ADVERTISEMENT

ಸಾವಿನಲ್ಲೂ ಬಿಎಸ್‌ವೈ ತಾರತಮ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಆರೋಪ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 15:30 IST
Last Updated 29 ಜುಲೈ 2021, 15:30 IST
ಆರ್.ಧ್ರುವನಾರಾಯಣ 
ಆರ್.ಧ್ರುವನಾರಾಯಣ    

ಚಾಮರಾಜನಗರ: ಜನರ ಸಾವಿನ ವಿಚಾರದಲ್ಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿಯವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಗುರುವಾರ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಯಡಿಯೂರಪ್ಪ ಅವರು ಶುಕ್ರವಾರ ಗುಂಡ್ಲುಪೇಟೆಗೆ ಬರುತ್ತಿದ್ದಾರೆ. ಅವರು ಸಾಂತ್ವನ ಹೇಳುವುದಕ್ಕೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ, ಜಿಲ್ಲೆಯಲ್ಲಿ ಕೋವಿಡ್‌ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡದೆ ಸರ್ಕಾರದ ನಿರ್ಲಕ್ಷ್ಯದಿಂದ 36 ಜನರು ಮೃತಪಟ್ಟಿದ್ದರು. ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಬಂದಿರಲಿಲ್ಲ. ಅಲ್ಲದೇ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನವನ್ನೂ ಹೇಳಲಿಲ್ಲ. ಸರಿಯಾದ ಪರಿಹಾರವನ್ನೂ ಕೊಟ್ಟಿಲ್ಲ. ಜನರ ಸಾವಿನಲ್ಲೂ ತಾರತಮ್ಯ ಮಾಡುತ್ತಿರುವುದು ನೋವಿನ ಸಂಗತಿ’ ಎಂದರು.

‘ಮುಖ್ಯಮಂತ್ರಿಯಾಗಿದ್ದವರ ಹೃದಯವಂತಿಕೆ ಎಲ್ಲರ ಬಗ್ಗೆಯೂ ಇರಬೇಕು. ಎಲ್ಲರ ಮೇಲೂ ಇರಬೇಕು. ಅಭಿಮಾನಿ ಎಂಬ ಹಣೆ ಪಟ್ಟಿ ಹೊಂದಿದದ್ದವರ ಮನೆಗೆ ಮಾತ್ರ ಭೇಟಿ ನೀಡಿ ಸಾಂತ್ವನ ಹೇಳುವುದು ದುರ್ದೈವದ ಸಂಗತಿ’ ಎಂದರು.

ADVERTISEMENT

‘ನೂತನ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರು ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದವರು. ಅವರಾದರೂ ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಬಹುದಿತ್ತು. ಆದರೆ, ಅವರೂ ಬರಲಿಲ್ಲ. ಇತ್ತೀಚೆಗೆ ಅವರ ಮನೆಯ ಸಾಕುನಾಯಿ ಮೃತಪಟ್ಟಾಗ ಅವರು ಕಣ್ಣೀರು ಹಾಕಿದ್ದರು. ಶ್ವಾನದ ಸಾವಿಗೆ ಮಿಡಿಯುವ ಹೃದಯ, ಮುಗ್ಧ ಜನರ ಸಾವಿಗೆ ಯಾಕೆ ಮಿಡಿಯಲಿಲ್ಲ’ ಎಂದು ಧ್ರುವನಾರಾಯಣ ಅವರು ಪ್ರಶ್ನಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್‌.ಸುರೇಶ್‌ ಕುಮಾರ್‌ ಅವರು ಕೂಡ ಬುಧವಾರ ಆತ್ಮಹತ್ಯೆ ಮಾಡಿಕೊಂಡ ಯಡಿಯೂರಪ್ಪ ಅವರ ಅಭಿಮಾನಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಆಮ್ಲಜನಕ ದುರಂತ ಸಂತ್ರಸ್ತರ ಮನೆಗೆ ಅವರು ಭೇಟಿ ನೀಡಿಲ್ಲ’ ಎಂದು ದೂರಿದರು.

