ADVERTISEMENT

ಕೊಳ್ಳೇಗಾಲ: ಶಿಥಿಲಾವಸ್ಥೆ ತಲುಪಿದ ಉಪನೋಂದಣಿ ಕಚೇರಿ

156 ವರ್ಷಗಳಷ್ಟು ಹಳೆಯ ಕಟ್ಟಡ, ಮೂಲ ಸೌಕರ್ಯಗಳಿಲ್ಲದೇ ಜನರ ಪಡಿಪಾಟಲು

ಅವಿನ್ ಪ್ರಕಾಶ್
Published 29 ಸೆಪ್ಟೆಂಬರ್ 2021, 19:30 IST
Last Updated 29 ಸೆಪ್ಟೆಂಬರ್ 2021, 19:30 IST
ಪಾಳು ಬಿದ್ದ ಕಟ್ಟಡದಂತೆ ಕಾಣುವ ಕೊಳ್ಳೇಗಾಲದ ಉಪ ನೋಂದಣಿ ಕಚೇರಿ
ಪಾಳು ಬಿದ್ದ ಕಟ್ಟಡದಂತೆ ಕಾಣುವ ಕೊಳ್ಳೇಗಾಲದ ಉಪ ನೋಂದಣಿ ಕಚೇರಿ   

ಕೊಳ್ಳೇಗಾಲ: ನಗರದ ಉಪ ನೋಂದಣಿ ಕಚೇರಿ (ಸಬ್ ರಿಜಿಸ್ಟ್ರಾರ್) ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ನಿತ್ಯವೂ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡಬೇಕಿದೆ.

156 ವರ್ಷಗಳಷ್ಟು ಹಳೆಯದಾದ ಕಟ್ಟಡವು ದೂರದಿಂದ ನೋಡುವಾಗ ಪಾಳು ಬಿದ್ದಿರುವ ರೀತಿ ಕಾಣಿಸುತ್ತದೆ. ಹತ್ತಿರ ಹೋದರಷ್ಟೇ, ಇಲ್ಲೊಂದು ಸರ್ಕಾರಿ ಕಚೇರಿ ಕಾರ್ಯನಿರ್ವಹಿಸುತ್ತದೆ ಎಂಬುದು ಗೊತ್ತಾಗುತ್ತದೆ. ಕಟ್ಟಡ ಶಿಥಿಲವಾಗಿರುವುದು ಒಂದೆಡೆಯಾದರೆ, ನೋಂದಣಿಗಾಗಿ ಬರುವ ಸಾರ್ವಜನಿಕರಿಗೆ ಅಗತ್ಯವಾದ ಮೂಲಸೌಕರ್ಯಗಳೂ ಇಲ್ಲಿಲ್ಲ.

ನೋಂದಣಿ ಶುಲ್ಕದ ಮೂಲಕ ಪ್ರತಿ ದಿನವೂ ಲಕ್ಷಾಂತರ ರೂಪಾಯಿ ಬರುತ್ತಿದ್ದರೂ; ಉಪ ನೋಂದಣಿ ಕಚೇರಿಯಲ್ಲಿ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಲು ಇಲಾಖೆಯಾಗಲಿ, ಅಧಿಕಾರಿಗಳಾಗಲಿ ಕ್ರಮ ವಹಿಸಿಲ್ಲ ಎಂಬುದು ಸಾರ್ವಜನಿಕರ ದೂರು.

ADVERTISEMENT

ನಗರದ ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯ ರಸ್ತೆಯಲ್ಲಿ ಉಪ ನೋಂದಣಿ ಕಚೇರಿ ಇದೆ. ಬ್ರಿಟಿಷರು 1865ರಲ್ಲಿ ನಿರ್ಮಿಸಿರುವ ಕಟ್ಟಡ ಇದು.

‘ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರ ಆಸ್ತಿ ಮತ್ತು ಸರ್ಕಾರದ ಆಸ್ತಿ ಪತ್ರಗಳು ಇಲ್ಲಿ ಸುಭದ್ರವಾಗಿವೆ. ಆದರೆ ಕಟ್ಟಡವೇ ಅಭದ್ರವಾಗಿದ್ದು, ಕಟ್ಟಡದೊಳಕ್ಕೆ ಪ್ರವೇಶಿಸಲು ಭಯವಾಗುತ್ತದೆ. ಜೀವ ಭಯದಲ್ಲೇ ಇಲ್ಲಿಗೆ ಬರಬೇಕಿದೆ. ಸಾರ್ವಜನಿಕರು ಮಾತ್ರವಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಕಟ್ಟಡ ಸದೃಢವಾಗಿಲ್ಲ ಎಂದು ಎಂಜಿನಿಯರ್‌ಗಳು ಈಗಾಗಲೇ ಇಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಭೀಮನಗರದ ನಿವಾಸಿ ರಾಜಶೇಖರ್ ದೂರಿದರು.

