ಕೊಳ್ಳೇಗಾಲ: ಸುಮಾರು ಒಂದು ವರ್ಷದಿಂದ ಖಾಲಿ ಉಳಿದಿದ್ದ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸರ್ಕಾರ ಕೊನೆಗೂ ಮೀಸಲಾತಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನದ ಆಕಾಂಕ್ಷಿಗಳು ಗದ್ದುಗೆ ಏರಲು ತೆರೆಮರೆಯಲ್ಲಿ ಚಟುವಟಿಕೆ ಆರಂಭಿಸಿದ್ದಾರೆ.
ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ. ಮೀಸಲಾತಿಗೆ ಅನುಗುಣವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಅರ್ಹತೆ ಹೊಂದಿರುವವರು ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ: ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು ಪ್ರಸ್ತುತ 12 ಕಾಂಗ್ರೆಸ್, 13 ಬಿಜೆಪಿ, 4 ಪಕ್ಷೇತರ, 2 ಬಿಎಸ್‌ಪಿ ಸದಸ್ಯರು ಇದ್ದಾರೆ. ಕ್ಷೇತ್ರದ ಸಂಸದ ಸುನಿಲ್ ಬೋಸ್ ಹಾಗೂ ಶಾಸಕ ಎಆರ್ ಕೃಷ್ಣಮೂರ್ತಿ ಅವರಿಗೂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡುವ ಅರ್ಹತೆ ಇರುವುದರಿಂದ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯಬೇಕಾದರೆ 17ರ ಮ್ಯಾಜಿಕ್ ನಂಬರ್ ತಲುಪಬೇಕು.
ಯಾರಿಗೆ ಒಲಿಯಲಿದೆ ಅಧಿಕಾರ: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದಿದ್ದ ಎ.ಪಿ.ಶಂಕರ್, ಮನೋಹರ್, ಶಂಕರ್ ನಾರಾಯಣ ಗುಪ್ತ, ಕವಿತಾ ಮರಳಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ. ಇಬ್ಬರು ಬಿಎಸ್‌ಪಿ ಅಭ್ಯರ್ಥಿಗಳು ಕೂಡ ಕಳೆದ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. ಕಳೆದ ಬಾರಿಯಂತೆ ಈ ಬಾರಿಯೂ ನಡೆದರೆ ಕಾಂಗ್ರೆಸ್ ಸುಲಭವಾಗಿ ನಗರಸಭೆಯ ಅಧಿಕಾರ ಹಿಡಿಯಲಿದೆ.
ಕಾಂಗ್ರೆಸ್‌ನ ಸದ್ಯದ ಬಲ 12 ಇದ್ದು, ನಾಲ್ವರು ಪಕ್ಷೇತ್ತರರು, ಇಬ್ಬರು ಬಿಎಸ್‌ಪಿ, ಸಂಸದರು ಹಾಗೂ ಶಾಸಕರ ತಲಾ ಒಂದು ಮತಗಳು ಸೇರಿ ಕಾಂಗ್ರೆಸ್‌ನ ಬಲಾಬಲ 20 ಮುಟ್ಟಲಿದೆ. ಜತೆಗೆ, ಬಿಜೆಪಿಯ ಕೆಲವರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಬಹುದು ಎನ್ನಲಾಗುತ್ತಿದೆ.
ಮತ್ತೊಂದೆಡೆ, ಕಾಂಗ್ರೆಸ್‌ನ ಲೆಕ್ಕಾಚಾರಗಳು ತಲೆಕೆಳಗಾಗಿ ನಾಲ್ವರು ಪಕ್ಷೇತರರು, ಬಿಎಸ್‌ಪಿಯ ಇಬ್ಬರು ಸದಸ್ಯರ ಬೆಂಬಲವನ್ನು ಬಿಜೆಪಿ ಪಡೆದುಕೊಂಡರೆ ಬಲಾಬಲ 19ಕ್ಕೆ ಮುಟ್ಟಲಿದ್ದು ನಗರಸಭೆಯಲ್ಲಿ ಕಮಲ ಅರಳಬಹುದು.