ಮೌಢ್ಯಕ್ಕೆ ಜೋತು ಬಿದ್ದರು: ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ಜಿಲ್ಲೆಗೆ ಒಮ್ಮೆಯೂ ಬರಲಿಲ್ಲ. ಅಧಿಕಾರ ಹೋಗುತ್ತದೆ ಎಂಬ ಮೌಢ್ಯಕ್ಕೆ ಜೋತು ಬಿದ್ದಿದ್ದರು. ಇಲ್ಲಿಗೆ ಬಾರದೇ ಇದ್ದರೂ ಅವರು ಅಧಿಕಾರ ಕಳೆದುಕೊಂಡರು ಎಂದು ಧ್ರುವನಾರಾಯಣ ಅವರು ಟೀಕಿಸಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 12 ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಐದು ವರ್ಷಗಳನ್ನು ಪೂರೈಸಿದ್ದರು. ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಕಳಂಕವನ್ನು ಅವರು ತೊಡೆದುಹಾಕಿದ್ದರು’ ಎಂದರು.

ನ್ಯಾಯಾಲಯದ ಮೇಲೆ ವಿಶ್ವಾಸ: ‘ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸತ್ತಿದೆ. ಅದರಿಂದ ಆಮ್ಲಜನಕ ದುರಂತದ ಸಂತ್ರಸ್ತರಿಗೆ ಇವರಿ‌ಂದ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇಲ್ಲ. ಹೈಕೋರ್ಟ್‌ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖಾ ತಂಡವನ್ನು ನೇಮಿಸಿದೆ. ವಿಚಾರಣೆಯೂ ನಡೆಯುತ್ತಿದೆ. ತಾತ್ಕಾಲಿಕ ಪರಿಹಾರವನ್ನೂ ಕೊಡಿಸಿದೆ. ನ್ಯಾಯಾಲಯದಿಂದ ಸಂತ್ರಸ್ತರಿಗೆ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಪಿಸಿಸಿ ಸದಸ್ಯ ಸೈಯದ್‌ ರಫಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌, ಮಾಧ್ಯಮ ಕಾರ್ಯದರ್ಶಿ ಅರುಣ್‌ ಕುಮಾರ್ ಇದ್ದರು.

‘ಬೊಮ್ಮಾಯಿ ಒಳ್ಳೆಯ ಕೆಲಸ ಮಾಡಲಿ’

‘ಅಧಿಕಾರಿಗಳು ಈ ಹಿಂದಿನಂತೆ ‘ಚಲ್ತಾ ಹೈ’ ಎಂಬ ಮನೋಭಾವದಲ್ಲಿ ಕೆಲಸ ಮಾಡುವುದಕ್ಕೆ ತಾವು ಅವಕಾಶ ನೀಡುವುದಿಲ್ಲ ಎಂದು ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಆ ಮೂಲಕ ಹಿಂದಿನ ಸರ್ಕಾರದಲ್ಲಿ ಆಡಳಿತ ಸರಿಇರಲಿಲ್ಲ ಎಂದು ಅವರೇ ಒಪ್ಪಿಕೊಂಡಂತೆ ಆಗಿದೆ’ ಎಂದು ಧ್ರುವನಾರಾಯಣ ಅವರು ಟೀಕಿಸಿದರು.

‘ತಾವು ರಬ್ಬರ್‌ ಸ್ಟ್ಯಾಂಪ್‌ ಆಗುವುದಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ. ಈಗಷ್ಟೇ ಮುಖ್ಯಮಂತ್ರಿ ಆಗಿದ್ದಾರೆ. ಅದರ ಬಗ್ಗೆ ನಮಗೆ ಅಸೂಯೆ ಇಲ್ಲ. ಸಮಯ ಕೊಡೋಣ. ಒಳ್ಳೆಯ ಕೆಲಸ ಮಾಡಲಿ. ಅದಕ್ಕೆ ನಮ್ಮದೇನೂ ತಕರಾರಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಯಡಿಯೂರಪ್ಪ ಅವರು ಹೋರಾಟಗಾರ ಆಗಿರಬಹುದು. ಆದರೆ, ಉತ್ತಮ ಆಡಳಿತಗಾರ ಅಲ್ಲ. ಅವರ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಅವರ ಶಾಸಕರೇ ಈ ಆರೋಪ ಮಾಡಿದ್ದರು. ಅವರ ಮಗ ಹಾಗೂ ಕುಟುಂಬವನ್ನು ದೂರ ಇಟ್ಟು ಅವರು ಅಡಳಿತ ನಡೆಸಬೇಕಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.