ADVERTISEMENT

ಉದ್ಯೋಗ ತೊರೆದು ಕುರಿ ಸಾಕಣೆ

ಯಳಂದೂರು: ₹ 10 ಲಕ್ಷ ಬಂಡವಾಳ ಹೂಡಿಕೆ, ಮಿಶ್ರ ತಳಿ ಸಾಕಣೆಗೆ ಒತ್ತು, ಮಾಂಸ, ಗೊಬ್ಬರಕ್ಕೆ ಬೇಡಿಕೆ

ನಾ.ಮಂಜುನಾಥ ಸ್ವಾಮಿ
Published 20 ನವೆಂಬರ್ 2019, 19:45 IST
Last Updated 20 ನವೆಂಬರ್ 2019, 19:45 IST
ಸಾಕಿರುವ ಕುರಿಗಳೊಂದಿಗೆ ಉಮೇಶ್‌, ಶಾಂತರಾಜು
ಸಾಕಿರುವ ಕುರಿಗಳೊಂದಿಗೆ ಉಮೇಶ್‌, ಶಾಂತರಾಜು   

ಯಳಂದೂರು:ತಾಲ್ಲೂಕಿನ ವೈ.ಕೆ.ಮೋಳೆ ಗ್ರಾಮದ ಉಮೇಶ್ ಅವರು ಕೋಲಾರದಲ್ಲಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸದಲ್ಲಿದ್ದವರು. ಉದ್ಯೋಗ ತ್ಯಜಿಸಿ ಊರಿಗೆ ಹಿಂದಿರುಗಿರುವ ಅವರು, ಸ್ವಂತ ಭೂಮಿಯಲ್ಲಿ ಮಾಂಸದ ಕುರಿಗಳ ಸಾಕಣೆಯಲ್ಲಿ ತೊಡಗಿದ್ದಾರೆ. ₹ 10 ಲಕ್ಷ ಬಂಡವಾಳ ಹೂಡಿ ಮಿಶ್ರತಳಿಯ ಬಂಡೂರು ಕುರಿ ಪೋಷಣೆಯಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.

100 ಕುರಿಗಳು ವಾಸಿಸಲು ಶೀಟ್‌, ಹಲಗೆ ಬಳಸಿ 30x40 ಅಳತೆಯ ಎತ್ತರದ ಮನೆ ನಿರ್ಮಿಸಿದ್ದಾರೆ. ತಳಭಾಗದಲ್ಲಿ ಕಸ ಮತ್ತು ಹಿಕ್ಕೆ ಉದುರಿ ಹೋಗಲು ವ್ಯವಸ್ಥೆ ಇದೆ. ಬೆಳಕು ಮತ್ತು ಗಾಳಿ ಬರಲು ಸ್ಥಳಾವಕಾಶ ಇದೆ.

ತಾಕಿನಲ್ಲಿ ಬೆಳೆಸಿದ ಜೋಳದ ಸಸಿ, ಅಗಸೆ, ಹುಲ್ಲನ್ನು ಯಂತ್ರದ ಮೂಲಕ ಕಟಾವು ಮಾಡಲಾಗುತ್ತದೆ. ರಸ ಮೇವನ್ನು ತಯಾರು ಮಾಡಲು ಅವಕಾಶ ಇಲ್ಲಿದೆ. ಹಿಂಡಿ, ಬೂಸ ಸೇರಿದಂತೆ ಅಗತ್ಯ ಪೊಷಕಾಂಶಗಳನ್ನು ಕುರಿಗಳಿಗೆ ಪೂರೈಸಲಾಗುತ್ತದೆ.

ADVERTISEMENT

ಬೆಲೆ–ಬೇಡಿಕೆ: ‘ಬಂಡೂರಿನಲ್ಲಿ 4 ತಿಂಗಳ ಕುರಿಗೆ ₹ 5,000 ಬೆಲೆ ಇದೆ. ಕುರಿ 10–12 ತಿಂಗಳಲ್ಲಿ 25–30 ಕೆಜಿ ತನಕ ತೂಗುತ್ತವೆ. ವಾರ್ಷಿಕ ಪ್ರತಿ ಕುರಿಗೆ ₹ 3,000 ಸಾವಿರ ತನಕ ಖರ್ಚು ಬರುತ್ತದೆ. ಗುಣಮಟ್ಟದ ಮಾಂಸ ಮತ್ತು ಕುರಿಯ ದೈಹಿಕ ಸ್ಥಿತಿ ಆಧರಿಸಿ ಮಧ್ಯವರ್ತಿಗಳು ₹ 15 ಸಾವಿರದಿಂದ ₹ 30 ಸಾವಿರದವರೆಗೆ ಬೆಲೆ ಕಟ್ಟುತ್ತಾರೆ’ ಎಂದು ಉಮೇಶ್ ಹೇಳುತ್ತಾರೆ.

