ಹನೂರು: ಮಹತ್ವಾಕಾಂಕ್ಷೆಯ ಕೊಳ್ಳೇಗಾಲ-ಹನೂರು ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.
₹ 108 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 23 ಕಿ.ಮೀ. ರಸ್ತೆ ಕಾಮಗಾರಿ ಮುಕ್ತಾಯಗೊಳಿಸಲು 18 ತಿಂಗಳ (ಒಂದೂವರೆ ವರ್ಷ) ಗಡುವು ನೀಡಲಾಗಿತ್ತು. ಆದರೆ, ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದಿದೆ. ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದ್ದು, ತಕ್ಷಣಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದರಿಂದಾಗಿ ಇರುವ ರಸ್ತೆಗಳು ಗುಂಡಿಮಯ, ದೂಳುಮಯವಾಗಿ ವಾಹನ ಸವಾರರು ಪಡಿಪಾಟಲು ಪಡುವಂತಾಗಿದೆ.
ವರ್ಷದ ಹಿಂದೆ ಮಧುವನಹಳ್ಳಿ, ದೊಡ್ಡಿಂದುವಾಡಿ, ಸಿಂಗನಲ್ಲೂರು ಗ್ರಾಮಗಳ ವ್ಯಾಪ್ತಿಯಲ್ಲಿನ ರಸ್ತೆ ಬದಿಯಲ್ಲಿರುವ ಜಮೀನು ಖರೀದಿಸಿ, ಜಮೀನಿನ ಮಾಲೀಕರಿಗೆ ಪರಿಹಾರ ನೀಡಲಾಗಿದೆ. ರಸ್ತೆ ವಿಸ್ತರಣೆಗಾಗಿ ಬದಿಯಲ್ಲಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಗಳ ಹೊರ ಭಾಗದಲ್ಲಿ ಕಾಮಗಾರಿ ನಡೆದಿರುವುದು ಬಿಟ್ಟರೆ ಇತರೆ ಕಡೆ ಕಾಮಗಾರಿ ವಿಳಂಬವಾಗಿದೆ. ಮಧುವನಹಳ್ಳಿಯಿಂದ ಚಿಕ್ಕಿಂದುವಾಡಿವರೆಗೆ ರಸ್ತೆಯಾಗಿದೆ. ಉಳಿದ ಹಲವು ಕಡೆಗಳಲ್ಲಿ ಕಾಮಗಾರಿ ಇನ್ನೂ ಆರಂಭಿಕ ಹಂತದಲ್ಲಿದೆಯಷ್ಟೆ.
ರಸ್ತೆ ದೂಳುಮಯ: ಕೊಳ್ಳೇಗಾಲ–ಹನೂರು ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆ ಇದಾಗಿದ್ದು, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಹೌದು. ಪ್ರತಿ ದಿನ ನೂರಾರು ವಾಹನಗಳು ಇದರಲ್ಲಿ ಸಂಚರಿಸುತ್ತವೆ.
ರಸ್ತೆ ಕಾಮಗಾರಿಗಾಗಿ ಮಣ್ಣು ಅಗೆಯಲಾಗುತ್ತಿದೆ. ಅಲ್ಲಲ್ಲಿ ಬೇರೆ ಕಡೆಯಿಂದ ಮಣ್ಣು ತಂದು ಹಾಕಿ ಸಮತಟ್ಟು ಮಾಡಲಾಗುತ್ತಿದೆ. ಆದರೆ, ಮಣ್ಣಿನ ರಸ್ತೆಗೆ ಸಮರ್ಪಕವಾಗಿ ನೀರು ಹಾಕದಿರುವುದರಿಂದ ವಾಹನಗಳು ಓಡಾಡಿದರೆ ರಸ್ತೆಯೆಲ್ಲಾ ಸಂಪೂರ್ಣ ದೂಳುಮಯವಾಗುತ್ತಿದೆ. ದೊಡ್ಡ ವಾಹನಗಳ ಹಿಂದೆ ಬರುವ ದ್ವಿಚಕ್ರ ವಾಹನ ಸವಾರರು ದೂಳಿನಿಂದಾಗಿ ಸರಿಯಾಗಿ ದಾರಿ ಕಾಣದೇ ಬಿದ್ದು ಗಾಯಗೊಂಡಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಕಾಮಗೆರೆ, ಹನೂರಿನ ಜನರು ಇದರಿಂದಾಗಿ ಹೆಚ್ಚು ತೊಂದೆರೆಗೆ ಒಳಗಾಗಿದ್ದಾರೆ.
