಲ್ಲಿ ನದಿಯಂತೆ ಭಾಸವಾಗುತ್ತದೆ
ಕೊಳ್ಳೇಗಾಲದ ಮಹದೇಶ್ವರ ಕಾಲೇಜು ಸಮೀಪದ ರಸ್ತೆ ಮಳೆಗಾಲದಲ್ಲಿ ನದಿಯಂತೆ ಭಾಸವಾಗುತ್ತದೆ   

ಕೊಳ್ಳೇಗಾಲ: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಕೊಳ್ಳೇಗಾಲದಲ್ಲಿರುವ 31 ವಾರ್ಡ್‌ಗಳಲ್ಲಿರುವ ಬಹುತೇಕ ಬಡಾವಣೆಗಳ ವ್ಯಾಪ್ತಿಯಲ್ಲಿ ರಸ್ತೆಗಳು ಹದಗೆಟ್ಟಿದ್ದು, ಜನರು ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಸಂಚಾರ ದುಸ್ತರವಾಗಿದೆ.  

ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿದೆ. ಬಡಾವಣೆಗಳು ಹೆಚ್ಚಾಗುತ್ತಿವೆ. ಉತ್ತಮ ರಸ್ತೆ, ಚರಂಡಿಗಳಿರುವ ಬಡಾವಣೆಗಳು ಬೆರಳೆಣಿಕೆಯಷ್ಟಿವೆ. ಉಳಿದ ಕಡೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಕೆಲವು ವಾರ್ಡ್‌ಗಳನ್ನು ನೋಡಿದರೆ, ಇದು ನಗರ ಪ್ರದೇಶವೋ ಅಥವಾ ಗ್ರಾಮೀಣ ಭಾಗವೋ ಎಂಬ ಅನುಮಾನವೂ ಬರುತ್ತದೆ. 

ಸಂಚಾರಕ್ಕೆ ಸರ್ಕಸ್‌: ಬೇಸಿಗೆ ಸಮಯದಲ್ಲಿ ಕಚ್ಚಾ ರಸ್ತೆಯಲ್ಲಿ ರಸ್ತೆಯಲ್ಲಿ ಓಡಾಡಬಹುದು. ಆದರೆ, ಮಳೆಗಾಲದಲ್ಲಿ ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ.  

ADVERTISEMENT

ಕೆಲವು ಬಡಾವಣೆಗಳಲ್ಲಿ ಸಿಮೆಂಟ್ ರಸ್ತೆ ಇದ್ದರೂ ಇಲ್ಲದಂತೆ ಇದೆ. ಇರುವ ರಸ್ತೆಗಳು ಅರ್ಧ ಅಡಿಗಿಂತಲೂ ಹೆಚ್ಚು ಹಳ್ಳಕೊಳ್ಳಗಳಿಂದ ಕೂಡಿದೆ. ಡಾಂಬರು ರಸ್ತೆಗಳೂ ಹದಗೆಟ್ಟಿವೆ.

ಡಾ.ರಾಜಕುಮಾರ್ ರಸ್ತೆ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ ನಗರದ ಪ್ರಮುಖವಾದ ಎರಡು ರಸ್ತೆಗಳು. ಈ ರಸ್ತೆಗಳಲ್ಲೇ ಹಳ್ಳ ಕೊಳ್ಳಗಳು ಸಾಕಷ್ಟಿವೆ.

‘ನಗರದ ಜನತೆ ಹಾಗೂ ಬೇರೆ ತಾಲೂಕುಗಳಿಂದ ವ್ಯಾಪಾರಕ್ಕೆ ಬರುವ ಜನರು ಈ ಹಳ್ಳಗಳ ರಸ್ತೆಯಲ್ಲಿ ಓಡಾಡಬೇಕಾಗಿದೆ. ನಗರ ಸಭೆಯು ಈ ಎರಡು ರಸ್ತೆಗಳಿಂದ ಉತ್ತಮ ಆದಾಯ ಗಳಿಸುತ್ತಿದೆ. ಆದರೆ ರಸ್ತೆ ನಿರ್ವಹಣೆಗೆ ಗಮನ ಹರಿಸುತ್ತಿಲ್ಲ’ ಎಂಬುದು ಸಾರ್ವಜನಿಕರ ದೂರು. 

ಮಳೆಗಾಲದಲ್ಲಿ ರಸ್ತೆಯೇ ನದಿ: ಮಳೆ ಬಂದ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿ ಬಡಾವಣೆ, ಆದರ್ಶ ನಗರ, ಅಮ್ಮನ್‌ ಕಾಲೊನಿ ರಸ್ತೆ, ದೇವಾಂಗಪೇಟೆ ರಸ್ತೆ, ನಂಜಯ್ಯನಕಟ್ಟೆ ಸೇರಿದಂತೆ ಅನೇಕ ರಸ್ತೆಗಳಲ್ಲಿ ನದಿಯಾಗಿ ಬದಲಾಗುತ್ತವೆ!

