ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನದುದ್ದಕ್ಕೂ ಕಿರುಕುಳ ಅಪಮಾನ ಮಾಡಿದ ಕಾಂಗ್ರೆಸ್‌ಗೆ ನಾನು ಹೋಗಬೇಕಾ? ವಿಶ್ವ ಮಟ್ಟದಲ್ಲಿ ಅಂಬೇಡ್ಕರ್ ಅವರಿಗೆ ಗೌರವ ತಂದು ಕೊಟ್ಟ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹೋಗಿದ್ದು ಸರಿಯಲ್ಲವೇ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಅವರು ಮಂಗಳವಾರ ಕಾರ್ಯಕರ್ತರನ್ನು ಪ್ರಶ್ನಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಎನ್.ಮಹೇಶ್ ಅವರ ಅಭಿಮಾನಿಗಳ ಮತ್ತು ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ‘ಎರಡು ವರ್ಷಗಳ ಕಾಲ ನಾನು ಯಾವುದೇ ಪಕ್ಷಕ್ಕೆ ಸೇರದೆ ತಟಸ್ಥವಾಗಿದ್ದೆ. 20 ವರ್ಷಗಳ ಕಾಲ ಬಿಎಸ್‌ಪಿಗಾಗಿ ನನ್ನ ಸರ್ವಸ್ವವನ್ನೂ ಧಾರೆ ಎರೆದು ಪಕ್ಷವನ್ನು ಸಂಘಟನೆ ಮಾಡಿದ್ದೆ. ಈ ಪಕ್ಷದಲ್ಲಿ ಕೆಲವರು ಪಿತೂರಿ ಮಾಡಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಏಕಾಏಕಿ ಪಕ್ಷದಿಂದಲೇ ಉಚ್ಚಾಟನೆ ಮಾಡಿದ್ದರು’ ಎಂದರು.
ಕುಮಾರಸ್ವಾಮಿ ಸರ್ಕಾರದ ಪತನವಾದ ಐದೇ ನಿಮಿಷದಲ್ಲಿ ನನ್ನನ್ನು ಬಿಎಸ್‌ಪಿಯಿಂದ ಉಚ್ಚಾಟನೆ ಮಾಡಲಾಯಿತು. ತಕ್ಷಣದಲ್ಲಿಯೇ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಮಾಯಾವತಿ ಅವರು ನನ್ನನ್ನು ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳುತ್ತಾರೆ ಎಂಬ ಆಶಾಭಾವನೆಯಿಂದ ಕಾದು ಕುಳಿತೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ನನ್ನನ್ನು ಬಹಳ ಗೌರವಯುತವಾಗಿ ನೋಡಿಕೊಂಡಿತು. ಯಡಿಯೂರಪ್ಪ ಅವರು, ತಮ್ಮ ಜೊತೆಗೆ ಪ್ರಮಾಣ ವಚನ ಸ್ವೀಕರಿಸುವಂತೆ ಆಹ್ವಾನಿಸಿದ್ದರು. ಆದರೂ ಹೋಗಿರಲಿಲ್ಲ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪರಿಶಿಷ್ಟ ಜಾತಿ ಹಾಗೂ ವರ್ಗದವರ ಕಲ್ಯಾಣಕ್ಕಾಗಿ ಕೈಗೊಂಡಿರುವ ಯೋಜನೆಗಳು ಹಾಗೂ ಅಂಬೇಡ್ಕರ್ ಅವರ ಪಂಚತೀರ್ಥ ಅಭಿವೃದ್ಧಿಪಡಿಸಿದ ಕಾರಣಕ್ಕಾಗಿ ಬಿಜೆಪಿ ಸೇರ್ಪಡೆಯಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಮಟ್ಟದ ನಾಯಕರು: ಶಾಸಕ ಸಿ.ಎಸ್. ನಿರಂಜನ ಕುಮಾರ್ ಮಾತನಾಡಿ, ‘ಎನ್.ಮಹೇಶ್ ಅವರು ಪಕ್ಷದ ರಾಜ್ಯ ಮಟ್ಟದಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಅವರ ದೊಡ್ಡ ಅಭಿಮಾನಿ ಬಳಗ, ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ನಾಲ್ಕು ವಿಧಾನ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬೇಕಾಗಿದೆ. ‘ಇವ ನಮ್ಮವ, ಇವ ನಮ್ಮವ’ ಎಂದು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ದೇಶ, ರಾಜ್ಯದಲ್ಲಿ ಬಿಜೆಪಿ ಮಾಡುತ್ತಿದೆ. ಮಹೇಶ್ ಅವರಂತಹ ನಾಯಕ, ವಾಗ್ಮಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಅನೆ ಬಲ ತಂದಿದೆ’ ಎಂದರು.