ಶೌಚಾಲಯ, ಕುಡಿಯುವ ನೀರು ಇಲ್ಲ: ನಿತ್ಯವೂ ನೂರಾರು ಜನರು ನೋಂದಣಿಗಾಗಿ ಕಚೇರಿಗೆ ಬರುತ್ತಾರೆ. ಆದರೆ, ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯದ ಸೌಲಭ್ಯವೂ ಇಲ್ಲ. ಸಾರ್ವಜನಿಕರು ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸಬೇಕಿದೆ. ನೋಂದಣಿ ಕೆಲಸಕ್ಕೆ ಬಂದ ಮಹಿಳೆಯರ ಕಷ್ಟ ಹೇಳತೀರದು.

ಕಚೇರಿಯಲ್ಲಿ ಆಸನದ ವ್ಯವಸ್ಥೆಯೂ ಸರಿಯಾಗಿ ಇಲ್ಲದಿರುವುದರಿಂದ ನೋಂದಣಿಗಾಗಿ ಗಂಟೆ ಗಟ್ಟಲೆ ಕಾಯುವ ಸಾರ್ವಜನಿಕರು ನೆಲದಲ್ಲೇ ಕುಳಿತುಕೊಳ್ಳುತ್ತಾರೆ. ಕಚೇರಿ ಸುತ್ತಲೂ ಕಳೆ ಗಿಡಗಳು ಬೆಳೆದಿದ್ದು, ಪಾಳು ಕಟ್ಟಡದಂತೆ ಭಾಸವಾಗುತ್ತದೆ.

‘ಕಚೇರಿಯ ನಿರ್ವಹಣೆ ಸರಿಯಾಗಿಲ್ಲ. ಮೂಲೆಯಲ್ಲಿ ಹಳೆಯ ಕುರ್ಚಿಗಳು, ಕಡತಗಳು ಬಿದ್ದಿವೆ. ಸಾರ್ವಜನಿಕರಿಗೆ ಯಾವ ಅನುಕೂಲವೂ ಇಲ್ಲಿಲ್ಲ. ಉನ್ನತಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ವಹಿಸಬೇಕು’ ಎಂದು ನೋಂದಣಿ ಕಾರ್ಯಕ್ಕೆ ಬಂದಿದ್ದ ರಶ್ಮಿ ಒತ್ತಾಯಿಸಿದರು.

ನಡು ರಸ್ತೆಯಲ್ಲೇ ವಾಹನ ನಿಲುಗಡೆ

ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ, ಜನರ ಓಡಾಟ ಹೆಚ್ಚು. ಪಕ್ಕದಲ್ಲೇ ನಗರಸಭೆ, ಉರ್ದು ಪ್ರೌಢಶಾಲೆ, ಎಸ್.ವಿ.ಕೆ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಎದುರುಗಡೆ ಪೊಲೀಸ್ ಠಾಣೆ ಮತ್ತು ನ್ಯಾಯಾಧೀಶರ ನಿವಾಸಗಳಿವೆ.

ಹಾಗಿದ್ದರೂ, ನೋಂದಣಿಗೆ ಬರುವವರು ನಡುರಸ್ತೆಯಲ್ಲೇ ಕಾರು, ಬೈಕ್ ಸೇರಿದಂತೆ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿರುತ್ತವೆ.

***

ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಮಹಿಳೆಯರ ಪಾಡು ಹೇಳಲು ಸಾಧ್ಯವಿಲ್ಲ. ಅಧಿಕಾರಿ, ಜನಪ್ರತಿನಿಧಿಗಳ ಕುಟುಂಬದವರಿಗೆ ಈ ಅನುಭವವಾಗಬೇಕು

- ದಿವ್ಯಾ, ಸಾರ್ವಜನಿಕರು

***

ಕಟ್ಟಡ ಹಳೆಯದಾಗಿರುವುದು ನಿಜ. ಪರ್ಯಾಯವಾಗಿ ಹೊಸ ಕಟ್ಟಡ ಹುಡುಕುತ್ತಿದ್ದೇವೆ. ಸಿಕ್ಕಿದ ತಕ್ಷಣ ಸ್ಥಳಾಂತರಗೊಳಿಸಲಾಗುವುದು

- ರೇಖಾ, ಉಪನೋಂದಣಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.