ಕೊಳ್ಳೇಗಾಲ/ಚಾಮರಾಜನಗರ: ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳ ಹೊರ ಹರಿವು ಹೆಚ್ಚಳವಾಗಿರುವುದರಿಂದ ಕಾವೇರಿ ನದಿಯಲ್ಲಿ ನೀರು ಹರಿಯಲು ಆರಂಭಿಸಿದ್ದು, ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯಲ್ಲಿ ನೀರಿನ ಮಟ್ಟದಲ್ಲಿ ಕೊಂಚ ಹೆಚ್ಚಳವಾಗಿದೆ.
ಕೇರಳದ ವಯನಾಡು, ರಾಜ್ಯದ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಾಲ್ಕೈದು ದಿನಗಳಿಂದ ಭಾರಿ ಮಳೆಯಾಗುತ್ತಿರುವುದರಿಂದ ಎರಡೂ ಜಲಾಶಯಗಳ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಇದರಿಂದಾಗಿ ಹೊರಹರಿವಿನಲ್ಲೂ ಏರಿಕೆಯಾಗಿದೆ.
ಬುಧವಾರ ರಾತ್ರಿ ಹೊತ್ತಿಗೆ ಕಬಿನಿ ಜಲಾಶಯದ ಹೊರಹರಿವು 21 ಸಾವಿರ ಕ್ಯುಸೆಕ್ ಇದ್ದರೆ, ಕೆಆರ್‌ಎಸ್‌ನಿಂದ 5,238 ಕ್ಯುಸೆಕ್ ನೀರು ಹೊರ ಬರುತ್ತಿದೆ.
ಕೊಳ್ಳೇಗಾಲ ತಾಲ್ಲೂಕಿನಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಬುಧವಾರ ಬೆಳಗ್ಗೆಯಿಂದ ನಸುಗೆಂಪು ನೀರು ಹರಿಯಲು ಆರಂಭವಾಗಿದ್ದು, ವೇಗದಿಂದ ಸಾಗುತ್ತಿದೆ. ನೀರಿನ ಹರಿವು ಇನ್ನಷ್ಟು ಹೆಚ್ಚಾದರೆ, ಪ್ರಸಿದ್ಧ ಪ್ರವಾಸಿ ಸ್ಥಳ ಭರಚುಕ್ಕಿ ಜಲಪಾತದ ಕಳೆ ಹೆಚ್ಚಾಗಲಿದೆ.
ಮುಂಗಾರು ಕೊರತೆಯ ಕಾರಣಕ್ಕೆ ಜೂನ್ ತಿಂಗಳು ಪೂರ್ತಿ ಮಳೆಯಾಗಿರಲಿಲ್ಲ. ನದಿಯಲ್ಲಿ ನೀರಿನ ಹರಿವು ಬಹುತೇಕ ನಿಂತಿತ್ತು. ಭರಚುಕ್ಕಿ ಜಲಪಾತದಲ್ಲಿ ಸಣ್ಣ ನೀರಿನ ಝರಿ ಕೊರಕಲು ಕಲ್ಲುಗಳ ನಡುವೆ ಬೀಳುತ್ತಿತ್ತು. ಇದರಿಂದ ಪ್ರವಾಸಿಗರು ನಿರಾಸೆ ಅನುಭವಿಸಿದ್ದರು. ಈ ವಾರಾಂತ್ಯದ ಹೊತ್ತಿಗೆ ನೀರಿನ ಹರಿವು ಹೆಚ್ಚುವ ನಿರೀಕ್ಷೆ ಇದ್ದು, ಜಲಪಾತ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇದೆ.
‘ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿರುವ ಕಾರಣ ನದಿ ತೀರದ ಗ್ರಾಮಸ್ಥರು ಅನವಶ್ಯಕವಾಗಿ ನದಿ ತೀರಕ್ಕೆ ಹಾಗೂ ನದಿಯಲ್ಲಿ ಈಜಲು ಹೋಗಬಾರದು’ ಎಂದು ಉಪ ವಿಭಾಗಾಧಿಕಾರಿ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲೆಯಲ್ಲಿ ಮುಂದುವರಿದ ಸೋನೆ ಮಳೆ: ಈ ಮಧ್ಯೆ, ಜಿಲ್ಲೆಯಾದ್ಯಂತ ಬುಧವಾರವೂ ಮೋಡ ಕವಿದ ವಾತಾವರಣ, ಚಳಿ ಗಾಳಿ ಸೋನೆ ಮಳೆ ಮುಂದುವರಿಯಿತು. ಆಗಾಗ ಹದ ಮಳೆಯೂ ಆಯಿತು.
ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ 0.60 ಮಿ.ಮೀ ಮಳೆಯಾಗಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.