‘ಬಂಡೂರು ಕುರಿ ಮಾಂಸ ಹೆಚ್ಚು ರುಚಿ. ಹಬ್ಬ, ಜಾತ್ರೆ, ಬೀಗರೂಟಗಳಲ್ಲಿ ಹೆಚ್ಚು ಬೇಡಿಕೆ ಇದೆ. ಕೆಲವರು ಮುಂಗಡ ನೀಡಿ ಕೊಂಡೊಯ್ಯುತ್ತಾರೆ. ಗಂಡು ಕುರಿಗಳಿಗೆ ಆದ್ಯತೆ. ಹಾಲು, ಉಣ್ಣೆ ಮತ್ತು ಗೊಬ್ಬರಕ್ಕೂ ಬೇಡಿಕೆ ಸಲ್ಲಿಸುತ್ತಾರೆ’ ಎಂದು ಉಮೇಶ್‌ ಸಹೋದರ ಶಾಂತರಾಜು ಮಾಹಿತಿ ನೀಡಿದರು.

ಇವುಗಳ ಆರೋಗ್ಯ, ಬಾಧೆ ಕಂಡುಬಂದರೆ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಅವರು.

ಅಧಿಕಾರಿಗಳ ನೆರವು ಇಲ್ಲ: ‘ವಾರ್ಷಿಕ ಪ್ರತಿ ಕುರಿಗೆ ₹ 5,000 ಸರ್ಕಾರದ ಸಹಾಯಧನ ಲಭಿಸುತ್ತದೆ. ಆದರೆ, ಸಾಲ ಸೌಲಭ್ಯ ಮತ್ತು ಪ್ರೋತ್ಸಾಹ ನೀಡುವ ದಿಸೆಯಲ್ಲಿ ನಿರುದ್ಯೋಗಿಗಳಿಗೆ ನಿರಾಸೆಯೇ ಕಾದಿದೆ. ಹೀಗಾಗಿ, ಕೈಸಾಲ ಮಾಡಿ ಮಾಂಸದ ಕುರಿ ಸಾಕಣೆಯಲ್ಲಿ ತೊಡಗಿದ್ದೇನೆ. ಬ್ಯಾಂಕ್‌, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಮತ್ತು ಪಶುಪಾಲನಾ ಇಲಾಖೆಗಳ ಅಧಿಕಾರಿಗಳ ಸ್ಪಂದನೆ ಅಷ್ಟಕಷ್ಟೇ. ದಾಖಲೆ ಒದಗಿಸಲು ಹಲವಾರು ತಿಂಗಳು ಅಲೆಸುತ್ತಾರೆ. ರೋಗ–ರುಜಿನ ಬಂದಾಗ ಪಶು ಇಲಾಖೆ ನೆರವು ಪಡೆಯಲು ಕಷ್ಟಪಡಬೇಕಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಉಮೇಶ್.

ಬಂಡೂರು: 8 ಜಾತಿ ಒಂದೇ ತಳಿ

ಮಾಂಸಪ್ರಿಯರ ಬಾಯಲ್ಲಿ ನೀರೂರಿಸುವ ಬಂಡೂರು ತಳಿಯ ಕುರಿಯಲ್ಲೂ 8 ಜಾತಿಗಳಿವೆ. ಗಿಡ್ಡಕಾಲು, ಅಗಲ ಶರೀರ, ದಟ್ಟರೋಮ, ಕೊರಳುಮಾಲೆ, ಸಣ್ಣ ತಲೆ, ಕೊಂಬಿಲ್ಲದಿರುವುದು ಬಂಡೂರು ಕುರಿಗಳ ಲಕ್ಷಣ. ಆದರೆ, ಬಂಡೂರು ಮಿಶ್ರ ತಳಿಗಳೇ ಹೆಚ್ಚು ಜನಪ್ರಿಯ.

‘ಕಪನಿ, ಹುಚ್ಚು, ಕೋನ್ನಾರೆ, ಸೀರಿ, ಊಡು, ಹೊಟ್ಟೆನೋವು, ಕರಿಗಿ, ದೊಡ್ಡಿ ಎಂಬ ಜಾತಿಗಳಿವೆ. ಈ ತಳಿ ಹಂಪಿ ಸಾಮ್ರಾಜ್ಯದ ಕಾಲದಿಂದಲೂ ಪ್ರಸಿದ್ಧಿ ಪಡೆದಿವೆ. ಮಾಂಸ ಬಲುರುಚಿ ಎಂಬ ಕಾರಣಕ್ಕೆ ಈ ಕುರಿಗಳು ಅವಸಾನದ ಅಂಚು ತಲುಪಿವೆ. ಈಗ ಇಡಿ ಜಗತ್ತಿನಲ್ಲಿ ಶುದ್ಧ ತಳಿಯ 3,000 ಕುರಿಗಳು ಉಳಿದಿವೆ ಎನ್ನಲಾಗಿದೆ. ಹೀಗಾಗಿ, ಮುಂದೆ ತಳಿ ಸಂರಕ್ಷಣೆಗೂ ಒತ್ತು ನೀಡಬೇಕು’ ಎಂಬ ಕಳಕಳಿ ಉಮೇಶ್ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.