ಬಿಜೆಪಿ ವಿಭಾಗ ಪ್ರಭಾರಿ, ವಿಧಾನ ಪರಿಷತ್ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿಮೈ.ವಿ.ರವಿಶಂಕರ್ ಪ್ರಸ್ತಾವಿಕವಾಗಿ ಮಾತನಾಡಿ, ‘ಎನ್.ಮಹೇಶ್ ಬೆಂಬಲಿಗರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿರುವುದರಿಂದ ಪಕ್ಷದ ಸಂಘಟನೆ ಬಲಿಷ್ಠವಾಗಲಿದೆ’ ಎಂದರು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ‘ಎನ್.ಮಹೇಶ್ ಅವರು ಅಂಬೇಡ್ಕರ್ ಅವರ ಧ್ಯೇಯವನ್ನಿಟ್ಟುಕೊಂಡು ಹೋರಾಟ ಮಾಡಿಕೊಂಡು ಬಂದವರು. ಇಡೀ ರಾಜ್ಯದಲ್ಲಿ ಸಂಘಟನೆ ಮಾಡುವ ಶಕ್ತಿ ಅವರಲ್ಲಿದೆ’ ಎಂದರು.
ಭಾರತೀಯ ಪರಿವರ್ತನಾ ಸಂಘದ ಜಿಲ್ಲಾಧ್ಯಕ್ಷ ಆಲೂರುಮಲ್ಲ, ಸುರೇಶ್, ಮಾಂಬಳ್ಳಿ ಮಹದೇವು, ರಾಮಕೃಷ್ಣ, ಸಿದ್ದಪ್ಪಾಜಿ ಸೇರಿದಂತೆ ಹಲವು ಅಭಿಮಾನಿಗಳು, ಬೆಂಬಲಿಗರು ಈ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ನಾಯಕಿ ಪರಿಮಳ ನಾಗಪ್ಪ ಮಾತನಾಡಿದರು. ರಾಷ್ಟ್ರೀಯ ಒಬಿಸಿ ಮೋರ್ಚಾಗಳ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಗಲ ಶಿವಕುಮಾರ್, ನಾಗಶ್ರೀ, ನಾರಾಯಣಪ್ರಸಾದ್, ನಗರಸಭಾ ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ಪಿ. ಸುಧಾ, ಹಾಸನ ಪ್ರಭಾರಿ ನಿಜಗುಣರಾಜು, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಜಯಸುಂದರ್, ಎಸ್ಸಿ ಮೋರ್ಚಾ ಅಧ್ಯಕ್ಷ ಕಿನಕಹಳ್ಳಿ ರಾಚಯ್ಯ ಇತರರು ಇದ್ದರು.
‘ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ’
ನಾನು ಸಚಿವ ಸ್ಥಾನ ಕೇಳಿಲ್ಲ. ಆದರೆ, ಕೊಟ್ಟರೆ ನಿಭಾಯಿಸುವೆ. ಮಂತ್ರಿ ಹುದ್ದೆ ಸಿಕ್ಕಿದರೆ ವೇಗವಾಗಿ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಎನ್.ಮಹೇಶ್ ಅವರು ತಿಳಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಸಿಗುತ್ತದೆಯೇ ಎಂಬುದನ್ನು ನೀವು ಮುಖ್ಯಮಂತ್ರಿ ಅವರನ್ನು ಕೇಳಬೇಕು’ ಎಂದರು.
ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ವಿ.ಶ್ರೀನಿವಾಸ ಪ್ರಸಾದ್ ಗೈರಾಗಿರುವ ಬಗ್ಗೆ ಕೇಳಿದ್ದಕ್ಕೆ. ‘ಸೋಮಣ್ಣ ಅವರ ಗಮನಕ್ಕೆ ತಂದೇ ಕಾರ್ಯಕ್ರಮ ಆಯೋಜಿಸಲಾಗಿದೆ. ಬರುವುದಕ್ಕೆ ಆಗುತ್ತಿಲ್ಲ. ನೀವು ಕಾರ್ಯಕ್ರಮ ನಡೆಸಿ ಎಂದು ಹೇಳಿದ್ದಾರೆ. ಶ್ರೀನಿವಾಸ ಪ್ರಸಾದ್ ಅವರು ಅನಾರೋಗ್ಯದ ಕಾರಣಕ್ಕೆ ಬಂದಿಲ್ಲ’ ಎಂದು ಮಹೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.