ADVERTISEMENT

ಕೊಳ್ಳೇಗಾಲ: ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿ ಕಿರಿಕಿರಿ

ಅವಿನ್ ಪ್ರಕಾಶ್
Published 21 ಜುಲೈ 2024, 4:57 IST
Last Updated 21 ಜುಲೈ 2024, 4:57 IST
<div class="paragraphs"><p>ಕೊಳ್ಳೇಗಾಲ ಸಮೀಪದ ಹಂಪಾಪುರ ಗ್ರಾಮದಲ್ಲಿ ಬೈಪಾಸ್ ರಸ್ತೆ ಕಾಮಗಾರಿ ನಡೆಯುತ್ತಿರುವುದು</p></div>

ಕೊಳ್ಳೇಗಾಲ ಸಮೀಪದ ಹಂಪಾಪುರ ಗ್ರಾಮದಲ್ಲಿ ಬೈಪಾಸ್ ರಸ್ತೆ ಕಾಮಗಾರಿ ನಡೆಯುತ್ತಿರುವುದು

   

ಕೊಳ್ಳೇಗಾಲ: ನಗರದ ಸುತ್ತಮುತ್ತ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ವಾಹನಗಳ ಸಂಚಾರಕ್ಕೆ ಕಿರಿಕಿರಿ ಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಚಾಮರಾಜನಗರದಿಂದ ಆರಂಭ ವಾದ ಬೈಪಾಸ್ ರಸ್ತೆ ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ, ಹನೂರು ಮಾರ್ಗವಾಗಿ ಹಾದುಹೋಗಿದ್ದು ಹೆದ್ದಾರಿಯ ಕಾಮಗಾರಿ ಪೂರ್ಣ ಗೊಂಡಿಲ್ಲವಾದರೂ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕಾಮಗಾರಿಯೂ ಕಳಪೆಯಿಂದ ಕೂಡಿದೆ ಎಂದು ರೈತ ಮುಖಂಡರು ದೂರಿದ್ದಾರೆ.

ADVERTISEMENT

ಕೊಳ್ಳೇಗಾಲ, ಅಗರ, ಮಾಂಬಳ್ಳಿ, ಯಳಂದೂರು, ಸಂತೇಮರಹಳ್ಳಿ ಬೈಪಾಸ್ ರಸ್ತೆಗಳ ಕಾಮಗಾರಿ ಪ್ರಗತಿ ಯಲ್ಲಿದ್ದು, ಈ ಮಾರ್ಗದಲ್ಲಿ ಮುಖ್ಯ ಪಟ್ಟಣಗಳು, 3 ಮುಖ್ಯ ಸೇತುವೆ, 12 ಸಣ್ಣ ಸೇತುವೆ, ರೈಲ್ವೆ ಮೇಲ್ಸೇತುವೆ ಗುರುತಿಸಲಾಗಿದ್ದು ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಜನರಿಗೆ ತೊಂದರೆ ಉಂಟಾಗುತ್ತಿದೆ.

ಕಾಮಗಾರಿಗೆ ಕೆರೆ ಮಣ್ಣು ಬಳಕೆ: ಹಂಪಾಪುರ ಗ್ರಾಮದ ಮುಖ್ಯರಸ್ತೆಯ ಸೇತುವೆಗೆ ಅಡಿಪಾಯ ಸರಿಯಾಗಿ ಹಾಕಿಲ್ಲ. ಗುಣಮಟ್ಟವಿಲ್ಲದ ಕಳಪೆ ಮಣ್ಣು ಸುರಿಯಲಾಗಿದೆ ಎಂಬ ದೂರುಗಳು ವ್ಯಾಪಕವಾಗಿವೆ. ಸೇತುವೆಯ ಮೇಲ್ಭಾಗ ದಲ್ಲಿ ಹಳ್ಳಗುಂಡಿಗಳು ಉಂಟಾಗಿ ಮಳೆಯ ನೀರು ನಿಲ್ಲುತ್ತಿದೆ. ಸೇತುವೆಯ ಎರಡು ಕಡೆಗಳಲ್ಲಿ ಸುರಿದಿರುವ ಮಣ್ಣು ಕುಸಿಯುತ್ತಿದೆ.

ಮಳೆಗಾಲ ಆರಂಭ ವಾಗಿರುವುದರಿಂದ ಸೇತುವೆ ಎತ್ತರ ದಿನ ದಿಂದ ದಿನಕ್ಕೆ ಕುಸಿಯ ತೊಡಗಿದೆ. ಉತ್ತಂಬಳ್ಳಿ ಗ್ರಾಮದಿಂದ ನರಿಪುರ ಗ್ರಾಮ ದವರೆಗೆ ಮಾಡಿರುವ ಬೈಪಾಸ್ ರಸ್ತೆಗೆ ಕೆರೆಯ ಮಣ್ಣನ್ನು ಬಳಸಿ ರಸ್ತೆಯನ್ನು ಎತ್ತರಿಸಿದ್ದಾರೆ. ಆದರೆ, ಈ ಮಣ್ಣು ಯೋಗ್ಯವಾಗಿಲ್ಲ. ರಸ್ತೆ ಎತ್ತರವಾಗ ಬೇಕಾದರೆ ಗ್ರಾವ್ಯೆಲ್ ಮಣ್ಣನ್ನು ಬಳಕೆ ಮಾಡಬೇಕು.