ಸೂಚನಾ ಫಲಕ ಇಲ್ಲ: ಒಂದು ಬದಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದರೆ, ಮತ್ತೊಂದು ಬದಿ ವಾಹನಗಳು ಓಡಾಡಲು ಅನುವು ಮಾಡಲಾಗಿದೆ. ಆದರೆ ಕಾಮಗಾರಿ ಪ್ರಗತಿಯಿರುವ ಕಡೆ ಸೂಚನಾ ಫಲಕ ಅಳವಡಿಸದಿರುವುದರಿಂದ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ.
‘ಪಟ್ಟಣದ ಪೊಲೀಸ್ ವಸತಿ ಗೃಹದ ಮುಂಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸಿಲ್ಲ. ಇದು ಸಾಕಷ್ಟು ಅಪಾಯಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ವಾಹನ ಸವಾರರು.
‘ಕೋವಿಡ್, ಭೂಸ್ವಾಧೀನದಿಂದ ವಿಳಂಬ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಯೋಜನೆಯ ನಿರ್ವಹಣಾಧಿಕಾರಿ ಮುತ್ತಣ್ಣ, ‘ಕಾಮಗಾರಿಯನ್ನು 18 ತಿಂಗಳೊಳಗೆ ಮುಗಿಸುವ ಯೋಜನೆಯಿತ್ತು. ಕೋವಿಡ್ ಹಾಗೂ ಇನ್ನಿತರೆ ಕಾರಣಗಳಿಂದಾಗಿ ವಿಳಂಬವಾಗಿದೆ. ರಸ್ತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಹಾಕುವುದರ ಜತೆಗೆ ಕಾಮಗಾರಿ ನಡೆಯುವ ಸುತ್ತಲೂ ಟೇಪ್ ಅಳವಡಿಸಲಾಗಿದೆ. ಆದರೆ, ವಾಹನ ಸವಾರರು ಕಿತ್ತು ಹಾಕಿರುವುದರಿಂದ ಸಮಸ್ಯೆಯಾಗಿದೆ. ಮಣ್ಣಿನ ರಸ್ತೆಗೆ ಈಗಾಗಲೇ ದಿನಕ್ಕೆ ಎರಡು ಬಾರಿ ನೀರು ಹಾಕಲಾಗುತ್ತಿದೆ. ಆದರೂ ದೂಳು ಬರುತ್ತಿರುವುದರಿಂದ ಇನ್ನೆರಡು ಬಾರಿ ನೀರು ಹಾಕಲು ಸೂಚಿಸಲಾಗುವುದು’ ಎಂದರು.
ಶಾಸಕ ಆರ್.ನರೇಂದ್ರ ಪ್ರತಿಕ್ರಿಯಿಸಿ ‘ಟೆಂಡರ್‌ದಾರರು 18 ತಿಂಗಳೊಳಗೆ ಕಾಮಗಾರಿ ಮುಗಿಸುವುದಾಗಿ ಹೇಳಿದ್ದರು. ಆದರೆ ಗ್ರಾಮಗಳ ಮುಖ್ಯರಸ್ತೆ ಬದಿಯಲ್ಲಿ ಮನೆಗಳು ಹಾಗೂ ಜಮೀನು ಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದಕ್ಕೆ ಸ್ವಲ್ಪ ಸಮಯ ಕೇಳಿದ್ದಾರೆ. ಸ್ವಾಧೀನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಶೀಘ್ರಗತಿಯಲ್ಲಿ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
ತಾಲ್ಲೂಕು, ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡ ಜಮೀನುಗಳ ಮಾಲೀಕರಿಗೆ ಶೀಘ್ರ ಪರಿಹಾರ ನೀಡಿದರೆ, ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಲಿದೆ.
ಆರ್.ನರೇಂದ್ರ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.