ಉಕ್ಕುವ ಚರಂಡಿ ನೀರು ರಸ್ತೆಯಲ್ಲಿ ಹರಿಯುವುದು ಒಂದೆಡೆಯಾದರೆ, ಹಳ್ಳ ಕೊಳ್ಳಗಳಲ್ಲಿ ನಿಲ್ಲುವ ನೀರು ಕೂಡ ರಸ್ತೆಯನ್ನು ನದಿಯಂತೆ ಮಾಡುತ್ತದೆ. 

ಕೆಲವು ಬಡಾವಣೆಗಳಿಗೆ ಮಣ್ಣಿನ ರಸ್ತೆಗಳೇ ಸಂಪರ್ಕ ಕಲ್ಪಿಸುತ್ತವೆ. ಮಳೆ ಬಂದರೆ ನೀರು ನಿಂತು, ಕೆಸರುಮಯವಾಗಿ ಓಡಾಡಲು ಸಾಧ್ಯವಾಗದಂತೆ ಆಗುತ್ತದೆ. 

ಶಿವಕುಮಾರ ಬಡಾವಣೆಯಲ್ಲಿ ಮಣ್ಣಿನ ರಸ್ತೆಗಳಿದ್ದು, ಮಳೆ ಬಂದರೆ ಬಡಾವಣೆಯ ನಿವಾಸಿಗಳು ಮನೆಗೆ ತಲುಪಲು ದೊಡ್ಡ ಸಾಹಸವೇ ಮಾಡಬೇಕು.

ಈ ಬಗ್ಗೆ ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದ ನಗರಸಭಾ ಆಯುಕ್ತ ರಮೇಶ್‌, ‘ಇದೀಗ ತಾನೇ ನೀತಿ ಸಂಹಿತೆ ಮುಕ್ತಾಯವಾಗಿದೆ ಶಾಸಕರ ಗಮನಕ್ಕೆ ತಂದು ನಗರ ಸಭೆಯವರ ಜೊತೆ ಕೈಜೋಡಿಸಿ ಬಡಾವಣೆಗಳಿಗೆ ರಸ್ತೆಗಳ ಸೌಲಭ್ಯ ಕಲ್ಪಿಸಲಾಗುವುದು. ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ರಸ್ತೆಯಲ್ಲಿ ಓಡಾಡಲು ಅನುಕೂಲ ಕಲ್ಪಿಸಲಾಗುವುದು’ ಎಂದರು. 

ಮಳೆ ಬಂದಾಗ ಕೊಳ್ಳೇಗಾಲದ ಅಮ್ಮನ್‌ ಕಾಲೊನಿ ರಸ್ತೆಯ ದುಃಸ್ಥಿತಿ
ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಬಂದು ಬಡಾವಣೆಗಳ ಸಮಸ್ಯೆ ಕೇಳುತ್ತಾರೆ ಉಳಿದ ಸಮಯದಲ್ಲಿ ಇತ್ತ ತಲೆ ಹಾಕುವುದಿಲ್ಲ
ಫಣೀಶ್ ಕೊಳ್ಳೇಗಾಲ ನಿವಾಸಿ

‘ಶಾಸಕರು ಭೇಟಿ ನೀಡಲಿ’ ‘ನಿರಂತರ ಮಳೆಯಾಗುತ್ತಿದೆ. ಹೀಗಾಗಿ ರಸ್ತೆಗಳಲ್ಲಿ ನೀರು ನಿಂತಿದೆ. ಬೈಕ್ ಸವಾರರು ನೀರು ನಿಂತ ಹಳ್ಳಕ್ಕೆ ಬೈಕ್‌ ಬಿಟ್ಟು 20ಕ್ಕೂ ಮಂದಿ ಗಾಯಗೊಂಡಿದ್ದಾರೆ. ಒಂದೇ ಕುಟುಂಬದ ನಾಲ್ವರು ಮಂದಿ ಬಿದ್ದು ತಲೆಗೆ ಪೆಟ್ಟಾಗಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಮಳೆ ಬಂದರೆ ರಸ್ತೆಯೇ ಹಳ್ಳವೇ ಎಂಬುದು ಗೊತ್ತಾಗುತ್ತಿಲ್ಲ. ಶಾಸಕರು ಕೊಳ್ಳೇಗಾಲದ 31ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ರಸ್ತೆಗಳನ್ನು ನಿರ್ಮಾಣ ಮಾಡಲು ಕ್ರಮ ವಹಿಸಬೇಕು’ ಎಂದು ಶಿವಕುಮಾರ ಸ್ವಾಮಿ ಬಡಾವಣೆಯ ಜಗದೀಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.