ಆದರೆ, ಗುತ್ತಿಗೆದಾರರು ಹಾಗೂ ಕಾಮಗಾರಿ ನಡೆಸುತ್ತಿರುವವರು ಕೆರೆಯ ಮಣ್ಣನ್ನು ಬಳಸಿದ್ದಾರೆ. ಕೆಳಭಾಗದಲ್ಲಿ ಕೆರೆ ಮಣ್ಣನ್ನು ಬಳಸಿ ಮೇಲ್ಭಾಗದಲ್ಲಿ ಜೇಡಿಮಣ್ಣನ್ನು ಬಳಸುತ್ತಿದ್ದಾರೆ. ಹಾಗಾಗಿ ರಸ್ತೆ ಮಾಡಿದರೂ ಪ್ರಯೋಜನವಿಲ್ಲ. ಎರಡರಿಂದ ಮೂರು ವರ್ಷದವರೆಗೆ ಈ ರಸ್ತೆ ಕುಸಿಯುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ರಸ್ತೆಯ ಮೇಲೆ ಡಾಂಬಾರು ಹಾಕಿದ್ದು ಬಾರಿ ವಾಹನಗಳು ಓಡಾಡಿರುವುದರಿಂದ ರಸ್ತೆಯು ಹಳ್ಳ ಬಿದ್ದಿದೆ. ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ರಸ್ತೆಯನ್ನು ಪರಿಶೀಲಿಸಿ, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ರೈತ ಸಂಘದಿಂದ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ದಶರಥ್‌ ‘ಪ್ರಜಾವಾಣಿ’ ಮೂಲಕ ಎಚ್ಚರಿಕೆ ನೀಡಿದರು.

ಸುರಕ್ಷತಾ ಕ್ರಮ ಕೈಗೊಂಡಿಲ್ಲ

ಬೈಪಾಸ್ ರಸ್ತೆಗಳಲ್ಲಿ ನಾಮಫಲಕ ಅಳವಡಿಸಿಲ್ಲ. ರಸ್ತೆ ಉಬ್ಬು ಹಾಕಿಲ್ಲ. ಪಟ್ಟಣ ಪ್ರದೇಶಗಳ ಸುತ್ತಮುತ್ತ ಹೊಲ, ಗದ್ದೆಗಳಲ್ಲಿ ಕೃಷಿಕರು ದುಡಿಯುತ್ತಿದ್ದು, ಫಸಲನ್ನು ಸಾಗಣೆ ಮಾಡಲು, ಜನ, ಜಾನುವಾರುಗಳು ಸುರಕ್ಷಿತವಾಗಿ ಮನೆಗೆ ಹೋಗುವಂತಹ ವ್ಯವಸ್ಥೆ ಕಲ್ಪಿಸಬೇಕು.

‘ಪ್ರಾಣಿಗಳು ಹೆದ್ದಾರಿ ಹತ್ತದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿ ಬಸ್ ತಂಗುದಾಣ, ಶೌಚಾಲಯ, ನೀರು ಮತ್ತಿತರ ಸೌಲಭ್ಯಗಳಿಗೆ ಒತ್ತು ನೀಡಬೇಕು. ಬೈಪಾಸ್ ರಸ್ತೆಯಲ್ಲಿ ಹಲವು ಹಳ್ಳಿಗಳು ಸಿಗಲಿದ್ದು, ಅಲ್ಲಿನ ಜನರ ಸುರಕ್ಷತೆಗೆ ಒತ್ತು ನೀಡಬೇಕು’ ಎಂದು ರೈತ ಜೈ ಶಂಕರ್ ಒತ್ತಾಯಿಸಿದರು.

ಅರ್ಧ ಗಂಟೆ ಪ್ರಯಾ

‘ಹೆದ್ದಾರಿ ಮೂಲಕ ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ 40 ಕಿ.ಮೀ. ಅಂತರವನ್ನು ಕೇವಲ 30ರಿಂದ 35 ನಿಮಿಷದಲ್ಲಿ ತಲುಪಬಹುದು. ಬಸ್, ಕಾರು ಮತ್ತು ದ್ವಿ ಚಕ್ರವಾಹನಗಳಲ್ಲಿ ಸಂಚರಿಸಿದರೆ ಸಮಯ ಮತ್ತು ಇಂಧನ ಉಳಿತಾಯ ಆಗಲಿದೆ. 100ರಿಂದ 150 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವವರು ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ವ್ಯಾಪಾರ–ವ್ಯವಹಾರ, ಉದ್ಯೋಗ, ಶಾಲಾ-ಕಾಲೇಜು, ಆಸ್ಪತ್ರೆಗೆ ಸುಲಭವಾಗಿ ತಲುಪಬಹುದು’ ಎಂದು ಪ್ರಯಾಣಿಕ ನಾಗಮಲ್ಲು ತಿಳಿಸಿದರು.

ರೈತರಿಗೆ ಸಿಗದ ಪರಿಹಾರ ಹಣ

‘ಬೈಪಾಸ್ ರಸ್ತೆ ನಿರ್ಮಾಣಕ್ಕೆ ರೈತರ ಜಮೀನುಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಡೆದುಕೊಂಡಿದ್ದು ಕೆಲ ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ. ಇನ್ನೂ ಕೆಲವರಿಗೆ ಇದುವರೆಗೂ ಹಣ ಸಿಕ್ಕಿಲ್ಲ. ಕೆಲವರಿಗೆ ಪರಿಹಾರದ ಅರ್ಧ ಹಣ ತಲುಪಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಗಮನಹರಿಸುತ್ತಿಲ್ಲ. ಹಣ ನೀಡದಿದ್ದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ರೈತ ನಾಗರಾಜು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.