ಚಾಮರಾಜನಗರ:ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಅವರಿಗೆ ಸೋಮವಾರ ಕೋವಿಡ್ ಇರುವುದು ದೃಢಪಟ್ಟಿದೆ.
ಮೈಸೂರಿನ ನಿವಾಸದಲ್ಲಿ ಅವರು ಪ್ರತ್ಯೇಕ ವಾಸದಲ್ಲಿದ್ದಾರೆ.
’ನಾನು ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು‘ ಎಂದು ಅವರು ಮನವಿ ಮಾಡಿದ್ದಾರೆ.
ಈ ಮಧ್ಯೆ,ಜಿಲ್ಲೆಯಲ್ಲಿ ಸೋಮವಾರ 1,681 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, 111 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಪೈಕಿ ಜಿಲ್ಲೆಯ 105 ಮಂದಿ ಇದ್ದರೆ, ಹೊರ ಜಿಲ್ಲೆಗೆ ಸೇರಿದ ಆರು ಮಂದಿ ಇದ್ದಾರೆ.
ಒಂದೇ ದಿನ 78 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 763ಕ್ಕೆ ಏರಿಕೆ ಕಂಡಿದೆ. ಈ ಪೈಕಿ 340 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿದ್ದಾರೆ.
ಸೋಂಕು ದೃಢಪಟ್ಟ 105 ಮಂದಿಯಲ್ಲಿ ಎಂಟು ಮಂದಿ ಮಕ್ಕಳಿದ್ದಾರೆ. 28 ಪ್ರಕರಣಗಳು ಬಿಟ್ಟು, ಉಳಿದೆಲ್ಲವೂ ಗ್ರಾಮೀಣ ಭಾಗಗಳಲ್ಲಿ ವರದಿಯಾಗಿವೆ.
ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 35 ಮಂದಿಗೆ ಸೋಂಕು ತಗುಲಿದೆ. ಚಾಮರಾಜನಗರದಲ್ಲಿ 28, ಹನೂರಿನಲ್ಲಿ 27, ಗುಂಡ್ಲುಪೇಟೆಯಲ್ಲಿ 10, ಯಳಂದೂರು ತಾಲ್ಲೂಕಿನಲ್ಲಿ ನಾಲ್ವರು ಸೋಂಕಿತರಿದ್ದಾರೆ. ಒಂದು ಪ್ರಕರಣ ಹೊರ ಜಿಲ್ಲೆಯಲ್ಲಿ ದೃಢಪಟ್ಟಿದೆ.
ಒಂದೇ ದಿನ ದಾಖಲೆಯ 78 ಮಂದಿ ಗುಣಮುಖರಾಗಿದ್ದು, ಚಾಮರಾಜನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 27 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಹನೂರಿನಲ್ಲಿ 19, ಯಳಂದೂರಿನಲ್ಲಿ 17,ಕೊಳ್ಳೇಗಾಲದಲ್ಲಿ 9, ಗುಂಡ್ಲುಪೇಟೆಯಲ್ಲಿ ಆರು ಮಂದಿ ಸೋಂಕು ಮುಕ್ತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.