ನಾಲ್ವರು ಪ್ರಬಲ ಆಕಾಂಕ್ಷಿಗಳು: ಕಳೆದ ಬಾರಿ ರೇಖಾ ನಗರಸಭೆಯ ಅಧ್ಯಕ್ಷೆಯಾಗಿದ್ದರು. ಈ ಬಾರಿಯೂ ಅವರ ಹೆಸರು ಅಧ್ಯಕ್ಷೆ ಸ್ಥಾನಕ್ಕೆ ಮುಂಚೂಣಿಯಲ್ಲಿದೆ. ಮೀಸಲಾತಿ ಅನ್ವಯ ಕಾಂಗ್ರೆಸ್‌ನ ಪುಷ್ಪಲತಾ, ಭಾಗ್ಯ ಹಾಗೂ ಜಯಮರಿ ಹೆಸರುಗಳು ಮುನ್ನಲೆಯಲ್ಲಿವೆ. ಆಕಾಂಕ್ಷಿಗಳು ಈಗಾಗಲೇ ಬೆಂಬಲಿಗರ ಜತೆಗೂಡಿ ಶಾಸಕರು, ಸಂಸದರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು ಒಟ್ಟಾರೆ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದೆ. ಜತೆಗೆ ಆಕಾಂಕ್ಷಿಗಳು ಅಧಿಕಾರಕ್ಕಾಗಿ ಟೆಂಪಲ್ ರನ್ ಕೂಡ ಆರಂಭಿಸಿದ್ದಾರೆ.
ನಿಟ್ಟುಸಿರು ಬಿಟ್ಟ ಜನರು: ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗದೆ ಕಳೆದ ಒಂದು ವರ್ಷದಿಂದಲೂ ನಗರಸಭೆಯಲ್ಲಿ ಸಮರ್ಪಕವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿತ್ತು. ಯಾವುದೇ ಕೆಲಸ ಮಾಡಿಕೊಡಲು ಕೇಳಿದರೆ ಅಧ್ಯಕ್ಷರು, ಉಪಾಧ್ಯಕ್ಷರು ಇಲ್ಲ ಎಂಬ ಸಬೂಬುಗಳನ್ನು ಅಧಿಕಾರಿಗಳು ನೀಡುತ್ತಿದ್ದರು.
ಇದೀಗ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿಯಾಗಿರುವುದರಿಂದ ಮುಂದಾದರೂ ನಗರಸಭೆಯಲ್ಲಿ ಸಾರ್ವಜನಿಕರ ಯಾವ ಕೆಲಸಗಳು ತ್ವರಿತಗತಿಯಲ್ಲಿ ನಡೆಯಬಹುದು ಎಂಬ ನಿರೀಕ್ಷೆಯಲ್ಲಿ ಜನರು ಇದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ ಲೇಔಟ್‌ಗಳ ಹಾಗೂ ಅಕ್ರಮ ಖಾತೆಗಳ ನಿರ್ಮಾಣವಾಗಿದ್ದು, ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿದ್ದವರಿಗೆ ಖಾತೆಗಳನ್ನು ಮಾಡಿಕೊಡಲಾಗುತ್ತಿಲ್ಲ. ಅಧಿಕಾರಿಗಳು ನಿಯಮ ಮುಂದಿಟ್ಟು ಮಾತನಾಡುತ್ತಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ದೆಯಾದರೆ ಸಮಸ್ಯೆಗಳು ಬಗೆಹರಿಯಬಹುದು ಎಂದು ಸಾರ್ವಜನಿಕ ಸುರೇಶ್ ಪ್ರಜಾವಾಣಿಗೆ ತಿಳಿಸಿದರು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಬಂಧ ಪ್ರತಿಕ್ರಿಯೆ ಪಡೆಯಲು ಬಿಜೆಪಿ ನಗರ ಮಂಡಲ ಅಧ್ಯಕ್ಷ ಪರಮೇಶ್ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ.
ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ಹಾಗೂ ಬಿ.ರಾಜಯ್ಯ ಅವರ ಸ್ಮಾರಕ ಉದ್ಘಾಟನೆ ಕಾರ್ಯಕ್ರಮ ಮುಕ್ತಾಯವಾದ ಬಳಿಕ ಸದಸ್ಯರ ಜೊತೆ ಸಭೆ ನಡೆಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಿರ್ಧಾರ ಮಾಡಲಾಗುವುದುತೋಟೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕೊಳ್ಳೇಗಾಲ ನಗರಸಭೆ ಬಲಾಬಲ
ಒಟ್ಟು ವಾರ್ಡ್‌ಗಳು: 31
ಕಾಂಗ್ರೆಸ್: 12
ಬಿಜೆಪಿ: 13
ಪಕ್ಷೇತರ: 4
ಬಿಎಸ್‌ಪಿ: 2
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.